ಮದುವೆಯಾಗಲು ಒಪ್ಪದ ಅಕ್ಕನ ತಲೆ ಬೋಳಿಸಿದ!
ಬೆಂಗಳೂರು, ಆ.12 : ತನ್ನ ಸ್ನೇಹಿತನನ್ನು ಮದುವೆಯಾಗಲು ಅಕ್ಕ ನಿರಾಕರಿಸಿದ್ದರಿಂದ ಕೋಪಗೊಂಡ ತಮ್ಮ ಆಕೆಯ ತಲೆಗೂದಲು ಕತ್ತರಿಸಿದ ಅಮಾನವೀಯ ಘಟನೆ ಆರ್.ಟಿ.ನಗರದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದರನನ್ನು ಆರ್.ಟಿ.ನಗರ ಪೊಲೀಸರು ಬಂಧಿಸಿದ್ದಾರೆ.
ಯುವತಿಯನ್ನು ಬಾರ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯ ಸಹೋದರ ಸಂತೋಷ್ ತನ್ನ ಸ್ನೇಹಿತ ಸುರೇಶ್ ನನ್ನು ಮದುವೆಯಾಗುವಂತೆ ಅಕ್ಕನಿಗೆ ಒತ್ತಾಯಿಸುತ್ತಿದ್ದ ಎಂದು ತಿಳಿದುಬಂದಿದೆ. ಇದಕ್ಕೆ ಆಕೆ ನಿರಾಕರಿಸಿದ್ದರಿಂದ ಇಬ್ಬರು ಸೇರಿ, ಆಕೆಯ ತಲೆಕೂದಲನ್ನು ಬೋಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಸಹೋದರ ಸಂತೋಷ್ ನನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸುರೇಶ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸಂತೋಷ್ ವರ್ತನೆ ಸರಿ ಇಲ್ಲದ ಕಾರಣ ಅವನನ್ನು ಪೋಷಕರು ಮನೆಯಿಂದ ಹೊರಹಾಕಿದ್ದರು ಎಂದು ತಿಳಿದುಬಂದಿದೆ.
ಸುರೇಶನಿಗೆ ಮದುವೆಯಾಗಿದೆ : ಸಂತೋಷ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಸುರೇಶನಿಗೆ ಈಗಾಗಲೇ ಮದುವೆಯಾಗಿದೆ. ಆದ್ದರಿಂದ ಯುವತಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು. ಇದರಿಂದ ಆಕೆಯ ತಮ್ಮನ ಸ್ನೇಹ ಸಂಪಾದಿಸಿದ ಸುರೇಶ್ ಆತನ ಮೂಲಕ ಯುವತಿಯನ್ನು ಒತ್ತಾಯಿಸುತ್ತಿದ್ದ.
ನೀನು ಕೆಲಸಕ್ಕೆ ಹೋಗಬಾರದು, ಬೇರೆ ಯಾರನ್ನು ಮದುವೆಯಾಗದೆ ಸುರೇಶ್ ನನ್ನು ಮದುವೆಯಾಗಬೇಕು ಎಂದು ಸಂತೋಷ್ ಯುವತಿಗೆ ಕಿರುಕುಳ ನೀಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಆಕೆ ಒಪ್ಪದಿದ್ದಾಗ, ಆಕೆಯ ತಲೆಯನ್ನು ಅರ್ಧ ಬೋಳಿಸಿದ್ದಾರೆ.












Click it and Unblock the Notifications