'ಹಿಂದಿ ದಿವಸ್' ಬದಲು ನಾಡಭಾಷೆ ದಿನ ಆಚರಣೆಗೆ ಕೆಆರ್‌ಎಸ್ ಪಕ್ಷದ ಕರೆ

ಬೆಂಗಳೂರು, ಸೆ.13: "ಹಿಂದಿ ದಿವಸ್" ಬದಲಿಗೆ ದೇಶಭಾಷಾ ದಿನ, ನಾಡನುಡಿ ದಿನ ಅಥವಾ ನಾಡಭಾಷೆ ದಿನ" ಎಂದು ಆಚರಿಸಿ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೇಂದ್ರ ಸರಕಾರ, ರಾಜ್ಯ ಸರ್ಕಾರಕ್ಕೆ ಮತ್ತು ರಾಜ್ಯದ ಜನತೆಗೆ ಕರೆ ನೀಡಿದೆ.

ಭಾರತದ ಒಕ್ಕೂಟ ಸರ್ಕಾರವು ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೆಪ್ಟೆಂಬರ್ 14ರಂದು ಬಹಳ ಉಮೇದಿನಿಂದ ನಡೆಸುವ ಸರ್ಕಾರಿ ಪ್ರಾಯೋಜಿತ "ಹಿಂದಿ ದಿವಸ್" ಆಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಕನ್ನಡಿಗರಿಗಂತೂ ಇದು ಒಪ್ಪಿತವಲ್ಲದ ವಿಚಾರ. ವೈಯಕ್ತಿಕ ಇಚ್ಚೆಯಿಂದ ಯಾರು ಯಾವುದನ್ನು ಬೇಕಾದರೂ ಕಲಿಯಬಹುದು. ಆದರೆ ಕೃತಕ ಅನಿವಾರ್ಯತೆಯನ್ನು ಸೃಷ್ಟಿಸಿ ಬಲವಂತವಾಗಿ ಹೇರಿಕೆ ಮಾಡುವುದು ಮಾನವ ಹಕ್ಕುಗಳ ಉಲ್ಲಂಘನೆ. ಜೊತೆಗೆ ಜನರ ತೆರಿಗೆ ಹಣದ ದುರ್ಬಳಕೆ ಎಂದು ಕೆಆರ್‌ಎಸ್ ಪಕ್ಷ ಆರೋಪಿಸಿದೆ.

ಇಂಗ್ಲಿಷ್ ವಿರೋಧಿಸುವ ವಿಚಾರವೇ ಅರ್ಥಹೀನ

ಇಂಗ್ಲಿಷ್ ವಿರೋಧಿಸುವ ವಿಚಾರವೇ ಅರ್ಥಹೀನ

"ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರತೀಯರು ಬ್ರಿಟಿಷರಿಗೆ ಎಲ್ಲಾ ಹಂತಗಳಲ್ಲಿಯೂ ಅಸಹಕಾರ ತೋರಬೇಕು, ಬ್ರಿಟಿಷ್ ಸರ್ಕಾರದ ನೌಕರಿಗಳನ್ನು ತೊರೆಯಬೇಕು, ಹಾಗೆಯೇ ಬ್ರಿಟಿಷರ ಭಾಷೆಯಾದ ಇಂಗ್ಲಿಷ್ ಬದಲಿಗೆ ಅಂದು ಭಾರತದ ಅತಿ ಹೆಚ್ಚು ಜನ ಮಾತನಾಡುವ ಭಾಷೆಯಾಗಿದ್ದ ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟು ರಾಷ್ಟ್ರವಾದ ಬೆಳೆಸಬೇಕು ಎನ್ನುವ ಹಿನ್ನೆಲೆಯಲ್ಲಿ ಅಂದಿನ ಚಾರಿತ್ರಿಕ ಸಂದರ್ಭದ ತುರ್ತು ಮತ್ತು ಉದಾತ್ತ ಧೋರಣೆಯಿಂದ ಮಹಾತ್ಮ ಗಾಂಧಿಯವರು ಹಿಂದಿ ಭಾಷೆಗೆ ಪ್ರಾಮುಖ್ಯತೆ ಕೊಟ್ಟಿದ್ದರು. ಅದೇ ಸಮಯದಲ್ಲಿ ಮಹಾತ್ಮ ಗಾಂಧಿಯವರು ಮಾತೃಭಾಷೆಯ ಉಗ್ರ ಪ್ರತಿಪಾದಕರೂ ಆಗಿದ್ದರು" ಎಂದಿದೆ.

"ಇದು ಸ್ವಾತಂತ್ರ್ಯ ಹೋರಾಟದ ಸಂದರ್ಭವೂ ಅಲ್ಲ, ಈಗ ಹಿಂದಿಯೇತರರು ಹಿಂದಿಯನ್ನು ಕಲಿಯಲೇಬೇಕಾದ ಅಗತ್ಯ/ಅನಿವಾರ್ಯತೆಯೂ ಇಲ್ಲ. ಸರ್ಕಾರಗಳೇ ಮುಂದೆ ನಿಂತು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುತ್ತಿರುವ ಸಂದರ್ಭದಲ್ಲಿ ಇಂಗ್ಲಿಷ್ ಅನ್ನು ವಿರೋಧಿಸುವ ವಿಚಾರವೇ ಅರ್ಥಹೀನ" ಎಂದು ತಿಳಿಸಿದೆ.

ಹಿಂದಿ ದ್ರಾವಿಡ ಭಾಷೆ ಜನರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ಹೊರೆ

ಹಿಂದಿ ದ್ರಾವಿಡ ಭಾಷೆ ಜನರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ಹೊರೆ

"ತ್ರಿಭಾಷಾ ಸೂತ್ರ ಎನ್ನುವುದು ದಕ್ಷಿಣ ಭಾರತದ ರಾಜ್ಯಗಳಿಗೆ ಅಥವಾ ಹಿಂದಿಯೇತರ ಆಡಳಿತ ಭಾಷೆ ಹೊಂದಿರುವ ರಾಜ್ಯಗಳಿಗೆ ಮಾತ್ರ ಅನ್ವಯವಾಗುವುದು ಹಿಂದಿಯೇತರ ಭಾಷೆಗಳ ಜನರಿಗೆ ಅವಮಾನಕಾರಿ ಮತ್ತು ಒಪ್ಪಿತವಲ್ಲದ್ದು. ಹಿಂದಿ ರಾಜ್ಯಭಾಷೆಯಾಗಿರುವ ಯಾವ ರಾಜ್ಯಗಳಲ್ಲಿ ಕನ್ನಡವೂ ಸೇರಿದಂತೆ ಯಾವ ದ್ರಾವಿಡ ಭಾಷೆಯನ್ನು ಅಲ್ಲಿ ಮೂರನೇ ಭಾಷೆಯಾಗಿ ಕಲಿಸಲಾಗುತ್ತಿದೆ? ಇದು ತಾರತಮ್ಯ ನಡವಳಿಕೆ ಮತ್ತು ವಿಶೇಷವಾಗಿ ದ್ರಾವಿಡ ಭಾಷೆಗಳ ಜನರ ಮೇಲೆ ಹೇರಲಾಗುತ್ತಿರುವ ಸಾಂಸ್ಕೃತಿಕ ಹೊರೆ" ಎಂದು ಆರೋಪಿಸಿದೆ.

ಹಿಂದಿ ದಿವಸ್ ಅನ್ನು

ಹಿಂದಿ ದಿವಸ್ ಅನ್ನು "ದೇಶಭಾಷಾ ದಿನ" ಎಂದು ಘೋಷಿಸಿ

'ದೇಶವಾಸಿಗಳೆಲ್ಲ ಹಿಂದಿ ಕಲಿಯುವ ಅಥವ "ಹಿಂದಿ ದಿವಸ್" ಆಚರಣೆ ಮಾಡಬೇಕಾದ ಚಾರಿತ್ರಿಕ ಹಿನ್ನೆಲೆ ಈಗ ಅಪ್ರಸ್ತುತವಾಗಿರುವ ಕಾರಣ ಭಾರತದ ಒಕ್ಕೂಟ ಸರಕಾರವು ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ವಿರೋಧಿ ಭಾವ ಬೆಳೆಯುವಂತೆ ಮಾಡುವ ಬದಲಿಗೆ ದೇಶಭಾಷೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಆ ನಿಟ್ಟಿನಲ್ಲಿ ಹಿಂದಿ ದಿವಸ್ ಅನ್ನು "ದೇಶಭಾಷಾ ದಿನ" ಎಂದು ಘೋಷಿಸಬೇಕು. ಅಂದು ರಾಜ್ಯ ಸರ್ಕಾರಗಳು "ನಾಡಭಾಷೆ ದಿನ" ಆಚರಿಸಿ ಆಯಾ ರಾಜ್ಯದ ಅಧಿಕೃತ ಆಡಳಿತ ಭಾಷೆಯನ್ನು ಸರ್ಕಾರದ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿಯಾಗಿ ಅಳವಡಿಸುವ ಯೋಜನೆಗಳ ಅನುಷ್ಟಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದೆ.

ಹಿಂದಿ ದಿವಸ್‌ಗೆ ಪರ್ಯಾಯವಾಗಿ

ಹಿಂದಿ ದಿವಸ್‌ಗೆ ಪರ್ಯಾಯವಾಗಿ "ನಾಡಭಾಷೆ ದಿನ" ಆಚರಿಸಿ

ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ "ಹಿಂದಿ ದಿವಸ್" ಅನ್ನು ಸಂಪೂರ್ಣವಾಗಿ ತಿರಸ್ಕರಿಸಿ ಅಂದು ಅದಕ್ಕೆ ಪರ್ಯಾಯವಾಗಿ "ನಾಡಭಾಷೆ ದಿನ" ಆಚರಿಸಬೇಕು ಮತ್ತು ಸರ್ಕಾರದ ಜೊತೆ ನಡೆಸುವ ಎಲ್ಲಾ ಪತ್ರ ವ್ಯವಹಾರಗಳನ್ನು ಕನ್ನಡದಲ್ಲಿಯೇ ಮಾಡಲು ಮುಂದಾಗಬೇಕು ರಾಜ್ಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆಯುವ ಪ್ರತಿಯೊಬ್ಬರೂ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕು. ಕನ್ನಡ ಭಾಷೆಯ ವಿಚಾರದಲ್ಲಿ ಮತ್ತು ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅಳವಡಿಸುವ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ" ಎಂದು KRS ಪಕ್ಷವು ಘೋಷಿಸಿದೆ.

ಸೋಮವಾರವಷ್ಟೇ ಸೆಪ್ಟೆಂಬರ್ 14ರಂದು ನಡೆಯುವ ಹಿಂದಿ ದಿವಸ ಆಚರಣೆಗೆ ರಾಜ್ಯ ಸರ್ಕಾರ ರಾಜ್ಯದ ಜನರ ತೆರಿಗೆ ಹಣ ಬಳಸಬಾರದು, ಇದರಿಂದ ನಾಡಿನ ಜನತೆಗೆ ಅನ್ಯಾಯ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+