ಕೋರಮಂಗಲ: ಪೊಲೀಸ್ ಪರೀಕ್ಷೆ ವೇಳೆ ಅಭ್ಯರ್ಥಿ ಸಾವು
ಬೆಂಗಳೂರು, ಜೂನ್ 24: ಕಠಿಣ ದೈಹಿಕ ಪರೀಕ್ಷೆ ವೇಳೆ ಮುಗ್ಧ ಅಭ್ಯರ್ಥಿಗಳು ಅಸುನೀಗುತ್ತಿರುವುದು ಇದೇ ಮೊದಲಲ್ಲ. ಒಂದು ವಾರದ ಹಿಂದೆ ಉತ್ತರ ಭಾರತದಲ್ಲಿ ಒಬ್ಬ ಯುವ ಅಭ್ಯರ್ಥಿ ಮೈದಾನದಲ್ಲೇ ಪ್ರಾಣಬಿಟ್ಟಿದ್ದ. ಆದರೂ ನೇಮಕ ಮಾಡಿಕೊಳ್ಳುವ ಮೇಲಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇನ್ನೂ ಎಷ್ಟು ಮಂದಿ ಅಮಾಯಕರ ಜೀವಗಳು ಬಲಿಯಾಗಬೇಕೋ ಸರಿಯಾದ ವ್ಯವಸ್ಥೆಯೊಂದು ಜಾರಿಗೆ ಬರಲು.
ನಿನ್ನೆ ಏನಾಯಿತೆಂದರೆ ಬೆಂಗಳೂರು ಗ್ರಾಮಾಂತರದ ಅತ್ತಿಬೆಲೆಯ ನಿವಾಸಿ ಚಂದ್ರಶೇಖರ್ ಅನಂದಪ್ಪ (21) ಕೋರಮಂಗಲದಲ್ಲಿರುವ ಸಶಸ್ತ್ರ ಮೀಸಲು ಪೊಲೀಸ್ ಪಡೆಗೆ (KSRP) ಪೇದೆಯಾಗಿ ನೇಮಕವಾಗಲು ನಿನ್ನೆ ಸೋಮವಾರ ಕಸರತ್ತು ನಡೆಸುತ್ತಿದ್ದಾಗ ಪೊಲೀಸ್ ಮೈದಾನದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಂದಹಾಗೆ ಚಂದ್ರಶೇಖರ್ ಅವರ ತಾತ ಚಂದಪ್ಪ ಸೇನೆಯಲ್ಲಿ ಸುಬೇದಾರ್ ಆಗಿದ್ದರು. ಅವರಂತೆ ತಾನೂ ಶಿಸ್ತುಬದ್ಧ ಉದ್ಯೋಗ ಬಯಸಿ, ಪೊಲೀಸ್ ಇಲಾಖೆಗೆ ನೇಮಕವಾಗಲು ಇನ್ನೂ ಓದುತ್ತಿರುವಾಗಲೇ ಪರೀಕ್ಷೆಗೆ ಕುಳಿತಿದ್ದ. ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ 140 ಅಭ್ಯರ್ಥಿಗಳ ಪೈಕಿ ಚಂದ್ರಶೇಖರ್ ಸಹ ಒಬ್ಬ. ಒಟ್ಟು 160 ಹುದ್ದೆಗಳಿಗೆ 600 ಮಂದಿ ಹಾಜರಾಗಿದ್ದರು.

ಬೆಳಗ್ಗೆ ದೈಹಿಕ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಆರೂವರೆ ನಿಮಿಷದಲ್ಲಿ 1,600 ಮೀಟರ್ ಓಡಬೇಕಿತ್ತು. ಜೀವನದ ಗುರಿಯತ್ತ ಓಟ ಆರಂಭಿಸಿದ ಚಂದ್ರಶೇಖರ ಗುರಿ ತಲುಪಲಾರದೆ 800 ಮೀಟರ್ ದೂರ ಕ್ರಮಿಸಿದ್ದಾಗ ಕುಸಿದುಬಿದ್ದಿದ್ದಾನೆ. ('ಆಪ್ತ' ಸಿಬ್ಬಂದಿಗೆ ಬ್ರೇಕ್: ಸ್ವಜನ ಪಕ್ಷಪಾತಕ್ಕೆ ಪಕ್ಷವಾತ)
ತಕ್ಷಣ ಆತನನ್ನು KSRP ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಉಸಿರಾಟದ ತೊಂದರೆ ಹೆಚ್ಚಾದ ಕಾರಣ ಸೆಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಷ್ಟೊತ್ತಿಗೆ ಚಂದ್ರಶೇಖರ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. (ಚಿಕ್ಕಬಳ್ಳಾಪುರ: ಗ್ರಾಮ ಲೆಕ್ಕಿಗರಾಗಲು ಸುವರ್ಣಾವಕಾಶ)
ಚಂದ್ರಶೇಖರ, ಚಂದಾಪುರದ ಸ್ವಾಮಿ ವಿವೇಕಾನಂದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಅಪ್ಪ-ಅಮ್ಮ ಅಂದಾನಪ್ಪ ಮತ್ತು ಯಶೋದಮ್ಮ ಹಾಗೂ ಅಣ್ಣ ಕೆಎ ರವೀಂದ್ರನನ್ನು ಅಗಲಿದ್ದಾನೆ. (ಚಿತ್ರದಲ್ಲಿ ಚಂದ್ರಶೇಖರ ಮತ್ತು ಆತನ ಸಂಬಂಧಿಕರು)












Click it and Unblock the Notifications