New City: ಬೆಂಗಳೂರು ಬಳಿ 1000 ಎಕರೆಯಲ್ಲಿ KHIR ಸಿಟಿ ಅಭಿವೃದ್ಧಿ: ಅಪ್ಡೇಟ್ ಮಾಹಿತಿ ಕೊಟ್ಟ ಸಚಿವರು
ಬೆಂಗಳೂರು, ಫೆಬ್ರವರಿ 08: ಕರ್ನಾಟಕ ರಾಜ್ಯ ಸರ್ಕಾರ ಈ ಹಿಂದೆಯೇ ಬೆಂಗಳೂರಿನ ಸಮೀಪ 'ನಾಲೆಡ್ಜ್-ಹೆಲ್ತ್- ಇನ್ನೋವೇಶನ್ ಅಂಡ್ ರೀಸರ್ಚ್'ಸಿಟಿ (KHIR) ಸ್ಥಾಪಿಸಲು ಸರ್ಕಾರ ಉದ್ದೇಶಿಸಿತ್ತು. ಅದಕ್ಕೆ ಈಗ ಕಾಲ ಕೂಡಿ ಬಂದಿದ್ದು, ಈ ಸಿಟಿಯ ವಿನ್ಯಾಸ ಹಾಗೂ ರೂಪರೇಷೆ ಕುರಿತು ಮಹತ್ವದ ಮಾಹಿತಿ ಲಭ್ಯವಾಗಿದೆ.
ನಗರದ ಸಮೀಪ 'ನಾಲೆಡ್ಜ್-ಹೆಲ್ತ್- ಇನ್ನೋವೇಶನ್ ಅಂಡ್ ರೀಸರ್ಚ್'ಸಿಟಿ (KHIR) ಸಿಟಿಯ ವಿನ್ಯಾಸ ಮತ್ತು ರೂಪುರೇಷೆ ಕುರಿತು ಬೋಸ್ಟನ್ ಕನ್ಸಲ್ಟೆನ್ಸಿ ಗ್ರೂಪ್ (ಬಿಸಿಜಿ) ಸಿದ್ಧಪಡಿಸಿರುವ ಪ್ರಾತ್ಯಕ್ಷಿಕೆಯನ್ನು ಗುರುವಾರ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ವೀಕ್ಷಿಸಿದರು.

KHIR ಸಿಟಿ ಹಂತ ಹಂತ ಅಭಿವೃದ್ಧಿಗೆ ಸಲಹೆ
ಯೋಜನೆ ಕುರಿತು ಅಧಿಕಾರಿಗಳು ಮತ್ತು ಪರಿಣಿತರೊಂದಿಗೆ ಮೊದಲ ಹಂತದ ಸಮಾಲೋಚನೆ ನಡೆಸಿದರು. ಬಳಿಕ ಮಾತನಾಡಿದ ಎಂಬಿ ಪಾಟೀಲ್ ಅವರು, ಉದ್ದೇಶಿತ ಕೆಎಚ್ಐಆರ್ ಸಿಟಿಯಲ್ಲಿ ಸಂಶೋಧನೆ, ನಾವೀನ್ಯತೆ ಮತ್ತು ಮೂಲ ಮಾದರಿಗಳ ಅಭಿವೃದ್ಧಿಗೆ (ಪ್ರೋಟೋಟೈಪ್ಸ್) ಒತ್ತು ಕೊಡಲಾಗುವುದು. ಇಲ್ಲಿ ತಯಾರಿಕಾ ಚಟುವಟಿಕೆಗಳು ನಡೆಯುವುದಿಲ್ಲ ಎಂದು ತಿಳಿಸಿದರು.
ಮೊದಲ ಹಂತದಲ್ಲಿ ಒಟ್ಟು 1,000 ಎಕರೆಯಲ್ಲಿ ಈ ಸಿಟಿ ಅಭಿವೃದ್ಧಿಗೊಳಿಸಲಿದ್ದೇವೆ. ತಲಾ 200-300 ಎಕರೆಗಳಂತೆ ಹಂತಹಂತವಾಗಿ ಅಭಿವೃದ್ಧಿಪಡಿಸುವಂತೆ ತಜ್ಞರ ಅಭಿಪ್ರಾಯ ವ್ಯಕ್ತವಾಗಿದ್ದು, ಸರ್ಕಾರ ಅನುಸರಿಸಲಿದೆ.

ಖಾಸಗಿ ಉದ್ದಿಮೆಗಳ ಹೂಡಿಕೆಯಲ್ಲಿ ಸಿಟಿ ನಿರ್ಮಾಣ
KHIR ಸಿಟಿ ಸಂಪೂರ್ಣ ಖಾಸಗಿ ಉದ್ದಿಮೆಗಳ ಹೂಡಿಕೆಯಲ್ಲಿ ತಲೆ ಎತ್ತಲಿದೆ. ರಾಜ್ಯ ಸರ್ಕಾರ ಮಾತ್ರ ಅಭಿವೃದ್ಧಿ ಅಗತ್ಯವಾಗಿರುವ ಭೂಮಿಯನ್ನು ಹಸ್ತಾಂತರಿಸಲಿದೆ. ಈ ನಿಮಿತ್ತ ವಿದೇಶಗಳಲ್ಲಿ ಇರುವ ಇಂತಹ ಸಿಟಿಗಳ ಅಧ್ಯಯನ ಈಗಾಗಲೇ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಮ್ಮ ಕನಸಿನ ಈ ಸಿಟಿಯು ಸಾರಿಗೆಗಳಾದ ರಸ್ತೆ, ಮೆಟ್ರೋ, ಸಬರ್ಬನ್ ರೈಲು ಸಂಪರ್ಕಗಳ ಜಾಲ ಸಂಪರ್ಕಿಸುವಂತಿರಬೇಕು. ಅಲ್ಲದೇ ಈ ಸಿಟಿಯಿಂದ ಕೇವಲ ಒಂದು ಗಂಟೆಯಲ್ಲಿ ಬೆಂಗಳೂರು ತಲುಪುವಂತಿರಬೇಕು. ಹೀಗೆ ಹಲವು ವೈಶಿಷ್ಟ್ಯಗಳು ಕೇಳಿ ಬಂದಿವೆ ಎಂದರು.
ಬೃಹತ್ KHIR ಏನೇನು ಸ್ಥಾಪನೆ ಆಗಲಿವೆ? ತಿಳಿಯಿರಿ
ಈ ಸಿಟಿಯ ಶೇಕಡಾ 15ರಷ್ಟು ಜಾಗದಲ್ಲಿ ಸಂಶೋಧನಾ ವಿಶ್ವ ವಿದ್ಯಾಲಯಗಳು, ಶೈಕ್ಷಣಿಕ ವಿದ್ಯಾಸಂಸ್ಥೆಗಳು ಸ್ಥಾಪನೆಗೊಳ್ಳಲಿವೆ. ಇನ್ನೂ ಶೇಕಡಾ 15ರಷ್ಟು ಪ್ರದೇಶದಲ್ಲಿ ಆರೋಗ್ಯಸೇವಾ ಉದ್ದಿಮೆಗಳು, ಶೇಕಡಾ 20ರಷ್ಟು ಜಾಗದಲ್ಲಿ ನಾನಾ ಉದ್ಯಮಗಳ ಆರ್ ಆಂಡ್ ಡಿ ಕೇಂದ್ರಗಳು ಮತ್ತು ಕಾರ್ಪೊರೇಟ್ ಕಚೇರಿಗಳು ಮತ್ತು ಶೇಕಡಾ 10ರಷ್ಟು ಜಾಗದಲ್ಲಿ ಸ್ಟಾರ್ಟಪ್‌ಗಳು ತಲೆ ಎತ್ತಲಿವೆ ಎಂದು ಸಚಿವರು ವಿವರಿಸಿದರು.
ಇದೇ ಸಿಟಿಯ ವ್ಯಾಪ್ತಿಯ ಶೇಕಡಾ 20 ಪ್ರತಿಶತ ಜಾಗದಲ್ಲಿ ವಸತಿ ಸಮುಚ್ಚಯಗಳು (ಅಪಾರ್ಟ್‌ಮೆಂಟ್ಸ್), ಶೇಕಡಾ 15ರಷ್ಟು ಪ್ರದೇಶದಲ್ಲಿ ವಾಣಿಜ್ಯ ಅಂಗಡಿ ಮುಂಗಟ್ಟುಗಳು ಹಾಗೂ ಶೇಕಡಾ 5ರಷ್ಟು ಜಾಗದಲ್ಲಿ ಸರ್ಕಾರಿ ಕಚೇರಿಗಳು ಹಾಗೂ ನಾಗರಿಕ ಸೇವಾಕೇಂದ್ರಗಳು ಅಭಿವೃದ್ಧಿಗೊಳ್ಳಲಿವೆ ಎಂದು ಉದ್ದೇಶಿತ ಯೋಜನೆಯ ಪ್ಲಾನ್ ಬಗ್ಗೆ ತಿಳಿಸಿದರು.
ಹಸಿರಿಗೂ ಯೋಜನೆಯಲ್ಲಿ ಆದ್ಯತೆ
ಮೊದಲ ಹಂತದ ಸಾವಿರ ಎಕರೆಯಲ್ಲಿ ಶೇ.35ರಷ್ಟು ಪ್ರದೇಶವು ಹಸಿರು ಹೊದಿಕೆಗೆ ಮೀಸಲಿಡಬೇಕು ಎಂದು ಸಲಹೆ ಬಂದಿದೆ. ಅಲ್ಲದೆ ತಲಾ ಶೇ.5ರಷ್ಟು ಜಾಗವನ್ನು ರಸ್ತೆಗಳಿಗೆ ಮತ್ತು ಸಾಮಾನ್ಯ ನಾಗರಿಕ ಸೇವೆಗಳಿಗೆ ಇಡಬೇಕು. ಶೇ.55ರಷ್ಟು ಜಾಗವನ್ನು ಕೆಎಚ್ಐಆರ್ ಸಿಟಿಗಾಗಿ ಬಳಸಿಕೊಳ್ಳಬೇಕು ಎಂದು ಪರಿಣಿತರು ತಿಳಿಸಿದ್ದಾರೆ.
ಈ ಸಿಟಿಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಾಗೂ ಮಾಸ್ಟರ್ ಡೆವಲಪರ್ ನಡುವೆ ಸಮನ್ವಯತೆ ಇರುವಂತೆ ನೋಡಿಕೊಳ್ಳಲು ವಿಶೇಷ ಸಂಸ್ಥೆಯೊಂದನ್ನು (ಎಸ್‌ಪಿವಿ) ಸ್ಥಾಪಿಸಬೇಕೆಂಬ ಮಾತುಗಳು ಕೇಳಿ ಬಂದಿವೆ. ಮುಖ್ಯವಾಗಿ ಇಲ್ಲಿ ಹೂಡಿಕೆ ಪ್ರೋತ್ಸಾಹಿಸಲು ಆರು ಬಗೆಯ ಪ್ರೋತ್ಸಾಹಕ ಕ್ರಮಗಳ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಹೇಳಿದರು.
ಇಂದಿನ ಪ್ರಾತ್ಯಾಕ್ಷಿಕೆ ವೀಕ್ಷಣೆ ವೇಳೆ ಬೋಸ್ಟನ್ ಕನ್ಸಲ್ಟನ್ಸಿ ಗ್ರೂಪ್ ನ ಹಿರಿಯ ಸಲಹೆಗಾರ ರಾಂಚ್ ಕಿಮ್ಬಾಲ್, ಕಂಪನಿಯ ಮೂಲಸೌಕರ್ಯ ವಿಭಾಗದ ಮುಖ್ಯಸ್ಥ ಸುರೇಶ್ ಸುಬುಧಿ, ತಜ್ಞ ಅದಿಲ್ ಇಕ್ರಂ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು. ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ ಪಾಲ್ಗೊಂಡಿದ್ದರು.












Click it and Unblock the Notifications