LalBagh Flower Show: ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: ಸಮಯ, ಟಿಕೆಟ್ ದರ, ಪಾರ್ಕಿಂಗ್ ವ್ಯವಸ್ಥೆ ಮಾಹಿತಿ
ಬೆಂಗಳೂರು, ಆಗಸ್ಟ್ 2: 214ನೇ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ ಆಗಸ್ಟ್ 4 ರಿಂದ 15 ರವರೆಗೆ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಅವರ ಜೀವನ, ಸಾಧನೆ ಕುರಿತಂತೆ ಪುಷ್ಪ ನಮನ ಸಲ್ಲಿಸಲು ತೀರ್ಮಾನಿಸಲಾಗಿದೆ.
ಆಗಸ್ಟ್ 4ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ವಿಧಾನಸೌಧವನ್ನು ನಿರ್ಮಿಸಿದ ಹನುಮಂತಯ್ಯನವರ ಜೀವನ, ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ, ಅವರ ಒಡನಾಟವನ್ನು ಬಿಂಬಿಸುವ ಪುಷ್ಪ ನಮನ ಇದಾಗಿರಲಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆಯಲ್ಲಿ ಭಾರತೀಯ ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಕೆಂಗಲ್ ಹನುಮಂತಯ್ಯ ಅವರ ಮಹತ್ವದ ಪಾತ್ರವನ್ನು ಪ್ರದರ್ಶಿಸಲಾಗುವುದು ಎಂದು ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಸುದ್ದಿಗಾರರಿಗೆ ತಿಳಿಸಿದರು.
ವಿಧಾನಸೌಧ, ಶಿವಪುರ ಸತ್ಯಾಗ್ರಹ ಸೌಧ ಪ್ರತಿಕೃತಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದಲ್ಲಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ತೋಟಗಾರಿಕೆ ಸಚಿವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ತರಕಾರಿ ಕೆತ್ತನೆ ಮತ್ತು ಬೋನ್ಸಾಯ್ ಸ್ಪರ್ಧೆಗಳು ನಡೆಯಲಿವೆ.
10 ಲಕ್ಷ ಹೂವುಗಳನ್ನು ಬಳಸಲಿ ವಿಧಾನಸೌಧ ಮತ್ತು ಶಿವಪುರ ಸತ್ಯಾಗ್ರಹ ಸೌಧದ ಪ್ರತಿಕೃತಿಯನ್ನು ಈ ಬಾರಿ ನೋಡಬಹುದಾಗಿದೆ. ಇದಲ್ಲದೆ ಲಾಲ್ ಬಾಗ್‌ನಲ್ಲಿ ಹತ್ತು ಹೂವಿನ ಪಿರಮಿಡ್‌ಗಳು ಇರುತ್ತವೆ ಎಂದು ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
ಪ್ರದರ್ಶನದಲ್ಲಿ 815 ಪ್ರದರ್ಶಕರು ಭಾಗವಹಿಸಲಿದ್ದು, 138 ಪ್ರದರ್ಶಕರು ಹೂವಿನ ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಗಾರ್ಡನ್ ಸ್ಪರ್ಧೆಯಲ್ಲಿ 525 ಪ್ರದರ್ಶಕರು ಭಾಗವಹಿಸಲಿದ್ದು, 102 ಮಂದಿ ಗಾಜಿನ ಮನೆಯಲ್ಲಿ ಪ್ರದರ್ಶಿಸಲಿದ್ದಾರೆ.
ಪ್ರದರ್ಶನ ಸಮಯ, ಟಿಕೆಟ್ ದರ, ಪಾರ್ಕಿಂಗ್ ವ್ಯವಸ್ಥೆ
ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಲಾಲ್‌ಬಾಗ್‌ನ ಪಶ್ಚಿಮ ಗೇಟ್, ಈಸ್ಟ್ ಗೇಟ್ ಮತ್ತು ಸೌತ್ ಎಂಡ್ ಸರ್ಕಲ್‌ನಿಂದ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ, ಜೆಸಿ ರಸ್ತೆ ಬಿಬಿಎಂಪಿ ಸಂಕೀರ್ಣ ಮತ್ತು ಲಾಲ್ ಬಾಗ್ ರಸ್ತೆಯ ಅಲ್ ಅಮೀನ್ ಕಾಲೇಜಿನಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಭದ್ರತೆಗಾಗಿ, ಎಲ್ಲಾ ಗೇಟ್‌ಗಳಿಗೆ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಲಾಗುವುದು ಮತ್ತು ಭದ್ರತಾ ಸಿಬ್ಬಂದಿ ಬ್ಯಾಗೇಜ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ಆರೋಗ್ಯ ತುರ್ತು ಪರಿಸ್ಥಿತಿಗಳಿಗಾಗಿ, ಆಂಬ್ಯುಲೆನ್ಸ್‌ಗಳು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಇದಲ್ಲದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.
ಆಗಸ್ಟ್ 4ರಿಂದ ಆಗಸ್ಟ್ 15ರವರೆಗೆ ಪಲಫುಷ್ಪ ಪ್ರದರ್ಶನ ನಡೆಯಲಿದ್ದು, ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಇರುತ್ತದೆ. ಪ್ರವೇಶ ದರವನ್ನು ವಾರದ ದಿನಗಳಲ್ಲಿ ವಯಸ್ಕರಿಗೆ 70 ರೂಪಾಯಿ ಮತ್ತು ವಾರಾಂತ್ಯದಲ್ಲಿ 80 ರೂಪಾಯಿ ನಿಗದಿಪಡಿಸಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ 30 ರೂಪಾಯಿ ನಿಗದಿ ಮಾಡಲಾಗಿದೆ.












Click it and Unblock the Notifications