ಚಿಕಿತ್ಸೆಗಾಗಿ 10 ಲಕ್ಷ ಮಧ್ಯಂತರ ಪರಿಹಾರ ಕೊಡಲು ಸಾಧ್ಯವೇ?
ಬೆಂಗಳೂರು, ಜೂ. 09 : ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿ ಬಳಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಗಾಯಗೊಂಡ ಲಿಷಾಗೆ 10 ಲಕ್ಷ ಮಧ್ಯಂತರ ಪರಿಹಾರ ನೀಡಲು ಸಾಧ್ಯವೇ? ಎಂದು ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ಪ್ರಶ್ನಿಸಿದ್ದು, ಒಂದು ವಾರದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ.
ಲಿಷಾ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೋಮವಾರ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರ ಏಕಸದಸ್ಯ ಪೀಠ, ಮಧ್ಯಂತರ ಪರಿಹಾರ ನೀಡುವ ಕುರಿತು ಒಂದು ವಾರದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿ, ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಿದೆ. [ಕೋರ್ಟ್ ಮೊರೆ ಹೋದ ಮಲ್ಲೇಶ್ವರಂ ಸ್ಫೋಟದ ಗಾಯಾಳು]

ವಿದ್ಯಾರ್ಥಿನಿ ಲಿಷಾಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಅವರು ಮಧ್ಯಂತರ ಪರಿಹಾರ ಕೇಳುತ್ತಿದ್ದು, ಈ ಬಗ್ಗೆ ಸರ್ಕಾರದ ನಿಲುವು ಏನೆಂದು ಉತ್ತರ ನೀಡಿ ಎಂದು ಕೋರ್ಟ್ ಸೂಚನೆ ನೀಡಿದೆ. [ಮಲ್ಲೇಶ್ವರಂ ಸ್ಫೋಟ : ಗಾಯಾಳುವಿಗೆ ಸಿಎಂ ಪರಿಹಾರ]
1 ಕೋಟಿ ಪರಿಹಾರ ಕೇಳಿದ್ದಾರೆ : 2013ರ ಏ.17ರಂದು ಬೆಳಗ್ಗೆ ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸಂದರ್ಭದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಲಿಷಾ ಗಾಯಗೊಂಡಿದ್ದರು. ಕಬ್ಬಿಣದ ಚೂರುಗಳು ಅವರ ಎಡಗಾಲಿಗೆ ಹೊಕ್ಕಿತ್ತು.
ಇದುವರೆಗೂ ಅವರು ಸುಮಾರು 7 ಲಕ್ಷ ರೂ.ಗಳನ್ನು ಶಸ್ತ್ರ ಚಿಕಿತ್ಸೆಗಾಗಿ ಖರ್ಚು ಮಾಡಿದ್ದಾರೆ. ಆದರೆ, ಇನ್ನೂ ಗುಣಮುಖರಾಗಿಲ್ಲ. 1 ಕೋಟಿ ಪರಿಹಾರ ನೀಡಬೇಕು ಮತ್ತು ವಿಕಲಚೇತನ ಕೋಟಾದಡಿ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಭಯೋತ್ಪಾದಕ ದಾಳಿಗೆ ತುತ್ತಾದವರಿಗೆ ಪರಿಹಾರ ನೀಡಲು ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಅರ್ಜಿಯಲ್ಲಿ ಅವರು ಮನವಿ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆ ವೇಳೆಯೇ ಅವರು ಮಧ್ಯಂತರ ಪರಿಹಾರಕ್ಕಾಗಿ ಮನವಿ ಮಾಡಿದ್ದಾರೆ.












Click it and Unblock the Notifications