Second Airport: ತಮಿಳುನಾಡಿಗೆ ಠಕ್ಕರ್ ಕೊಡಲಿದೆ ಕರ್ನಾಟಕ ಸರ್ಕಾರ, ಏನಿದು ಪ್ಲಾನ್?
ಬೆಂಗಳೂರು, ಜುಲೈ 17: ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯತೆ, ಹೊಸ ಏರ್‌ಪೊರ್ಟ್ ಸ್ಥಾಪನೆ ಬಗ್ಗೆ ನಿಮಗೆಲ್ಲ ಗೊತ್ತೆ ಇದೆ. ಹೊಸ ವಿಷಯವೆಂದರೆ ಚಿತ್ರದುರ್ಗ ಮತ್ತು ತುಮಕೂರು ಮಧ್ಯೆ ಈ ನಿಲ್ದಾಣ ಸ್ಥಾಪನೆ ಆಗಲಿದೆ ಎಂಬ ಮಾತು ಇತ್ತು. ಆದರೆ ಅದು ನಿಜವಲ್ಲ ಎಂದು ಖುದ್ದು ಮೂಲ ಸೌಕರ್ಯಾಭಿವೃದ್ಧಿ ಸಚಿವ ಎಂಬಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆ ಈ ಕುರಿತು ಉತ್ತರಿಸಿದ ಸಚಿವರು, ಬೆಂಗಳೂರು ಸುತ್ತಮುತ್ತಲಿನ 50ರಿಂದ 60 ಕಿಲೋ ಮೀಟರ್ ವ್ಯಾಪ್ತಿಯಲ್ಲಿಯೇ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವುದಾಗಿ ಅವರು ತಿಳಿಸಿದ್ದಾರೆ.

ಈ ಮೂಲಕ ಬೆಂಗಳೂರಿನಿಂದ ದೂರದಲ್ಲಿ ಏರ್‌ಪೋರ್ಟ್ ನಿರ್ಮಾಣ ಆಗಲಿದೆ ಎಂದಕೊಂಡವರಿಗೆ ಉತ್ತರ ಸಿಕ್ಕಂತಾಗಿದೆ. ಅಲ್ಲದೇ, ಬೆಂಗಳೂರು ಪಕ್ಕದ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿರ್ಮಿಸುವುದಾಗಿ ತಿಳಿಸಿದ್ದ ತಮಿಳುನಾಡಿಗೆ ಕರ್ನಾಟಕ ಠಕ್ಕರ್ ಕೊಡಲಿದೆ.
6ರಿಂದ 7 ಕಡೆ ಜಾಗ ಗುರುತಿಸುವಿಕೆ ಅಂತಿಮ
ವಿಶೇಷವೆಂದರೆ ಈಗಾಗಲೇ 6ರಿಂದ 7 ಕಡೆಗಳಲ್ಲಿ ಸುಮಾರು 500 ಸಾವಿರ ಎಕರೆ ಜಾಗವನ್ನು ಗುರುತಿಸಲಾಗಿದೆ. ಅದರಲ್ಲಿ ಯಾವುದಾದರು ಒಂದನ್ನು ಕೇಂದ್ರ ಸರ್ಕಾರದಿಂದ ಅನುಮತಿ ಪಡೆದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ತುಮಕೂರು ಹಾಗೂ ಚಿತ್ರದುರ್ಗ ನಡುವೆ ಏರ್‌ಪೋರ್ಟ್ ನಿರ್ಮಿಸುವ ಯಾವ ಪ್ರಸ್ತಾಪ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಬೆಂಗಳೂರಿನ ಸುತ್ತಮುತ್ತ ವಿಮಾನ ನಿಲ್ದಾಣ ನಿರ್ಮಿಸಲಾಗುವುದು. ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿಮಾನ ನಿಲ್ದಾಣ ನಿರ್ಮಿಸುವಂತೆ ಒತ್ತಡ, ಮನವಿ ಕೇಳಿ ಬಂದಿವೆ. ಆದರೆ ರಾಜ್ಯ ಸರ್ಕಾರ ನಾಡಿನ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ನಗರದ ಸಮೀಪವೇ ಹೊಸ ಅಂತಾರಾಷ್ಟ್ರೀಯ ಏರ್‌ಪೋರ್ಟ್ ನಿರ್ಮಿಸಲಿದೆ ಎಂದರು.
ಮೆರಿಟ್ ಆಧಾರದಲ್ಲಿ ಜಾಗ ಅಂತಿಮ
ಈಗಾಗಲೇ ಅಧಿಕಾರಿಗಳು ಆರೇಳು ಕಡೆಗಳಲ್ಲಿ ಬೃಹತ್ ಪ್ರಮಾಣದ ಜಾಗ ಗುರುತಿಸಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಜನರಿಗೆ ಅನುಕೂಲ ಆಗುವಂತೆ ವಿಮಾನ ನಿಲ್ದಾಣ ನಿರ್ಮಿಸುವ ಜವಾಬ್ದಾರಿ ಇದೆ. ಹೀಗಾಗಿ ಮೆರಿಟ್ ಆಧಾರದಲ್ಲಿ ಜಾಗ ಅಂತಿಮಗೊಳಿಸಿ ವರದಿ ಸಲ್ಲಿಸಲಾಗುವುದು.
2035ರ ವೇಳೆಗೆ ಹೊಸ ಏರ್‌ಪೋರ್ಟ್ ಸ್ಥಾಪನೆ
ಅಲ್ಲದೇ ಹಾಲಿ ಬೆಂಗಳೂರು ಕೆಂಪೇಗೌಡ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದೆ. 2035ರ ವೇಳೆಗೆ ಇದು ಏರ್‌ಪೋರ್ಟ್‌ನಲ್ಲಿ ಭಾರೀ ಒತ್ತಡ ಉಂಟಾಗಲಿದೆ. ಅಷ್ಟರಲ್ಲಿ ಹೊಸ ಏರ್‌ಪೋರ್ಟ್ ನಿರ್ಮಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ದೇವನಹಳ್ಳಿಯಲ್ಲಿ ಹಾಲಿ ಇರುವ ಏರ್‌ಪೋರ್ಟ್‌ನಿಂದ ಬೆಂಗಳೂರು ಮಾತ್ರವಲ್ಲದೇ ತಮಿಳುನಾಡು, ಆಂಧ್ರಪ್ರದೇಶ ರಾಜ್ಯಗಳ ಪ್ರಮಾಣಿಕರಿಗೂ ಅನುಕೂಲವಾಗಿದೆ. ಹೆಚ್ಚು ಕೈಗಾರಿಕೆ ಹೊಂದಿರುವ ತಮಿಳುನಾಡು ಗಡಿ, ಬೆಂಗಳೂರು ಸಮೀಪ ಹೊಸೂರು ನಿವಾಸಿಗಳಿಗೂ ಅನುಕೂಲವಾಗಿದೆ. ಇದಕ್ಕೆ ಠಕ್ಕರ್ ಕೊಡಲು ತಮಿಳುನಾಡು ಸರ್ಕಾರ ಮುಂದಾಗಿದೆ. ಇದಕ್ಕೆ ಕರ್ನಾಟಕ ರಾಜ್ಯ ಸರ್ಕಾರವೇ ತಿರುಗೇಟು ನೀಡಲು ಮುಂದಾಗಿದೆ.












Click it and Unblock the Notifications