Bengaluru: ಓಣಂ ಪ್ರಯುಕ್ತ KSRTC ಯಿಂದ ಹೆಚ್ಚುವರಿ ಬಸ್‌ಗಳ ಸಂಚಾರ, ಟಿಕೆಟ್ ರಿಯಾಯಿತಿ! ವೇಳಾಪಟ್ಟಿ
ಬೆಂಗಳೂರು, ಆಗಸ್ಟ್.30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಇತ್ತೀಚೆಗೆ ಗಣೇಶ ಗಬ್ಬದ ಪ್ರಯುಕ್ತ ವಿಶೇಷ ಬಸ್‌ಗಳನ್ನು ಬಿಟ್ಟಿತ್ತು. ಇದೀಗ ತಿರು ಓಣಂ ಹಬ್ಬದ ಪ್ರಯುಕ್ತ ರಾಜ್ಯ ಸಾರಿಗೆ ನಿಗಮ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದೆ. ಎಲ್ಲಿಂದ ಎಲ್ಲಿಗೆ? ಬಸ್ ಮಾರ್ಗಗಳು, ಸಮಯ ದಿನಾಂಕದ ಪೂರ್ಣ ಮಾಹಿತಿ ಹೀಗಿದೆ.
ಸೆಪ್ಟಂಬರ್ 05ರಂದು ತಿರು ಓಣಂ ಹಬ್ಬ ಜರುಗಲಿದೆ. ಈ ಸಂಬಂಧ ಪ್ರಯಾಣಿಕರಿಗೆ ಸಮರ್ಪಕ ಸಾರಿಗೆ ಒದಗಿಸುವ ಉದ್ದೇಶದಿಂದ ಸೆಪ್ಟಂಬರ್ 02 ರಿಂದ ಸೆಪ್ಟಂಬರ್ 04 ರವರೆಗೆ ಹೆಚ್ಚುವರಿ ಬಸ್‌ಗಳು ಸಂಚರಿಸಲಿವೆ. ಬೆಂಗಳೂರಿನಿಂದ ಕೇರಳ ರಾಜ್ಯದ ಈ ಕೆಳಕಂಡ ಸ್ಥಳಗಳಿಗೆ ಹಾಲಿ ಕಾರ್ಯಾಚರಿಸುತ್ತಿರುವ ಸಾರಿಗೆಗಳ ಜೊತೆಗೆ 90 ಹೆಚ್ಚುವರಿ ಬಸ್ಸುಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ನಿಗಮದ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಬಸ್ ಸಂಚಾರ ಮಾರ್ಗಗಳು ಯಾವುವು?
ಕೇರಳ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ 07.09.2025 ರಂದು ವಿಶೇಷ ವಾಹನಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಕೇರಳ ರಾಜ್ಯಕ್ಕೆ ಅಂದರೆ ಕಣ್ಣೂರು, ಕೋಜಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ, ತಿರುವನಂತಪುರಂ ಮುಂತಾದ ಸ್ಥಳಗಳಿಗೆ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲಾಗುತ್ತಿದೆ. ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಸಂಚರಿಸಲಿವೆ ಎಂದರು.
ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸಬೇಕು.
ಟಿಕೆಟ್ ಬುಕ್ಕಿಂಗ್ ಸುಲಭ, ಈ ಲಿಂಕ್ ನೋಡಿ
ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡುವವರು ನಿಗಮದ ಈ ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಮೂಲಕ ಸೀಟು ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ಸಿಗಲಿದೆ. ಎರಡು ಬದಿಯ ಪ್ರಯಾಣದ ಟಿಕೆಟ್ ಅನ್ನು ಮುಂಗಡವಾಗಿ ಒಟ್ಟಿಗೆ ಕಾಯ್ದಿರಿಸಿದವರಿಗೆ ಟಿಕೆಟ್ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳು ಇವೆ. ಅವುಗಳ ಮೂಲಕ ಮುಂಗಡ ಆಸನಗಳನ್ನು ಬುಕ್ ಮಾಡಬಹುದಾಗಿದೆ.
ಕಾರ್ಯಾಚರಣೆ ಮಾಡಲಾಗುವ ಹೆಚ್ಚುವರಿ ಸಾರಿಗೆಗಳು, ಅವುಗಳು ಹೊರಡುವ ಸ್ಥಳ ಹಾಗೂ ವೇಳಾ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ಜಾಲ ವ್ಯವಸ್ಥೆಯಲ್ಲಿ ಹಾಗೂ KSRTC ನಿಗಮದ ವೆಬ್‌ಸೈಟ್‌ನಲ್ಲಿ ಸಾರ್ವಜನಿಕ ಮಾಹಿತಿಗಾಗಿ ಒದಗಿಸಲಾಗಿದೆ. ಸದರಿ ಹೆಚ್ಚುವರಿ ಸಾರಿಗೆಗಳಲ್ಲಿ ಸಂಚರಿಸುವ ಪ್ರಯಾಣಿಕರು ಕಾಯ್ದಿರಿಸುವ ಮುಂಗಡ ಚೀಟಿಗಳಲ್ಲೂ ಕೂಡ ವಾಹನ ಹೊರಡುವ ಸ್ಥಳದ ವಿವರ ನಮೂದಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications