ಮಜವಿಲ್ಲದೇ ಪ್ರೇಮಿಸುವುದಾದರೂ ಹೇಗೆ? ವ್ಯಾಲೆಂಟೈನ್ಸ್ ಡೇಗೆ ಎಣ್ಣೆ ಸಿಗಲ್ಲವೆಂದು ಬೆಂಗಳೂರು ತೊರೆಯುತ್ತಿರುವ ಪ್ರೇಮಿಗಳು
ಬೆಂಗಳೂರು, ಫೆಬ್ರವರಿ 10: ಫೆಬ್ರುವರಿ ತಿಂಗಳು ಬಂತೆಂದರೆ ಎಲ್ಲೆಲ್ಲೂ ಪ್ರೇಮದ ಘಮ ಹರಡುತ್ತದೆ. ತಮ್ಮ ಪ್ರೀತಿಪಾತ್ರರ ಜೊತೆಗೆ ವ್ಯಾಲೆಂಟೈನ್ಸ್ ಡೇ ಆಚರಿಸಲು ಜಗತ್ತು ಸಜ್ಜಾಗುತ್ತದೆ. ಅದಕ್ಕೂ ಮುಂಚೆಯೇ ಪ್ರೇಮಿಗಳ ವಾರವನ್ನು ಜನರು ಆಚರಿಸುತ್ತಾರೆ. ರಾತ್ರಿಯ ಊಟದಿಂದ ಲಾಂಜ್ ಪಾರ್ಟಿಗಳನ್ನು ಮಾಡಲು ಪ್ರೇಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ನಮ್ಮ ಬೆಂಗಳೂರಿನ ಪ್ರೇಮಿಗಳಿಗೆ ಕೆಲವು ಅಡೆತಡೆಗಳು ಬಂದೊದಗಿರುವುದು ಮಾತ್ರ ದುರಂತ ಎಂದು ಹೇಳಲಾಗುತ್ತದೆ.
ಹೌದು, ಫೆಬ್ರವರಿ 16 ರಂದು ಬೆಂಗಳೂರು ನಗರದ ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ ಉಪಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಮದ್ಯ ನಿಷೇಧ ಹೇರಲಾಗಿದೆ. ಪಬ್ ಮತ್ತು ಬಾರುಗಳು ಬಂದ್ ಇರಲಿವೆ. ಇದು ಫೆಬ್ರವರಿ 14 ರ ಸಂಜೆಯಿಂದಲೇ ಜಾರಿಯಾಗುತ್ತದೆ.

ಮದ್ಯ ನಿಷೇಧದ ದಿನಾಂಕಗಳು ಮತ್ತು ಸಮಯ
ಫೆಬ್ರವರಿ 14 ರಿಂದ ಅಂದರೆ ಪ್ರೇಮಿಗಳ ದಿನದಂದು ಸಂಜೆ 5 ಗಂಟೆಗೆ ಮಧ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಇದು ಫೆಬ್ರವರಿ 17 ರಂದು ಬೆಳಿಗ್ಗೆ 6 ರ ವರೆಗೆ ಮುಂದುವರಿಯುತ್ತದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಒಳಪಡುವ ಪ್ರದೇಶಗಳನ್ನು ಹೊರತುಪಡಿಸಿ ನಗರದ ಎಲ್ಲಾ ಪ್ರದೇಶಗಳಲ್ಲಿ ಮದ್ಯ ನಿಷೇಧವನ್ನು ಘೋಷಿಸಲಾಗಿದೆ.
ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ, ಮತ್ತು ಆನೇಕಲ್ ಏಳು ವಿಧಾನಸಭಾ ಕ್ಷೇತ್ರಗಳ ಶಿಕ್ಷಕರು ಈ ಉಪಚುನಾವಣೆಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ.

ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಮದ್ಯ ನಿಷೇಧ ಆದೇಶದ ವಿರುದ್ಧ ಬೆಂಗಳೂರಿನ ಫುಡ್ ಎಂಡ್ ಬಿವರೇಜಸ್ (ಎಫ್ & ಬಿ) ಉದ್ಯಮವು ಆಕ್ರೋಶ ವ್ಯಕ್ತಪಡಿಸಿದೆ. ಈ ತಿಂಗಳ ವ್ಯವಹಾರದಲ್ಲಿ 10-15ರಷ್ಟು ನಷ್ಟವಾಗಲಿದೆ ಎಂದು ಉದ್ಯಮಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ಪ್ರತಿಕ್ರಿಯಿಸಿರುವ ನ್ಯಾಷನಲ್ ರೆಸ್ಟೊರೆಂಟ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಚೇತನ್ ಹೆಗ್ಡೆ, ವ್ಯಾಲೆಂಟೈನ್ಸ್ ಡೇ ಅಂದು ನಿಷೇಧ ಮಾಡಿರುವುದು ನಮ್ಮ ಉದ್ಯಮಕ್ಕೆ ನಷ್ಟವನ್ನು ಉಂಟುಮಾಡಲಿದೆ. ಇದು ನಮ್ಮ ವ್ಯವಹಾರವನ್ನು ಕುಗ್ಗಿಸುತ್ತದೆ. ಜನರ ಉತ್ಸಾಹವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಜನರು ಪ್ರೇಮಿಗಳ ದಿನಕ್ಕಾಗಿ ಎದುರು ನೋಡುತ್ತಾರೆ. ಟೇಬಲ್‌ಗಳನ್ನು ಕಾಯ್ದಿರಿಸುತ್ತಾರೆ. ನಿಷೇಧದಿಂದ ವ್ಯಾಪಾರವೆಲ್ಲವೂ ನಷ್ಟವಾಗುತ್ತದೆ. ಸಂಜೆಯ ಸಂಭ್ರಮದ ಆಚರಣೆಗೆ ಖರ್ಚು ಮಾಡಿದ ಹಣವೂ ಹಾಳಾಗುತ್ತದೆ ಎಂದು ಹೆಗ್ಡೆ ತಿಳಿಸಿದ್ದಾರೆ.
ಇತರ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮದ್ಯದ ಮೇಲಿನ ತೆರಿಗೆಗಳು ತುಂಬಾ ಹೆಚ್ಚಿವೆ. ಇದು ಈಗಾಗಲೇ ವ್ಯವಹಾರಕ್ಕೆ ನಷ್ಟ ಉಂಟುಮಾಡಿದೆ. ಪ್ರೇಮಿಗಳ ದಿನದಂದು ಆಲ್ಕೋಹಾಲ್ ಮಾರಾಟದ ಮೇಲಿನ ನಿಷೇಧ ಅಸಮಂಜಸ ಎಂದು ಅವರು ತಿಳಿಸಿದ್ದಾರೆ.
ನಾವು ಡಿಜೆಗಳು, ವಿಶೇಷ ಮೆನುಗಳು, ಈವೆಂಟ್‌ಗಳು ಇತ್ಯಾದಿಗಳೊಂದಿಗೆ ರಾತ್ರಿಯಲ್ಲಿ ಸಾಕಷ್ಟು ಮುಂಚಿತವಾಗಿ ಯೋಜಿಸಿದ್ದೇವೆ. ಪ್ರೇಮಿಗಳ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸುವುದು ಇದೇ ಮೊದಲು. ಬೆಂಗಳೂರು ಯುವ ನಗರವಾಗಿದ್ದು, ಜನರು ಇದನ್ನು ಅದ್ಧೂರಿಯಾಗಿ ಆಚರಿಸಲು ಇಷ್ಟಪಡುತ್ತಾರೆ ಎಂದು ಲೀಸರ್ ಎಂಟರ್‌ಟೈನ್‌ಮೆಂಟ್‌ನ ನರೇನ್ ಬೆಲಿಯಪ್ಪ 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.
ಬೆಂಗಳೂರು ತೊರೆಯುತ್ತಿದ್ದಾರಾ ಪ್ರೇಮಿಗಳು?
ಪ್ರೇಮಿಗಳ ದಿನದಂದು ಮದ್ಯ ಮಾರಾಟ ನಿಷೇಧದ ಹಿನ್ನೆಲೆಯಲ್ಲಿ ಪ್ರೇಮಿಗಳು ಬೆಂಗಳೂರು ತೊರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮಡಿಕೇರಿ, ಸಕಲೇಶಪುರ ಸೇರಿದಂತೆ ಬೆಂಗಳೂರು ಸುತ್ತಲಿನ ರೆಸಾರ್ಟ್ ಹಾಗೂ ಹೊಟೇಲ್‌ಗಳು ಅತ್ಯಧಿಕ ಪ್ರಮಾಣದಲ್ಲಿ ಬುಕ್ ಆಗಿವೆ ಎಂದು ತಿಳಿದುಬಂದಿದೆ.












Click it and Unblock the Notifications