ಒಂದು ಪಕ್ಷದಲ್ಲಿ 3 ತಿಂಗಳಿಗಿಂತ ಹೆಚ್ಚು ಕಾಲ ಇರಲಾರೆ: ಪ್ರಕಾಶ್ ರೈ
ಬೆಂಗಳೂರು, ಜನವರಿ 19: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ನಟ ಪ್ರಕಾಶ್ ರೈ, ಯಾವುದೇ ರಾಜಕೀಯ ಪಕ್ಷ ಸೇರ್ಪಡೆಯಾಗದೆ ಇರುವುದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ.
ರಾಜಕೀಯ ಪಕ್ಷವನ್ನು ಸೇರಿಕೊಂಡರೆ ಅಲ್ಲಿ ಮೂರು ತಿಂಗಳಿಗಿಂತ ಹೆಚ್ಚು ಕಾಲ ಇರಲಾರೆ. ಈ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವು ಪಡೆದುಕೊಂಡ ಅನುಭವವೇ ಚುನಾವಣೆಗೆ ಬರಲು ಕಾರಣ ಎಂದು ಹೇಳಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ ಪ್ರವಾಸ ನಡೆಸಿದ್ದೆ. ಇದರಿಂದ ಆಲಿಸಬೇಕಾಗಿದ್ದ ಜನರ ಧ್ವನಿಯನ್ನು ಅರ್ಥಮಾಡಿಕೊಂಡಿದ್ದೆ ಎಂದು ತಿಳಿಸಿದ್ದಾರೆ.
ತಾವು ಶಿಕ್ಷಿತನಾಗಿದ್ದು ಮಾತ್ರವಲ್ಲ, ನಟನಾಗಿ ಬೆಳೆದಿದ್ದೂ ಈ ಕ್ಷೇತ್ರದಿಂದಲೇ ಎಂದು ಬೆಂಗಳೂರು ಸೆಂಟ್ರಲ್ ಕ್ಷೇತ್ರವನ್ನು ಆಯ್ದುಕೊಳ್ಳಲು ಕಾರಣ ತಿಳಿಸಿದ್ದಾರೆ.
'ನಾನು ಸೇಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಹುಟ್ಟಿದ್ದು. ಶಾಲೆ ಮತ್ತು ಕಾಲೇಜುಗಳಿಗೆ ಹೋಗಿದ್ದು ಇಲ್ಲಿ. ಬಳಿಕ ಗಾಂಧಿನಗರದಲ್ಲಿ ಸಿನಿಮಾ ಸೇರಿಕೊಂಡೆ. ನನ್ನ ಪಯಣ ಆರಂಭಿಸಿದ್ದು ಈ ಜಾಗದಿಂದ. ಹೀಗಾಗಿ ನನ್ನ ಬೇರುಗಳು ಇಲ್ಲಿಯೇ ಇವೆ. ಹೀಗಾಗಿಯೇ ನಾನು ಈ ಕ್ಷೇತ್ರವನ್ನು ಆಯ್ದುಕೊಂಡೆ' ಎಂದು ರೈ ಹೇಳಿದ್ದಾರೆ.
ಜನವರಿ 20ರಿಂದ ಕ್ಷೇತ್ರದ ಎಲ್ಲ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಲಾಗುವುದು. ಇನ್ನು ಹದಿನೈದು ದಿನಗಳಲ್ಲಿ 'ಜನರ ಪ್ರಣಾಳಿಕೆ' ಅಂತಿಮಗೊಳಿಸುವುದಾಗಿ ವಿವರಿಸಿದ್ದಾರೆ.












Click it and Unblock the Notifications