Bengaluru KWIN City: 58000 ಎಕರೆಯಲ್ಲಿ 'ಕ್ವಿನ್ ಸಿಟಿ' ನಿರ್ಮಾಣಕ್ಕೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್
ಬೆಂಗಳೂರು, ಸೆಪ್ಟಂಬರ್ 26: ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ 'ಜ್ಞಾನ, ಆರೋಗ್ಯ ಮತ್ತು ಸಂಶೋಧನಾ ನಗರ' (KWIN City) ನಿರ್ಮಾಣ ಯೋಜನೆಯ ಕಾಮಗಾರಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹರಿರು ನಿಶಾನೆ ತೋರಿಸಿದರು. 2000 ಎಕರೆಯಲ್ಲಿ ಯೋಜನೆ ಮೊದಲ ಹಂತದ ಕಾಮಗಾರಿ ಇಂದಿನಿಂದ ಆರಂಭವಾಯಿತು.
ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೆಂಗಳೂರು ಸಮೀಪದ ಡಾಬಸಪೇಟೆ ಮತ್ತು ದೊಡ್ಡಬಳ್ಳಾಪುರದ ಮಧ್ಯದಲ್ಲಿ ಸ್ಯಾಟ್‌ಲೈಟ್ ಟೌನ್ ರಿಂಗ್ ರಸ್ತೆಯ ಆಸುಪಾಸಿನಲ್ಲಿ ಸುಮಾರು 2000 ಎಕರೆ ಜಾಗದಲ್ಲಿ ಹೊಸ ಕ್ವಿನ್ ಸಿಟಿ ನಿರ್ಮಿಸಲಾಗುತ್ತಿದೆ.

ಈ ಯೋಜನೆ ಮೂಲಕ ಕರ್ನಾಟಕ ದೇಶದ ಜ್ಞಾನಾಧಾರಿತ ಆರ್ಥಿಕತೆಯಲ್ಲಿ ಪ್ರಥಮ ಸ್ಥಾನಕ್ಕೇರಲಿದೆ. ಈ ಕ್ವಿನ್ ಸಿಟಿಯು ಕರ್ನಾಟಕ ಮತ್ತು ಭಾರತದ ಮಟ್ಟಿಗೆ ಹೊಸ ಭಾಷ್ಯ ಬರೆಯಲಿದೆ. ಸಾಕಷ್ಟು ರಂಗಗಳಿಗೆ ಉತ್ತೇಜನ ನೀಡುವ ಈ ಸಿಟಿಯಲ್ಲಿ ಜಾಗತಿಕ ಮಟ್ಟದ ಸಹಭಾಗಿತ್ವ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಸಿಗಲಿದೆ. ಇಲ್ಲಿನ ಜೀವನ ಶೈಲಿ 'ಸ್ಮಾರ್ಟ್ ಲಿವಿಂಗ್' ಆಗಿರಲಿದೆ ಎಂದು ಅವರು ಹೇಳಿದರು.
ಎರಡು ವಾರಗಳಲ್ಲಿ ಕಾವೇರಿ ನೀರು ಪೂರೈಕೆ: ಡಿಕೆಶಿ
ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ಬೆಂಗಳೂರಿನ ಕೈಗಾರಿಕಾ ಬೆಳವಣಿಗೆಗೆ ಹೇರಳ ಅವಕಾಶಗಳಿದ್ದು,ಅವೆಲ್ಲವನ್ನು ನಮ್ಮ ಸರ್ಕಾರ ಸಾಕಾರಗೊಳಿಸಲು ಬದ್ಧವಾಗಿದೆ. ಎರಡು ವಾರಗಳಲ್ಲಿ ಕಾವೇರಿ 5ನೇ ಹಂತದ ಕುಡಿವ ನೀರು ಪೂರೈಕೆ ಆರಂಭವಾಗಲಿದೆ.

ಈ ಯೋಜನೆ ಆರಂಭವಾದ ಬಳಿಕ ರಾಜಧಾನಿಯಲ್ಲಿ ಮುಂದಿನ ಎರಡು ದಶಕಗಳ (20 ವರ್ಷ) ಕಾಲ ಕುಡಿಯುವ ನೀರಿನ ಕೊರತೆಯಾಗಲಿ, ವಿದ್ಯುತ್ ಸಮಸ್ಯೆ ಆಗಲಿ ತಲೆದೂರುವುದಿಲ್ಲ. ಇನ್ನು ಟ್ರಾಫಿಕ್ ವ್ಯವಸ್ಥೆಯಲ್ಲಿ ಸಮಸ್ಯೆ ಇರುವುದು ನಿಜ. ಅದನ್ನು ಕ್ಷಿಪ್ರಗತಿಯಲ್ಲಿ ಬಗೆಹರಿಸಲು ಸರ್ಕಾರ ದಿಟ್ಟ ಹೆಜ್ಜೆ ಇಡಲಿದೆ. ರಾಜ್ಯದಲ್ಲಿ ಇರುವಷ್ಟು ಕೈಗಾರಿಕೆಗಳಿಗೆ ಬೇಕಾದ ಅಗತ್ಯ ಸಂಪನ್ಮೂಲ ಬೇರೆಲ್ಲೂ ಸಿಗುವುದಿಲ್ಲ ಎಂದು ಅವರು ಹೇಳಿದರು.
ಕ್ವಿನ್ ಸಿಟಿ ಯೋಜನೆ ವೆಚ್ಚ, ವೈಶಿಷ್ಟ್ಯತೆಗಳು, ಇತರ ಮಾಹಿತಿ
ಸಮಾರಂಭದಲ್ಲಿ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರು ಮಾತನಾಡಿ, ಆರಂಭದಲ್ಲಿ 2000 ಎಕರೆ ಯೋಜನೆ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 500 ಎಕರೆಯಲ್ಲಿ ಯೋಜನೆ ಆರಂಭಿಸಲಾಗುವುದು ಎನ್ನಲಾಗಿತ್ತು. ಆದರೆ ಈಗ ಕ್ವಿನ್ ಸಿಟಿ ಯೋಜನೆ ಒಟ್ಟಾರೆ 5,800 ಎಕರೆಯಲ್ಲಿ ಅಭಿವೃದ್ಧಿ ಆಗಲಿದೆ. ಪ್ರಥಮ ಹಂತದಲ್ಲಿ 2,000 ಎಕರೆಯಲ್ಲಿ ಸಾಕಾರಗೊಳ್ಳಲಿದೆ.
ಈ ವಿನೂತನ ನಗರದಲ್ಲಿ ಐದು ಲಕ್ಷ ಜನರು ವಾಸಿಸಲಿದ್ದಾರೆ. ವಿನೂತನ ನಗರದ ಪರಿಧಿಯಲ್ಲಿ ಶೇಕಡಾ 40ರಷ್ಟು ಜಾಗದಲ್ಲಿ ಉದ್ಯಾನಗಳು ತಲೆಎತ್ತಲಿವೆ. 0.69 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕಕ್ಕೆ 465 ಎಕರೆ, ವರ್ಷಕ್ಕೆ 7 ಸಾವಿರ ಟನ್ ಹಣ್ಣು-ತರಕಾರಿ ಬೆಳೆಯಲು 200 ಎಕರೆ, ಶೇಕಡ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆ ಇರಲಿದೆ ಎಂದು ವಿವರಿಸಿದರು.
500 ವಿವಿ ಕ್ಯಾಂಪಸ್, 40,000 ಕೋಟಿ ವೆಚ್ಚದ
ಈ ನಗರದಲ್ಲಿ ಗುಣಮಟ್ಟದ ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳ ಸ್ಥಾಪನೆ ಆಗಲಿವೆ. ಜಗತ್ತಿನ 500 ವಿಶ್ವವಿದ್ಯಾಲಯಗಳ ಕ್ಯಾಂಪಸ್ ತೆರೆಯಲಾಗುತ್ತದೆ. ಉನ್ನತ ದರ್ಜೆಯ ದರ್ಜೆಯ ಆಸ್ಪತ್ರೆಗಳು, ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಮತ್ತು ವೈದ್ಯಕೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಒಟ್ಟಿನಲ್ಲಿ 40 ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆ ಇದಾಗಿದೆ ಎಂದು ಅವರು ತಿಳಿಸಿದರು.












Click it and Unblock the Notifications