ಕನ್ನಡಿಗರ ಅಭಿಮಾನ ಬಡಿದೆಬ್ಬಿಸಿದ 'ಕೋಟಿ ಕಂಠ ಗಾಯನ': ಅಶ್ವಥ್
ಬೆಂಗಳೂರು, ಅಕ್ಟೋಬರ್ 28: 'ಕೋಟಿ ಕಂಠ ಗಾಯನ'ವು ಪ್ರತಿಯೊಬ್ಬರಲ್ಲೂ ಕನ್ನಡ ಮತ್ತು ಕರ್ನಾಟಕದ ಬಗೆಗಿನ ಅಭಿಮಾನವನ್ನು ಬಡಿದೆಬ್ಬಿಸಿದ ಅಭೂತಪೂರ್ವ ಕಾರ್ಯಕ್ರಮವಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಹೇಳಿದರು.
67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ 'ಕೋಟಿ ಕಂಠ ಗಾಯನ'ವು ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯ 18ನೇ ಅಡ್ಡರಸ್ತೆಯಲ್ಲಿರುವ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಒಟ್ಟು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಕನ್ನಡಾಭಿಮಾನಿಗಳು ಕನ್ನಡ ಹಾಡು ಹಾಡಿ ಸಮಾರಂಭಕ್ಕೆ ಮೆರಗು ತಂದರು.
ಈ ವೇಳೆ ಮಾತನಾಡಿದ ಡಾ. ಸಿ. ಎನ್. ಅಶ್ವಥ್ ನಾರಾಯಣ್ ಅವರು, ಈ ಅಭೂತಪೂರ್ವ ಸಮಾರಂಭದಲ್ಲಿ ಮಲ್ಲೇಶ್ವರಂನ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜು, ಎಂಎಲ್ಎ ಕಾಲೇಜು, ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜು ಮುಂತಾದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಕರ್ನಾಟಕದಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದೆ. ಇಷ್ಟು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿರುವುದ ಸಂತ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ನೆರೆದಿದ್ದವರೆಲ್ಲರೂ ಸಾಮೂಹಿಕವಾಗಿ ಕುವೆಂಪು ಅವರ 'ಜಯ್ ಭಾರತ ಜನನಿಯ ತನುಜಾತೆ' ಮತ್ತು 'ಬಾರಿಸು ಕನ್ನಡ ಡಿಂಡಿಮವ', ಹುಯಿಲಗೋಳ ನಾರಾಯಣರಾಯ ರವರ 'ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು', ಡಿ. ಎಸ್.ಕರ್ಕಿ ಅವರ 'ಹಚ್ಚೇವು ಕನ್ನಡದ ದೀಪ', ಚೆನ್ನವೀರ ಕಣವಿ ಅವರ 'ವಿಶ್ವ ವಿನೂತನ ವಿದ್ಯಾ ಚೇತನ' ಮತ್ತು ಹಂಸಲೇಖ ಅವರ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಕನ್ನಡ ಗೀತೆಗಗಳನ್ನು ಮೊಳಗಿಸಿದರು.
ಕಾರ್ಯಕ್ರಮದಲ್ಲಿ ಇದರೊಂದಿಗೆ ಸ್ವತಃ ಸಚಿವರೇ ಕನ್ನಡ ಧ್ವಜವನ್ನು ಹಿಡಿದು, ಮೈದಾನದ ಸುತ್ತ ಹೆಜ್ಜೆ ಹಾಕಿ, ನೆರೆದಿದ್ದವರಿಗೆ ಹುರುಪು ತುಂಬಿದರು. ವಿವಿಧ ಶಿಕ್ಷಣ ಸಂಸ್ಥೆಗಳ, ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.
1,000ಕ್ಕೂ ಹೆಚ್ಚು ಬಿಬಿಎಂಪಿ ಸಿಬ್ಬಂದಿ ಭಾಗಿ; ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೇಂದ್ರ ಕಛೇರಿ ಆವರಣದಲ್ಲಿ ನಡೆದ 'ಕೋಟಿ ಕಂಠ ಗಾಯನ'ದಲ್ಲಿ 1,000ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ/ ವರ್ಗದವರು ಹಾಗೂ 250 ಸಂಗೀತ ಕಲಾವಿದರು ಪಾಲ್ಗೊಂಡು ಹಾಡಿದರು.
ಪಾಲಿಕೆ ಆಡಳಿತಗಾರ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಾಯಿ ಭುವನೇಶ್ವರಿ ಮಾತೆಗೆ ಪುಷ್ಪನಮನ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಕೇಂದ್ರ ಕಛೇರಿ ಹಾಗೂ ಇನ್ನಿತರ ಘಟಕಗಳಲ್ಲಿ, ಪುರಸಭೆ ಮುಂದೆ ಕುವೆಂಪು ಕಲಾನಿಕೇತನ ಸಂಸ್ಥೆ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಇದೇ ರೀತಿ ಬೆಂಗಳೂರಿನ ಅನೇಕ ಕಡೆಗಳಲ್ಲಿ ಸಂಘ, ಸಂಸ್ಥೆ, ಶಾಲಾ ಕಾಲೇಜುಗಳಲ್ಲಿ ಕನ್ನಡ ಗೀತೆ ಗಾಯನ ಕಾರ್ಯಕ್ರಮ ನಡೆದವು.












Click it and Unblock the Notifications