ಬೆಂಗಳೂರಲ್ಲಿ ನಂದಿನಿ ಮಳಿಗೆಗಳಲ್ಲಿ ಸಿಗಲಿದೆ ಸಿರಿಧಾನ್ಯ
ಬೆಂಗಳೂರು, ಅಕ್ಟೋಬರ್ 29 : ಬೆಂಗಳೂರು ಸೇರಿದಂತೆ ಮಹಾನಗರದಲ್ಲಿ ಸಿರಿಧಾನ್ಯಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿರುವ ಕೆಎಂಎಫ್ ನಂದಿನಿ ಮಳಿಗೆಯಲ್ಲಿ ಸಿರಿಧಾನ್ಯ ಮಾರಾಟ ಮಾಡಲು ಯೋಜನೆ ರೂಪಿಸಿದೆ.
ರೈತರಿಗೆ ಹೆಚ್ಚು ಆದಾಯ ತಂದುಕೊಡಲು, ಗ್ರಾಹಕರಿಗೆ ಸುಲಭವಾಗಿ ಸಿರಿಧಾನ್ಯ ಸಿಗುವಂತಾಗಲು ನಂದಿನಿ ಮಳಿಗೆಗಳಲ್ಲಿ ಸಿರಿಧಾನ್ಯ ಮಾರಾಟ ಮಾಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಪ್ರತಿ ಬಡಾವಣೆಗೊಂದರಂತೆ ನಂದಿನಿ ಮಳಿಗೆಗಳಿವೆ.
ಸಣ್ಣ-ಸಣ್ಣ ಪ್ಯಾಕ್‌ಗಳಲ್ಲಿ ಸಿರಿಧಾನ್ಯ ಮಾರಾಟ ಮಾಡುವುದದಿಂದ ಕಡಿಮೆ ಜಾಗ ಸಾಕಾಗುತ್ತದೆ. ಈಗಾಗಲೇ ಹಾಪ್‌ಕಾಮ್ಸ್‌ಗಳಲ್ಲಿ ಸಿರಿಧಾನ್ಯ ಮಾರಾಟ ಮಾಡಲಾಗುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ. ಇದೇ ಮಾದರಿಯಲ್ಲಿ ಕೆಎಂಎಫ್ ಮಾರಾಟ ಮಾಡಲು ಚಿಂತನೆ ನಡೆಸಿದೆ.

ಸಿರಿಧಾನ್ಯಗಳ ಜೊತೆ ಅವುಗಳಿಂದ ತಯಾರಿಸಿದ ಪೌಷ್ಠಿಕಾಂಶದ ತಿನಿಸುಗಳನ್ನು ಮಾರಾಟ ಮಾರಾಟ ಮಾಡಲಾಗುತ್ತದೆ. ಬೆಂಗಳೂರು ನಗರದ ಕೆಲವು ಮಳಿಗೆಗಳಲ್ಲಿ ಪ್ರಾಯೋಗಿಕವಾಗಿ ಮಾರಾಟ ಆರಂಭಿಸಿ, ಬಳಿಕ ಬೇರೆ ನಗರಗಳಲ್ಲಿ ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ.
ನಂದಿನಿ ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಕೆಎಂಎಫ್ ಕಮೀಷನ್ ನೀಡುತ್ತದೆ. ಇದೇ ಮಾದರಿಯಲ್ಲಿ ಸಿರಿಧಾನ್ಯ ಮಾರಾಟಕ್ಕೂ ಕಮೀಷನ್ ನೀಡುವ ಚಿಂತನೆ ನಡೆದಿದೆ. ಇದರಿಂದಾಗಿ ಮಾಲೀಕರಿಗೂ ಹೆಚ್ಚಿನ ಲಾಭವಾಗಲಿದೆ.
ನಗರಗಳಲ್ಲಿರುವ ನಂದಿನಿ ಮಳಿಗೆಗಳಿಗೆ ಜಿಲ್ಲಾ ಸಾವಯವ ಒಕ್ಕೂಟದಿಂದ ಸಿರಿಧಾನ್ಯ ಪೂರೈಕೆ ಮಾಡಲಾಗುತ್ತದೆ. ಒಕ್ಕೂಟಗಳಲ್ಲಿ ರೈತರೇ ಇರುವುದರಿಂದ ಸಿರಿಧಾನ್ಯ ಬೆಳೆಗಾರರಿಗೂ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಕೃಷಿ ಇಲಾಖೆಯದ್ದು.












Click it and Unblock the Notifications