'ಮಹಾರಾಷ್ಟ್ರದಂತೆ ಬೆಂಗಳೂರಿನ ಜಿಬಿಎ ಚುನಾವಣೆಯಲ್ಲೂ ಬಿಜೆಪಿಗೆ ಜನಾಶೀರ್ವಾದ'
ಬೆಂಗಳೂರು: ಮಹಾರಾಷ್ಟ್ರದ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ 29 ಸ್ಥಳೀಯ ಚುನಾವಣೆಗಳಲ್ಲಿ ಬಿಜೆಪಿಗೆ ಬಹುಮತ ಬಂದಿದೆ. ತೀವ್ರ ಪೈಪೋಟಿ ನೀಡಿದ್ದ ಉದ್ಧವ್ ಠಾಕ್ರೆ ಮೈತ್ರಿಕೂಟ ಮತ್ತು ಕಾಂಗ್ರೆಸ್ ಅನ್ನು ಕೇಸರಿ ಪಡೆ ಸೋಲಿಸಿದೆ. ಈ ಹಿನ್ನೆಲೆ ಕರ್ನಾಟಕ ಬಿಜೆಪಿ ವಿಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಕೆಲವು ನಾಯಕರು ಹರ್ಷ ವ್ಯಕ್ತಪಡಿಸಿದರು. ಗೆದ್ದ ತಮ್ಮ ನಾಯಕರು, ಅಭ್ಯರ್ಥಿಗಳಿಗೆ ಇಲ್ಲಿಂದ ಶುಭಾಷಯ ತಿಳಿಸಿದರು.
ಮುಂಬೈ ಮಹಾನಗರದ ಜನತೆ ಬಿಜೆಪಿಗೆ ಬೆಂಬಲಿಸಿದಂತೆ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಐದು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿಯೂ ಸಹ ಬೆಂಗಳೂರಿನ ಜನರು ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಲಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಹಾದಿ ಆರಂಭವಾಗುವುದು ನಿಶ್ಚಿತ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಅವರು ಬಿಜೆಪಿ ನಾಯಕರು ಅಭಿನಂದನೆ ತಿಳಿಸಿ ಎಕ್ಸ್ ಪೋಸ್ಟ್ ಮಾಡಿದರು. ಜೊತೆಗೆ ಕಾಂಗ್ರೆಸ್ ಪಕ್ಷವನ್ನು ಕುಟುಕಿದರು. ಮಹಾರಾಷ್ಟ್ರದ ಪ್ರತಿಷ್ಠಿತ ಬಿಎಂಸಿ (BMC) ಸೇರಿದಂತೆ ಪುಣೆ, ನಾಗಪುರ ಹಾಗೂ ರಾಜ್ಯದ ಎಲ್ಲಾ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ ಮತ್ತೊಮ್ಮೆ ಅಭೂತಪೂರ್ವ ಜಯಭೇರಿ ಬಾರಿಸಿದೆ. ಇದು ಜನತೆ ಮತ್ತೊಮ್ಮೆ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ ಎಂದರ್ಥ ಎಂದರು.
ಈ ಐತಿಹಾಸಿಕ ವಿಜಯದ ರೂವಾರಿಗಳಾದ ಪ್ರಧಾನಮಂತ್ರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸೇರಿ ಬಿಜೆಪಿ ನಾಯಕರಿಗೆ ಶುಭಕೋರಿದರು.
ರಾಜ್ ಠಾಕ್ರೆಗೆ ಬಿಜೆಪಿ ನಾಯಕರು ಟಾಂಗ್
ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ರಾಜ್ಯ ಠಾಕ್ರೆಗೆ ಬಿಜೆಪಿ ಸಂಸದ ಪಿಸಿ ಮೋಹನ್ ಸೇರಿದಂತೆ ಕೆಲ ನಾಯಕರು ಟಾಂಗ್ ನೀಡಿದ್ದಾರೆ. ಇವರು ಅಣ್ಣಾಮಲೈ ಅಲ್ಲ, ರಸಮಲೈ ಎಂದು ಹೇಳಿದ್ದ ರಾಜ್ ಠಾಕ್ರೆ ಅವರು ಟೀಕೆಗೆ ಗುರಿಯಾಗಿದ್ದರು. ಇದೀಗ ಬಿಎಂಸಿ ಚುನಾವಣೆಯಲ್ಲಿ ಠಾಕ್ರೆ ಸಹೋದರರನ್ನು ಜನರು ಸ್ಥಳೀಯ ಸಂಸ್ಥೆಗಳ ಅಧಿಕಾರದಿಂದ ದೂರವಿಟ್ಟಿದ್ದಾರೆ. ಅದಕ್ಕಾಗಿ ಪಿಸಿ ಮೋಹನ್ ಅವರು ರಸಮಲೈ ಸಿಹಿ ಫೋಟೋ ಪೋಸ್ಟ್ ಮಾಡಿ ಟಾಂಗ್ ನೀಡಿದ್ದಾರೆ.
ಬಿಜೆಪಿ ಗೆಲುವಿನಲ್ಲಿ ಕಾಂಗ್ರೆಸ್ ನ ಅಂತ್ಯ: ಬೊಮ್ಮಾಯಿ
ಮಹಾರಾಷ್ಟ್ರದ ಪ್ರತಿಷ್ಟಿತ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಪುಣೆ, ನಾಗಪೂರ ಸೇರಿದಂತೆ ನಗರ ಸ್ಥಳಿಯ ಸಂಸ್ಥೆಗಳಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ ಸಿಂಧೆ ಬಣ) ಬಹಳ ದೊಡ್ಡ ಪ್ರಮಾಣದಲ್ಲಿ ಜಯಗಳಿಸಿದ್ದಾರೆ. ಈ ಅಭೂತಪೂರ್ವ ಜಯಕ್ಕೆ ಕಾರಣೀಕರ್ತರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮೀತ್ ಶಾ ಸೇರಿ ಹಲವು ನಾಯಕರು ಕಾರಣ ಎಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು.
ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಇಲ್ಲಿ ಬಿಜೆಪಿ ಜೆಡಿಎಸ್ ಪಕ್ಷಗಳು ಗೆಲುವು ಸಾಧಿಸುವುದು ನಿಶ್ಚಿತವಾಗಿದೆ. ಈ ಚುನಾವಣೆಯ ಬಿಜೆಪಿ ಗೆಲುವಿನಲ್ಲಿ ಕಾಂಗ್ರೆಸ್ ನ ಅಂತ್ಯ ಆರಂಭ ಎಂದು ಅವರು ಭವಿಷ್ಯ ನುಡಿದರು.












Click it and Unblock the Notifications