ಸ್ಥಳೀಯರಿಗೆ ಅನ್ಯಾಯ ಮಾಡಿ ಪರರಾಜ್ಯದವರಿಗೆ ಸೂರು: ಸರ್ಕಾರದ ನಿರ್ಧಾರಕ್ಕೆ ಕರವೇ ವಿರೋಧ, ಎಚ್ಚರಿಕೆ
ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿ ವಾಸವಿದ್ದ ಪರರಾಜ್ಯದ ನಿವಾಸಿಗಳಿಗೆ ಸರ್ಕಾರ ಆಶ್ರಯ ಯೋಜನೆಯಡಿ ವಸತಿ ಕಲ್ಪಿಸಲು ಮುಂದಾಗಿದ್ದನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಖಂಡಿಸಿದೆ. ಮನೆ ನೀಡುವುದಾದರೆ ಈಗಾಗಲೇ ನಾಡಿನಲ್ಲಿ ಮನೆ ಇಲ್ಲದವರಿಗೆ, ಕನ್ನಡಪರ ಚಳವಳಿಗಾರರಿಗೆ, ರೈತರಿಗೆ ಮನೆ ನೀಡಿ. ವಿವಿಧ ಯೋಜನೆಗಳಿಗಾಗಿ ಕೃಷಿ ಜಮೀನು ಕಳೆದುಕೊಂಡ ಸಂತ್ರಸ್ತರ ಸಮಸ್ಯೆ ಆಲಿಸಲು ಆದ್ಯತೆ ನೀಡುವಂತೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಹೇಳಿದ್ದಾರೆ.
ಯಲಹಂಕದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿ ಕಟ್ಟಲಾಗಿದ್ದ 200ಕ್ಕೂ ಅಧಿಕ ಶೆಡ್‌ಗಳನ್ನು ತೆರವು ಮಾಡಲಾಗಿತ್ತು. ಈ ವಿಚಾರ ರಾಜ್ಯ ಅಂತಾರಾಜ್ಯಗಳಲ್ಲೂ ಚರ್ಚೆ ಆಗುತ್ತಿದೆ. ಪಾಕಿಸ್ತಾನ ಸಹ ಈ ಬಗ್ಗೆ ಪ್ರತಿಕ್ರಿಯಿಸಿದೆ. ತೆರವು ಬಳಿಕ ಇಲ್ಲಿರುವ ಬಾಂಗ್ಲಾ ಮುಸ್ಲಿಮರಿಗೆ, ವಲಸೆಗಾರರಿಗೆ ಮಾನವೀಯತೆ ದೃಷ್ಟಿಯಿಂದ ಸೂರು ಹಂಚಿಕೆ ಮಾಡುವುದಾಗಿ ಸರ್ಕಾರವೇ ಹೇಳಿದೆ. ಇದನ್ನು ಕರವೇ ಖಂಡಿಸಿದ್ದು, ಒಂದು ವೇಳೆ ಪರರಾಜ್ಯದವರಿಗೆ ಫ್ಲಾಟ್/ಮನೆ ನೀಡಿದರೆ ಕನ್ನಡಿಗರು ರಸ್ತೆಗಿಳಿದು ಹೋರಾಡಬೇಕಾಗುತ್ತದೆ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಪರರಾಜ್ಯದ ಒತ್ತುವರಿದಾರರಿಗೆ ಏಕಾಎಕಿ ಫ್ಲಾಟ್ ಏಕೆ?
ಕೋಗಿಲು ಬಡಾವಣೆಯಲ್ಲಿ ಸರ್ಕಾರದ ಒತ್ತುವರಿ ತೆರವು ವಿಚಾರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಮಟ್ಟದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೊಪಾಲ್ ಮೂಗು ತೂರಿಸುವುದು ಏಕೆ? ಇದು ರಾಜ್ಯದ ವಿಚಾರವಾಗಿದೆ. ಇವರಿಗೂ ಕರ್ನಾಟಕಕ್ಕೂ ಏನು ಸಂಬಂಧ! ಎಂದು ಕಿಡಿ ಕಾರಿದರು. ಅಲ್ಲದೇ ವೇಣುಗೋಪಾಲ್ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ರಾಜ್ಯ ಸರ್ಕಾರ ಮನೆ ಹಂಚಿಕೆಗೆ ಮುಂದಾಗಿರುವುದು ಸರಿಯಲ್ಲ. ಅವರ ಮಾತು ಕೇಳಿ ಪರರಾಜ್ಯದವರಿಗೆ ಫ್ಲಾಟ್ ನೀಡಿದರೆ ಸಹಿಸುವುದಿಲ್ಲ ಎಂದರು.
ಸರ್ಕಾರ ಮೊದಲು ಸ್ಥಳೀಯ ಸಮಸ್ಯೆಗೆ ಪರಿಹಾರ ಕೊಡಲಿ
ಕರ್ನಾಟಕ ಸರ್ಕಾರವೇ ತಿಳಿಸಿದಂತೆ 2022-23ರಲ್ಲಿ ಆ ಜಾಗದಲ್ಲಿ ಮನೆಗಳು ಇರಲಿಲ್ಲ. ಕೋಟ್ಯಾಂತರ ರೂಪಾಯಿ ಜಾಗವು ಸರ್ಕಾರಕ್ಕೆ ಸೇರಿದ್ದು. ಅಲ್ಲಿಗೆ ಬಂದ ಪರರಾಜ್ಯದವರು ಏಕಾಎಕಿ ಶೆಡ್ ಹಾಕಿಕೊಂಡಿದ್ದಾರೆ. ಅವರಿಗೆ ಜಾಗ ನೀಡುವ ಬದಲು ಕರ್ನಾಟಕದಲ್ಲಿ ಮನೆ ಇಲ್ಲದ ಮುಸ್ಲಿಮರು, ದಲಿತರಿಗೆ ಕೊಡಿ. ಕನ್ನಡಪರವಾಗಿ ಹೋರಾಡಿದ, ರೈತಪರ ಚಳವಳಿಯಲ್ಲಿ ಕೆಲಸ ಮಾಡಿದ ಹೋರಾಟಗಾರರಿಗೆ ಮನೆ ನೀಡಿ ಎಂದು ಅವರು ಆಗ್ರಹಿಸಿದರು.

ನೆನ್ನೆ ಮೊನ್ನೆ ಬಂದವರ ಮೇಲೆ ಸರ್ಕಾರ ಇಷ್ಟೊಂದು ಕನಿಕರ ತೋರಿಸುತ್ತದೆ ಎಂದಾದರೆ, ಚಿಕ್ಕಮಗಳೂರು ನೆರೆ ಹಾಗೂ ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಬಗ್ಗೆ ಬೆಳಗಾವಿಯಲ್ಲಿ ಕಲ್ಯಾಣನಗರದಲ್ಲಿ ಮೂರು ವರ್ಷ ಧರಣಿ ಮಾಡಿದ್ದ ಪ್ರೇಮಾ ಎಂಬುವವರಿಗೆ ಮನೆ ನೀಡಲು ಸರ್ಕಾರ ಯಾಕೆ ಕಾಳಜಿ ವಹಿಸುತ್ತಿಲ್ಲ? ಎಂದು ಖಾರವಾಗಿ ಪ್ರಶ್ನಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಸಂತ್ರಸ್ತರ ಕಣ್ಣೀರು ಒರೆಸಲು ಸರ್ಕಾರ ಮುಂದಾಗಿಲ್ಲ. ಧಾರವಾಡ ಬಳ್ಳಾರಿಯಲ್ಲಿ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಜಾಗ ನೀಡಿದರೂ ಅರ್ಹರಿಗೆ ಇನ್ನೂವರೆಗೆ ಮನೆ ನೀಡಲಾಗಿಲ್ಲ. ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ದಶಕದಿಂದ ನ್ಯಾಯ ಸಿಕ್ಕಿಲ್ಲ. ಕೆಜಿ ಹಳ್ಳಿ 29 ದಲಿತರ ಮನೆ ತೆರವು ಮಾಡಿದಾಗ ಅವರು ಮನೆ ಕಳೆದುಕೊಂಡರು. ಇದೆಲ್ಲ ಸಮಸ್ಯೆಗಳ ಪರಿಹರಿಸುವತ್ತ ಸರ್ಕಾರ ಗಮನಹರಿಸುವಂತೆ ಅವರು ಸಲಹೆ ನೀಡಿದರು.
ಕೈಗಾ ಅಣುಗಾರಿಕೆ, ಕಾರವಾರದಲ್ಲಿ ಸಿಬರ್ಡ್ ಯೋಜನೆಯಿಂದಾಗಿ ಸ್ಥಳೀಯ ನಿವಾಸಿಗಳಿಗೆ ವರ್ಷಗಳಿಂದಲೂ ಪರಿಹಾರ ಸಿಕ್ಕಿಲ್ಲ. ಮಾಜಿ ಸಚಿವ, ಶಾಸಕ ಆರ್.ವಿ.ದೇಶಪಾಂಡೆ ಅವರು ಸಹ ಕಾರವಾರದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕದ ಅಲೆಮಾರಿಗಳಿಗೆ ಭೂಮಿ ಸಿಕ್ಕಿಲ್ಲ. ಅವರಿಗೆ ಮೂಲಸೌಕರ್ಯಗಳು ಇಲ್ಲ. ಇವರಿಗೆ ಸರ್ಕಾರ ಏನು ಮಾಡಬೇಕೋ ಅದನ್ನು ಮೊದಲು ಮಾಡಬೇಕೆಂದರು.
ಶಿವಮೊಗ್ಗದಲ್ಲಿ ಲಿಂಗನಮಕ್ಕಿ ಡ್ಯಾಂ ನಿರ್ಮಾಣ ಆಗಿದ್ದ ವೇಳೆ ಸಾಗರ, ಹೊಸ ನಗರ ತಾಲೂಕಿನ ನಿರ್ಮಾಣ ಸಂದರ್ಭದಲ್ಲಿ 6000 ಅಧಿಕ ಮಂದಿ ರೈತರ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿಲ್ಲ. ಅನೇಕ ರೈತರಿಗೆ ಪರಿಹಾರ ನೀಡದೇ ಸತಾಯಿಸಲಾಗಿದೆ. ನ್ಯಾಯ ಸಿಕ್ಕಿಲ್ಲ. ರಾಜ್ಯದಲ್ಲಿ ದಶಕಗಳ ಸಮಸ್ಯೆ ಇಟ್ಟುಕೊಂಡಿರುವ ಇಂತಹ ಸಂದರ್ಭದಲ್ಲಿ ಎರಡು ವರ್ಷದ ಹಿಂದಷ್ಟೇ ಬಂದು ಕೋಗಿಲು ಬಡಾವಣೆಯಲ್ಲಿ ಶೆಡ್ ನಿರ್ಮಿಸಿದವರಿಗೆ ಮನೆ ಕಟ್ಟಿಕೊಡುವುದು ಎಷ್ಟು ಸರಿ. ಈ ಹಿಂದೆ ತೆರವು ಮಾಡಿದ್ದ ಒತ್ತುವರಿಯಲ್ಲಿ ಮನೆ ಕಳೆದುಕೊಂಡವರಿಗೆ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದ್ಯತೆ ನೀಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಕರವೇ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.












Click it and Unblock the Notifications