ರಾಜ್ಯದ ಶಿಕ್ಷಕರ ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಆಗ್ರಹ
ಬೆಂಗಳೂರು, ಜೂನ್ 01: ರಾಜ್ಯದ ಶಿಕ್ಷಕರ ಸಮಸ್ಯೆಗಳನ್ನು ಸರ್ಕಾರವು ಗಮನಕ್ಕೆ ತೆಗೆದುಕೊಂಡು ಶೀಘ್ರವೇ ಪರಿಹಾರ ಸೂಚಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇಂದು ಆಗ್ರಹಿಸಿದೆ.
ಸಂಘದ ಕಾರ್ಯಕಾರಿ ಸಮಿತಿ ಸಭೆಯು ಇದೇ ಮೇ 30ರಂದು ನಡೆದಿದ್ದು, ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಶಿಕ್ಷಕರ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದ್ದು, ಇವುಗಳಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಬೇಕು ಎಂದು ಸಂಘ ಕೇಳಿಕೊಂಡಿದೆ.
13/5/2019ರ ನಿರ್ದೇಶಕರ ಟಿಪ್ಪಣಿಯಂತೆ 2014ಕ್ಕೂ ಮೊದಲು ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಒಂದರಿಂದ ಐದನೇ ವರ್ಗಕ್ಕೆ ಸೀಮಿತಗೊಳಿಸಿದ ಆದೇಶವನ್ನು ತಕ್ಷಣ ರದ್ದುಗೊಳಿಸಿ, ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಲಿ ಪದವೀಧರ ಪ್ರಾಥಮಿಕ ಶಿಕ್ಷಕರನ್ನು ಪದವೀಧರ ಶಿಕ್ಷಕರೆಂದು ಪರಿಗಣಿಸಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿ ನಿಗದಿಪಡಿಸಬೇಕು ಎಂದು ಕೇಳಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ಆಗದೇ ಇರುವುದರಿಂದ ಮೂರು ವರ್ಷದ ಒಟ್ಟು ಶೇಕಡಾವಾರು ಪರಿಗಣಿಸಿ, ವರ್ಗಾವಣೆ ಪ್ರಕ್ರಿಯೆ ಆರಂಭಿಸಬೇಕು ಎಂದು ಆಗ್ರಹಿಸಲಾಗಿದೆ.

ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ, ಯುಕೆಜಿ ಆರಂಭಿಸಬೇಕು, ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿರುವ ನ್ಯೂನತೆ ಸರಿಪಡಿಸಿ, ಪ್ರತಿ ವಿಷಯಕ್ಕೆ ಒಬ್ಬ ಶಿಕ್ಷಕರನ್ನು ಪರಿಗಣಿಸಬೇಕು. ಶಿಕ್ಷಕ: ವಿದ್ಯಾರ್ಥಿ ಅನುಪಾತ ಗುರುತಿಸುವಾಗ ಮುಖ್ಯೋಪಾಧ್ಯಾಯ, ದೈಹಿಕ ಶಿಕ್ಷಕರನ್ನು ಹೊರತುಪಡಿಸಿ, ಹೆಚ್ಚುವರಿ ಪ್ರಕ್ರಿಯೆ ಆರಂಭಿಸಬೇಕು ಎಂದು ಕೇಳಿಕೊಂಡಿದೆ. ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸಿನ ಪ್ರಕಾರ ಮುಖ್ಯ ಗುರುಗಳಿಗೆ 10,15,20,25,30 ವರ್ಷದ ಬಡ್ತಿಗಳನ್ನು ನೀಡುವುದರೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಉಪನಿರ್ದೇಶಕರ ಹುದ್ದೆಯವರೆಗೂ ಬಡ್ತಿ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದೆ.
ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜುಲೈ 9ಕ್ಕೆ ಜಿಲ್ಲಾ ಹಂತದಲ್ಲಿ ಜಿಲ್ಲೆಯ ಶಿಕ್ಷಕರನ್ನು ಸೇರಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ. ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ವಿಧಾನಸೌಧ ಚಲೋ ನಡೆಸಲಾಗುವುದೆಂದು ಎಚ್ಚರಿಸಿದೆ. ಈ ಸಂದರ್ಭದಲ್ಲಿ, ರಾಷ್ಟ್ರೀಯ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಅರುಣ ಪ್ರತಾಪರೆಡ್ಡಿ, ಖಜಾಂಚಿ ಎಸ್. ಡಿ, ಗಂಗಣ್ಣವರ, ಸಹಕಾರ್ಯದರ್ಶಿ ಯುವರಾಜ ಕೆ, ಸಂಘಟನಾ ಕಾರ್ಯದರ್ಶಿ ಭಾರತಿ ಇದ್ದರು.












Click it and Unblock the Notifications