ಬೆಂಗಳೂರು: ಮೇ.23ರಿಂದ ಮಾವು ಹಲಸಿನ ಮೇಳ
ಬೆಂಗಳೂರು, ಮೇ.12: ನಗರದ ಲಾಲ್‌ಬಾಗ್‌ನಲ್ಲಿ ಮೇ. 23ರಿಂದ ಒಂದು ತಿಂಗಳವರೆಗೆ ರಾಸಾಯನಿಕ ಮುಕ್ತ ಮಾವು ಹಾಗೂ ಹಲಸಿನ ಹಣ್ಣುಗಳ ಮೇಳವನ್ನು ಆಯೋಜಿಸಲಾಗಿದೆ.
ಬೆಳೆಗಾರರು ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕ ಕಲ್ಪಿಸಲು ರಾಜ್ಯ ತೋಟಗಾರಿಕಾ ಇಲಾಖೆ ಈ ಮೇಳವನ್ನು ಆಯೋಜಿಸಿದೆ.ರಾಸಾಯನಿಕ ಮುಕ್ತ ತಾಜಾ ಹಣ್ಣುಗಳು ನ್ಯಾಯಯುತ ಬೆಲೆಗೆ ಸಿಗುವಂತೆ ಮಾಡುವುದು ಮೇಳದ ಮುಖ್ಯ ಉದ್ದೇಶ.
ಲಾಲ್‌ಬಾಗ್‌ನ ಗಾಜಿನಮನೆ ಮುಂಭಾಗದಲ್ಲಿ ನಡೆಯುವ ಮೇಳದಲ್ಲಿ ಸುಮಾರು 12 ಬಗೆಯ ವಾಣಿಜ್ಯ ಮಾವಿನ ತಳಿಗಳು, ಲಾಲ್‌ಬಾಗ್‌ನಲ್ಲೇ ಬೆಳೆದಿರುವ 20 ಬಗೆಯ ಪಾರಂಪರಿಕ ಮಾವಿನ ತಳಿಗಳು, ಜೊತೆಗೆ ಉಪ್ಪಿನಕಾಯಿಗೆ ಬಳಸುವ ಮಿಡಿ ಮಾವುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಸಲಾಗಿದೆ.

ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ(ಐಐಎಚ್‌ಆರ್), ಜಿಕೆವಿಕೆ ಸಂಶೋಧಿಸಿದ ಹಲಸಿನ ತಳಿಗಳು, ರೈ ತರು ಬೆಳೆದ ನಾನಾ ರೀತಿಯ ಹಲಸಿನ ತಳಿಯ ಹಣ್ಣುಗಳನ್ನು ಮಾರಾಟ ಇಲ್ಲಿ ನಡೆಯಲಿದೆ.
ರಾಸಾಯನಿಕ ಬಳಸದೇ ಸಹಜವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾತ್ರ ಮೇಳದಲ್ಲಿ ಮಾರಾಟ ಮಾಡಲಾಗುವುದು. ಒಂದು ವೇಳೆ ರೈತರು ಮೋಸ ಮಾಡಿ ರಾಸಾಯನಿಕ ಬಳಸಿ ಮಾವನ್ನು ಹಣ್ಣು ಮಾಡಿದ್ದರೆ, ಅಂತಹ ಹಣ್ಣುಗಳ ಮಾರಾಟವನ್ನು ಸಂಪೂರ್ಣ ನಿಷೇಧಿಸಿದಲಾಗಿದೆ. ಮಾರಾಟಗಾರರಿಗೆ ಈಗಾಗಲೇ ಈ ಸೂಚನೆ ನೀಡಿದ್ದು ಸೂಚನೆ ಉಲ್ಲಂಘಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಇದೇ ಸಂದರ್ಭದಲ್ಲಿ ಮಾವು ಬೆಳೆಗೆ ಸಂಬಂಧಿಸಿದಂತೆ ವಿಚಾರ ಸಂಕಿರಣ ನಡೆಯಲಿದ್ದು, ಮಾವು ಉತ್ಪಾದನೆ ಮತ್ತು ಕೊಯ್ಲು ನಿರ್ವಹಣೆಗೆ ಸಂಬಂಧಿಸಿದಂತೆ ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ತೋಟಗಾರಿಕಾ ಇಲಾಖೆ ಹೇಳಿದೆ.











Click it and Unblock the Notifications