ಮಾವು ಬೇಕೆ? ಲಾಲ್‌ಬಾಗ್‌ಗೆ ಭೇಟಿ ನೀಡಿ
ಬೆಂಗಳೂರು, ಮೇ.27: ನಗರದ ಲಾಲ್‌ಬಾಗ್‌ನಲ್ಲಿ ಆರಂಭಗೊಂಡಿರುವ ಮಾವು ಹಲಸು ಮೇಳಕ್ಕೆ ಬೆಂಗಳೂರಿನ ಜನತೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಗಾಜಿನ ಮನೆಯ ಹೊರ ಆವರಣದಲ್ಲಿ ಮೇ. 23ರಿಂದ ಮೇಳ ಆರಂಭಗೊಂಡಿದ್ದು ಇದುವರೆಗೆ 70 ಟನ್ ಮಾವು ಮಾರಾಟವಾಗಿದೆ.
ಮೇಳದಲ್ಲಿ ವಿವಿಧ ಮಾವಿನ ತಳಿಗಳ ಸಿಂಧೂರ, ಮಲ್ಗೊಬಾ, ಬಾದಾಮಿ, ನೀಲಂ, ಮಲ್ಲಿಕಾ ಹಾಗೂ ಹಲಸಿನಲ್ಲಿ ಸ್ವರ್ಣ, ಮಧುರ ತಳಿಯ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ಬಾರಿ ಲಾಲ್‌ಬಾಗ್‌ನಲ್ಲಿ 600ರಿಂದ 700 ಟನ್ ಮಾವು ಮಾರಾಟ ಮಾಡುವ ಗುರಿಯನ್ನು ತೋಟಗಾರಿಕಾ ಇಲಾಖೆ ಹೊಂದಿದ್ದು, ಮಾವು ಹಲಸು ಪ್ರಿಯರಿಗಾಗಿ ಮಾರುಕಟ್ಟೆ ದರಕ್ಕಿಂತ ಶೇ. 10ರಷ್ಟು ಕಡಿಮೆ ದರದಲ್ಲಿ ಇಲ್ಲಿ ಮಾವು ಮಾರಾಟ ಮಾಡಲಾಗುತ್ತಿದೆ.
ತೋಟಗಾರಿಕೆ ಇಲಾಖೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಾರುಕಟ್ಟೆ ನಿಗಮ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹಾಪ್‌ಕಾಮ್ಸ್ ಇವರುಗಳ ಸಂಯುಕ್ತಾಶ್ರಯದಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ .

ಮಾವು ಹಲಸು ಬೆಲೆ ಎಷ್ಟು?
ಮಾವು ದರ (ಕೆ.ಜಿ.ಗಳಲ್ಲಿ)
ಬಾದಾಮಿ 65 ರೂ.
ಮಲ್ಲಿಕಾ 60 ರೂ.
ಆಲ್ಫಾನ್ಸೋ 60 ರೂ
ಕೇಸರ್ 55 ರೂ.
ಆಮ್ರಪಾಲಿ 60 ರೂ.
ಬಂಗನಪಲ್ಲಿ 45 ರೂ.
ದಶೇರಿ 80 ರೂ.
ಮಲಗೋವಾ 80 ರೂ.
ರಸಪುರಿ 50 ರೂ.
ಕಾಲಾಪಾಡ್ 50 ರೂ.
ಸಕ್ಕರೆಗುತ್ತಿ 55 ರೂ.
ತೋತಾಪುರಿ 20 ರೂ.
ಹಲಸು (ಡಜನ್ ತೊಳೆಗಳಿಗೆ) 20-30 ರೂ.

70 ಟನ್ ಮಾರಾಟ:
"ಈಗಾಗಲೇ 70 ಟನ್ ಮಾವಿನ ಹಣ್ಣನ್ನು ಮಾರಾಟ ಮಾಡಲಾಗಿದೆ, ಬದಾಮಿ ಮತ್ತು ಮಲ್ಲಿಕಾಗೆ ಹೆಚ್ಚಿನ ಬೇಡಿಕೆಯಿದೆ"
ಡಾ.ಜಯಪ್ರಕಾಶ್, ಹೆಚ್ಚುವರಿ ನಿರ್ದೇಶಕ ತೋಟಗಾರಿಕಾ ಇಲಾಖೆ

ರಾಸಾಯನಿಕ ಮುಕ್ತ ಮಾವಿನಹಣ್ಣು
ರಾಸಾಯನಿಕ ಬಳಸದೇ ಸಹಜವಾಗಿ ಮಾಗಿಸಿದ ಮಾವಿನ ಹಣ್ಣುಗಳನ್ನು ಮಾತ್ರ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ. ಒಂದು ವೇಳೆ ರೈತರು ಮೋಸ ಮಾಡಿ ರಾಸಾಯನಿಕ ಬಳಸಿ ಮಾವನ್ನು ಹಣ್ಣು ಮಾಡಿದ್ದರೆ, ಅಂತಹ ಹಣ್ಣುಗಳ ಮಾರಾಟ ಮಾಡುವ ರೈತರಿಗೆ ಮಳಿಗೆಯಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ. ತೋಟಗರಿಕಾ ಇಲಾಖೆಯ ಅಧಿಕಾರಿಗಳು ಪ್ರತಿದಿನ ರೈತರ ಮಾವಿನ ಹಣ್ಣುಗಳನ್ನು ಪರಿಶೀಲಿಸುತ್ತಿದ್ದಾರೆ.

90 ಸುಸಜ್ಜಿತ ಮಾರಾಟ ಮಳಿಗೆಗಳು
ಮೇಳದಲ್ಲಿ 90 ಸುಸಜ್ಜಿತ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. 75 ಮಳಿಗೆ ಮಾವಿನ ಹಣ್ಣಿಗೆ ಮೀಸಲಾದರೆ, 15 ಮಳಿಗೆಯಲ್ಲಿ ಹಲಸಿನ ಹಣ್ಣಿನ ಮಾರಾಟ ಮಾಡಲಾಗುತ್ತದೆ. ಬೆಳಗ್ಗೆ 8 ರಿಂದ ಸಂಜೆ 7ರವರೆಗೆ ಮಳಿಗೆಗಳು ತೆರೆದಿದ್ದು, ಗ್ರಾಹಕರು ಯೋಗ್ಯವಾದ ದರದಲ್ಲಿ ತಾಜಾ ಹಣ್ಣುಗಳನ್ನು ಖರೀದಿಸಬಹುದಾಗಿದೆ.

ಕಡಿಮೆ ಬೆಲೆ:
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಮಾವಿನ ಮೇಳಕ್ಕೆ ಹೋಲಿಸಿದರೆ ಬೆಲೆ ಸ್ವಲ್ಪ ಹೆಚ್ಚಾಯಿತು. ಆದರೆ ಮಾರುಕಟ್ಟೆ ಬೆಲೆಗಿಂತ ಇಲ್ಲಿ ಕಡಿಮೆ ಬೆಲೆಗೆ ಹಣ್ಣು ಸಿಗುತ್ತಿದೆ. ರಾಸಾಯನಿಕ ಬಳಸದೇ ಹಣ್ಣನ್ನು ಮಾಗಿಸಿದರಿಂದ ಇಲ್ಲಿ ಖರೀದಿ ಮಾಡಿದರೆ ಯಾವುದೇ ಮೋಸವಿಲ್ಲ.
ಚಾರಿ, ಬಿಇಎಲ್ ಎಂಜಿನಿಯರ್

ವೀಕೆಂಡ್ ಫುಲ್ ಬ್ಯುಸಿ:
ಶನಿವಾರ ಮತ್ತು ಅದಿತ್ಯವಾರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅಲ್ಲದೇ ಸಂಜೆಯ ವಾಕಿಂಗ್ ಸಮಯದಲ್ಲಿ ಹೆಚ್ಚಿನ ಹಣ್ಣು ಮಾರಾಟವಾಗುತ್ತಿದೆ.

ವಿವಿಧ ತಳಿಗಳು:
ಯಾವ ತಳಿಯ ಮಾವಿನ ಹಣ್ಣು ಹೇಗಿರುತ್ತದೆ? ಮಾವನ್ನು ಹೇಗೆ ಬೆಳೆಯಲಾಗುತ್ತದೆ ಇತ್ಯಾದಿ ಮಾವಿನಹಣ್ಣಿನ ಬಗ್ಗೆ ಮಾಹಿತಿ ತಿಳಿಯಲು ತೋಟಗಾರಿಕಾ ಇಲಾಖೆ ವಿವಿಧ ಮಾವಿನ ಹಣ್ಣಿನ ತಳಿಗಳ ಪ್ರತ್ಯೇಕ ಪ್ರದರ್ಶನ ಮಳಿಗೆಯನ್ನು ತೆರೆದಿದೆ.

10 ರೂ ಶುಲ್ಕ:
ಮಕ್ಕಳಿಗೆ ಲಾಲ್‌ಬಾಗ್ ಪ್ರವೇಶ ಉಚಿತವಿದ್ದರೆ, ದೊಡ್ಡವರು 10 ರೂ. ಲಾಲ್‌ಬಾಗ್ ಶುಲ್ಕವನ್ನು ನೀಡಿ ಮಾವು ಮತ್ತು ಹಲಸು ಮೇಳವನ್ನು ವೀಕ್ಷಿಸಬಹುದು.












Click it and Unblock the Notifications