ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ: 12 ದಿನದಲ್ಲಿ ₹3.44 ಕೋಟಿ ಆದಾಯ ಸಂಗ್ರಹ, ಭೇಟಿ ಕೊಟ್ಟವರೆಷ್ಟು?
ಬೆಂಗಳೂರು, ಆಗಸ್ಟ್ 20: ಪ್ರಸಕ್ತ 78ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಬೆಂಗಳೂರಿನ ಸಸ್ಯಕಾಶಿ ಲಾಲ್ ಬಾಗ್ ಉದ್ಯಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಫಲಪುಷ್ಪ ಪ್ರದರ್ಶನ 2024 ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 08ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡ ಈ ಪ್ರದರ್ಶನಕ್ಕೆ ಕಳೆದ 12 ದಿನಗಳಲ್ಲಿ 9.07 ಲಕ್ಷ ಜನರು ಆಗಮಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ತೋಟಗಾರಿಕಾ ಇಲಾಖೆ ವತಿಯಿಂದ ಈ ವರ್ಷದ ಸ್ವಾತಂತ್ರ್ಯ ದಿನಾಚದರಣೆ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಜೀವನ ಹಾಗೂ ಸಾಧನೆಗಳ ಆಧಾರದಲ್ಲಿ ಫಲಪುಷ್ಪ ಪ್ರದರ್ಶನ ಜರುಗಿತು. 9.07 ಲಕ್ಷ ಜನರ ಆಮನದಿಂದ ಟಿಕೆಟ್ ಆಧಾರದಲ್ಲಿ ಇಲಾಖೆಗೆ ಬರೋಬ್ಬರಿ 3.04 ಕೋಟಿ ರೂ. ಸಂಗ್ರಹವಾಗಿದೆ. ಇನ್ನುಳಿದಂತೆ ಉದ್ಯನದಲ್ಲಿ ಅವಕಾಶ ನೀಡಲಾಗಿದ್ದ ವಿವಿಧ ಮಳಿಗೆಗಳ ಬಾಡಿಗೆಯಿಂದ ಸುಮಾರು 40 ಲಕ್ಷ ರೂ. ಆದಾಯ ಸಂದಾಯವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರದರ್ಶನಕ್ಕೆ ಬರುವವರ ಸಂಖ್ಯೆ ಇಳಿಕೆ, ಯಾಕೆ?
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಆಗಮಿಸಿದವರ ಸಂಖ್ಯೆ ಕಡಿಮೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಕಳೆದ ಎರಡು ವರ್ಷ ಹಿಂದಿನವರೆಗ ಅಪಾರ ಸಂಖ್ಯೆಯ ಜನರು ಆಗಮಿಸುತ್ತಿದ್ದರು. ಆದರೆ ಇತ್ತೀಚಿನ ಎರಡು ವರ್ಷಗಳಲ್ಲಿ ಈ ವೀಕ್ಷಕರ ಸಂಖ್ಯೆ ಕಡಿಮೆಯಾಗಿದೆ.
ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಗೌರವ ಸ್ಮರಣಾರ್ಥ 2022ರಲ್ಲಿ ನಡೆಸಿದ ಫಲಪುಷ್ಪ ಪ್ರದರ್ಶನದ ವೇಳೆ ಫಲಪುಷ್ಪ ಇತಿಹಾಸಲ್ಲಿಯೇ ಅತೀ ಹೆಚ್ಚು ಜನ ಆಗಮಿಸಿದ್ದರು. ಆಗ 11 ಲಕ್ಷದಷ್ಟು ಜನರು ಭೇಟಿ ನೀಡಿ ಅಪ್ಪು ಅವರನ್ನು ಕಣ್ತುಂಬಿಕೊಂಡಿದ್ದರು. 2023ರಲ್ಲಿ ಕೆಂಗಲ್ ಹನುಮಂತಯ್ಯನವರಿದ್ದ ಪುಷ್ಪ ಪ್ರದರ್ಶನದಲ್ಲಿ ಅಂದಾಜು 10.5 ಲಕ್ಷ ಜನರು ಭೇಟಿ ಕೊಟ್ಟಿದ್ದರು.
ರಾಜಧಾನಿಯಲ್ಲಿ ನಿರಂತರ ಮಳೆಯ ವಾತಾವರಣ ಕಂಡು ಬಂದಿದೆ. ಅಲ್ಲದೇ ಜನರು ಮೊದಲಿನಂತೆ ಪ್ರದರ್ಶನಕ್ಕೆ ಬರುವುದನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಅಷ್ಟಾಗಿ ಜನಸಂದಣಿ ಕಾಣಲಿಲ್ಲ. ಆಗಾಗ ಮಳೆಯ ದರ್ಶನ ಕೊಡುತ್ತಿದ್ದ ಪರಿಣಾಮ, ವಾತಾವರಣ ತಂಪಿನಿಂದ ಕೂಡಿತ್ತು. ಅಲ್ಲಲ್ಲಿ ಮಳೆಯಿಂದಾಗಿ ಸಮಸ್ಯೆಗಳು ಕಂಡು ಬಂದಿತ್ತು, ಇದು ಸಹ ಜನ ಕಡಿಮೆಯಾಗಲು ಕಾರಣ ಎಂದು ವಿಶ್ಲೇಷಿಸಲಾಗಿದೆ.
ಪ್ರತಿ ವರ್ಷದಂತೆ ಈ ಬಾರಿಯ ಪ್ರದರ್ಶನವು ಪ್ಲಾಸ್ಟಿಕ್ ಗೆ ಸಂಪೂರ್ಣ ನಿಷೇಧಿಸಲಾಗಿತ್ತು. ಅಲ್ಲಲ್ಲಿ ಸಿಬ್ಬಂದಿ ತಪಾಸಣೆ ಕೈಗೊಂಡಿದ್ದಾರೆ. ಸಾವಿರಾರು ಜನರು ನಿತ್ಯ ಬೇಟಿ ನೀಡಿದ ನಂತರವು ಉದ್ಯಾನ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಉದ್ಯಾನವನ್ನು ಪ್ಲಾಸ್ಟಿಕ್‌ನ ಪ್ರವೇಶಿದಂತೆ ತಡೆಯಲು ಅಲ್ಲಲ್ಲಿ ಪರಿಶೀಲನೆ, ಕಸದ ಬುಟ್ಟಿ, ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ತ್ಯಾಜ್ಯ ಎಲ್ಲೆಂದರಲ್ಲಿ ಬೀಳದಂತೆ ವ್ಯವಸ್ಥೆ ಮಾಡಲಾಗಿತ್ತು. ಸ್ವಯಂಸೇವಕರು ಮತ್ತು ಮೈದಾನದ ಸಿಬ್ಬಂದಿ ಈ ಕುರಿತು ಜಾಗೃತಿ ಮೂಡಿಸಿದರು. ಹೆಚ್ಚು ಶಿಸ್ತಿನಿಂದ ಪ್ರದರ್ಶನ ನಡೆಸಿಕೊಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications