ಮುಸ್ಲಿಮರ ಮೀಸಲಾತಿ ರದ್ದು: ರಾಜಕೀಯ ಲಾಭದ ದುರುದ್ದೇಶ ಎಂದ ಸಿದ್ದರಾಮಯ್ಯ
ಬೆಂಗಳೂರು, ಮಾರ್ಚ್. 25: ಇತರ ಹಿಂದುಳಿದ ವರ್ಗಗಳ (ಒಬಿಸಿ) ಕೋಟಾದಡಿಯಲ್ಲಿದ್ದ ಮುಸ್ಲಿಮರ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ಕರ್ನಾಟಕ ಸಂಪುಟ ಶುಕ್ರವಾರ ನಿರ್ಧರಿಸಿದೆ. ಬಿಜೆಪಿ ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದು ಯಾರಿಗೂ ಸಿಗದ "ಕನ್ನಡಿಯೊಳಗಿನ ಗಂಟು" ಎಂದು ಟೀಕಿಸಿದ್ದಾರೆ.
ಮುಂಬರುವ ಕರ್ನಾಟಕ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಪ್ರಬಲ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತರನ್ನು ಒಲೈಸಿಕೊಳ್ಳುವ ಪ್ರಯತ್ನದಲ್ಲಿ ಒಬಿಸಿ ಕೋಟಾದಡಿಯಲ್ಲಿ ಶೇಕಡಾ 4 ರಷ್ಟು ಮೀಸಲಾತಿ ಪಡೆಯುತ್ತಿದ್ದ ಮುಸ್ಲಿಮರ ಮೀಸಲಾತುಯನ್ನು ರದ್ದುಗೊಳಿದೆ. ಮುಸ್ಲಿಮರನ್ನು ಶೇಕಡಾ 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಸೇರಿಸಿದೆ.

ಈ ಬಗ್ಗೆ ತಮ್ಮ ಸಾಮಾಜಕ ಜಾಲತಾಣಗಳಲ್ಲಿ ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಜ್ಯ ಸರ್ಕಾರ ಘೋಷಿಸಿರುವ ಪರಿಷ್ಕೃತ ಮೀಸಲಾತಿ ನೀತಿ 'ಕನ್ನಡಿಯೊಳಗಿನ ಗಂಟು' ಅಷ್ಟೆ. ಚುನಾವಣೆಯಲ್ಲಿ ರಾಜಕೀಯ ಲಾಭದ ದುರುದ್ದೇಶದ ಈ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ. ಇಂತಹ ಗಿಮಿಕ್ ಗಳಿಗೆ ಜನ ಬಲಿಯಾಗಬಾರದು" ಎಂದು ಎಚ್ಚರಿಕೆ ನೀಡಿದ್ದಾರೆ.
"ಹಿಂದುಳಿದ ಜಾತಿಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು ಬಿಜೆಪಿಯ ದುರುದ್ದೇಶ" ಎಂದು ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಹಿಂದುಳಿದ ಜಾತಿಗಳ ಗುಂಪಿನಲ್ಲಿದ್ದ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇಕಡಾ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಲಾಗಿದೆ. ಒಬ್ಬರಿಂದ ಕಿತ್ತು ಇನ್ನೊಬ್ಬರಿಗೆ ನೀಡುವ ಮೂಲಕ ಸಮುದಾಯಗಳ ನಡುವೆ ವೈಮನಸ್ಸು ಬೆಳೆಯುವಂತೆ ಮಾಡುವುದು @BJP4Karnataka ಅವರ ದುರುದ್ದೇಶ. 2/4
— Siddaramaiah (@siddaramaiah) March 24, 2023
ಒಳಮೀಸಲಾತಿ ಬಗ್ಗೆಯೂ ಮಾತನಾಡಿರುವ ಅವರು, "ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿಯ ಅನುಷ್ಠಾನ ಒಂದು ದೀರ್ಘ ಪ್ರಕ್ರಿಯೆ. ಇದಕ್ಕಾಗಿ ಸಂವಿಧಾನದ ಪರಿಚ್ಛೇದ 341ಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಬಗ್ಗೆ ಸಂಪುಟ ಕೈಗೊಂಡಿದ್ದ ತೀರ್ಮಾನವನ್ನು ಇಲ್ಲಿಯ ವರೆಗೆ ಕೇಂದ್ರ ಸರ್ಕಾರಕ್ಕೆ ಕಳಿಸದೆ ಇರುವುದು ರಾಜ್ಯ ಸರ್ಕಾರದ ಅಪ್ರಾಮಾಣಿಕತೆಗೆ ಸಾಕ್ಷಿ" ಎಂದಿದ್ದಾರೆ.
"ಮುಸ್ಲಿಮರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲಾಗಿರುವ ಮೀಸಲಾತಿಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರೂ ಇದು ಸುಲಭ ಸಾಧ್ಯ ಅಲ್ಲ. ಬೇರೆ ರಾಜ್ಯಗಳಲ್ಲಿಯೂ ಮುಸ್ಲಿಂಮರು ಇರುವ ಕಾರಣ ಒಂದು ರಾಜ್ಯದ ವ್ಯಾಪ್ತಿಯಲ್ಲಿ ಮೀಸಲಾತಿ ಮರುಹಂಚಿಕೆ ಮಾಡಲು ಸಾಧ್ಯ ಇಲ್ಲ" ಎಂದು ಸಂಪುಟದ ನಿರ್ಧಾರವನ್ನು ಟೀಕಿಸಿದ್ದಾರೆ.

ಇನ್ನು, ಇತರ ಹಿಂದುಳಿದ ವರ್ಗಗಳ (ಒಬಿಸಿ) ಪ್ರವರ್ಗ 2 ಬಿ ಕೋಟಾದಡಿಯಲ್ಲಿದ್ದ ಮುಸ್ಲಿಮರ 4 ಪ್ರತಿಶತ ಕೋಟಾ ಈಗ ಪ್ರಬಲ ಸಮುದಾಯಗಳಾದ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಗಳ ಪಾಲಾಗಲಿದೆ. ಮುಸ್ಲಿಮರ ಮೀಸಲಾತಿಗೆ ಕತ್ತರಿ ಪ್ರಯೋಗ ಮಾಡಿ ಒಕ್ಕಲಿಗರಿಗೆ ಹಾಗೂ ವೀರಶೈವ ಲಿಂಗಾಯತರಿಗೆ ತಲಾ ಎರಡು ಪ್ರತಿಶತದಷ್ಟು ಹಂಚಿಕೆ ಮಾಡಿ ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಒಬಿಸಿ ವರ್ಗದಿಂದ ಮುಸ್ಲಿಮರನ್ನು ತೆಗೆದುಹಾಕಿ ಶೇಕಡಾ 10 ರಷ್ಟು ಮೀಸಲಾತಿ ಇರುವ ಆರ್ಥಿಕವಾಗಿ ದುರ್ಬಲ ವಿಭಾಗ (ಇಡಬ್ಲ್ಯೂಎಸ್) ಅಡಿಯಲ್ಲಿ ಅವರನ್ನು ಸೇರಿಸಲಾಗಿದೆ.
ಪ್ರಸ್ತುತ, ಒಕ್ಕಲಿಗರು 4 % ಮತ್ತು ಲಿಂಗಾಯತರು 5% ಮೀಸಲಾತಿ ಹೊಂದಿದ್ದಾರೆ. ಸಂಪುಟ ಸಭೆಯ ನಿರ್ಧಾರದ ನಂತರ, ಒಕ್ಕಲಿಗರು ಕ್ರಮವಾಗಿ 2 (ಸಿ) ಮತ್ತು 2 (ಡಿ) ಅಡಿಯಲ್ಲಿ ಕ್ರಮವಾಗಿ ಶೇಕಡಾ 6 ರಷ್ಟು ಮೀಸಲಾತಿ ಮತ್ತು ಲಿಂಗಾಯತರು ಶೇಕಡಾ 7 ರಷ್ಟು ಮೀಸಲಾತಿಯನ್ನು ಪಡೆಯುತ್ತಾರೆ. ಹೀಗೆ ಮೀಸಲಾತಿ ಹೆಚ್ಚಳ ಬಯಸಿದ್ದ ರಾಜಕೀಯವಾಗಿ ಪ್ರಬಲವಾಗಿರುವ ಸಮುದಾಯಗಳನ್ನು ಸಮಾಧಾನಪಡಿಸಲು ಬಿಜೆಪಿ ಸರ್ಕಾರ ಪ್ರಯತ್ನಿಸಿದೆ.












Click it and Unblock the Notifications