ಕರ್ನಾಟಕ ಮಳೆ: ಸಿಡಿಲು ಬಡಿದು 4 ಮಂದಿ ಸಾವು, ಏಪ್ರಿಲ್ 12ರವರೆಗೂ ಮಳೆ ಮುನ್ಸೂಚನೆ
ಗದಗ, ಏಪ್ರಿಲ್ 07: ಕರ್ನಾಟಕ ರಾಜ್ಯದಲ್ಲಿ ಮುಂದಿನ ಐದು ದಿನವರೆಗೂ ಮಳೆ (ಏಪ್ರಿಲ್ 12) ಗುಡುಗು ಸಹಿತ ಜೋರು ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ದಾಖಲಾದ ಮಳೆಯು ಉತ್ತರ ಕರ್ನಾಟಕ ಭಾಗದ ಜನರ ಜೀವಗಳನ್ನು ಸಹ ಬಲಿ ಪಡೆದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚೆಗೆ ಬಿದ್ದ ಮಳೆಯೇ ವರ್ಷದ ಮೊದಲ ಮಳೆ ಎಂದು ತಿಳಿದು ಬಂದಿದೆ. ಕರಾವಳಿ, ಮಲೆನಾಡು ಭಾಗದ ಜಿಲ್ಲೆಗಳು ಮತ್ತು ಗದಗಿನಲ್ಲಿ ಮಳೆ ಬಿದ್ದಿದೆ. ಈ ಮಳೆಯಿಂದಾಗಿ ಗದಗ ಜಿಲ್ಲೆಯ ಲಿಂಗದಾಳ ಗ್ರಾಮದಲ್ಲಿ ಗುಡುಗು, ಸಿಡಿಲು ಸಹಿತ ಜೋರು ಮಳೆ ದಾಖಲಾಗಿದೆ.

ಈ ಮಹಾಮಳೆಗೆ ಗ್ರಾಮದ ಜಮೀನೊಂದರಲ್ಲಿ ಕುರಿತು ಕಾಯುತ್ತಿದ್ದ ಯುವಕರಿಗೆ ಸಿಡಿಲು ಬಡಿದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಮೃತ ಕುರಿಗಾರರನ್ನು ಶರಣಪ್ಪ ಪುರದ (20) ಮತ್ತು ದೇವರಾಜ್ ಬಾಡಗಿ (16) ಎಂದು ಗುರುತಿಸಲಾಗಿದೆ. ಘಟನೆಯಿಂದಾಗಿ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಮೃತರಿಬ್ಬರಿಗೆ ಸಿಡಿಲು ಬಡಿದ ವೇಳೆ ಅವರ ಸಮೀಪದಲ್ಲೇ ಇದ್ದ ಮತ್ತೊಬ್ಬ 13 ವರ್ಷದ ಬಾಲಕನಿಗೆ ಗಾಯಗಳಾಗಿವೆ. ಗಾಯಾಳು ಬಾಲಕನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ಇನ್ನೂ ಘಟನೆಯಲ್ಲಿ ನಾಲ್ಕು ಕುರಿಗಳು ಒಂದು ಆಡು ಹಸ ಮೃತಪಟ್ಟಿದೆ ಎಂದು ಟಿವಿ ನೈನ್ ಕನ್ನಡ ವರದಿ ಮಾಡಿದೆ. ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅದೇ ರೀತಿ ಬಾಗಲಕೋಟೆ ವ್ಯಾಪ್ತಿಯಲ್ಲಿ ಸಹ ಶುಕ್ರವಾರ ಅಧಿಕ ಮಳೆ ಆಗಿದೆ. ಬಾದಾಮಿ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಮನೆಗೇ ಸಿಡಿಲು ಬಡಿದಿದೆ. ಹೀಗಾಗಿ ಮನೆಯ ಮೇಲ್ಛಾವಣಿ ನಾಶವಾಗಿದೆ. ಇದರಿಂದ ಆ ಮನೆಯಲ್ಲಿದ್ದ ಇಬ್ಬರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಇದರಿಂದ ಇಡಿ ಗ್ರಾಮಸ್ಥರೆ ಮಳೆಗೆ ಭಯಭೀತರಾಗಿದ್ದಾರೆ. ಮೊದಲ ಮಳೆಗೆ ಇಷ್ಟೆಲ್ಲ ಆವಾಂತರಗಳು ಸಂಭವಿಸುತ್ತಿದ್ದು, ಇನ್ನೂ ಮುಂದಿನ ದಿನಗಳಲ್ಲಿ ಸುರಿಯಲಿರುವ ಮಳೆಗೆ ಪರಿಸ್ಥಿತಿ ಹೇಗೆ ಎಂಬ ಪ್ರಶ್ನೆ ಗ್ರಾಮಸ್ಥರನ್ನು ಕಾಡುತ್ತಿದೆ.

ಮನೆ ಮೇಲೆ ಸಿಡಿಲು ಬಡಿತದ ಹೊಡೆತಕ್ಕೆ ಆ ಮನೆಯ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಅವರನ್ನು ಯಂಕುಬಾಯಿ ಕುಲಕರ್ಣಿ (29) ಮತ್ತು ಶಾರದಾ ಪತ್ತಾರ (61) ಮೃತಪಟ್ಟಿದ್ದಾರೆ. ಪ್ರಕರಣ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಜಿಲ್ಲೆ ಜನರಿಗೆ ತಂಪೆರೆದ ಮಳೆರಾಯ
ಕರ್ನಾಟಕದ ವಿವಿಧೆಡೆ ಚುರುಕಾಗಿದ್ದ ಪೂರ್ವ ಮುಂಗಾರು ಮಳೆ ಉತ್ತರ ಕರ್ನಾಟಕ ಭಾಗಕ್ಕೆ ಪಾದಾರ್ಪಣೆ ಮಾಡಿದೆ. ಗದಗ ವಿವಿಧ ಪ್ರದೇಶಗಳಲ್ಲಿ ಜೋರು ಮಳೆ ಬಿದ್ದಿದೆ. ಈ ಮೂಲಕ ಬಿಸಿಲಿಗೆ ತತ್ತರಿಸಿದ್ದ ಜಿಲ್ಲೆಯ ಜನರಿಗೆ ವರುಣ ತಂಪೆರದಿದ್ದಾನೆ. ಜಿಲ್ಲೆ ಹಲವು ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಮಳೆ ದಾಖಲಾಗಿದೆ.
ಕರ್ನಾಟಕದಲ್ಲಿ ಮುಂದಿನ ಐದು ಮಳೆ
ಕರ್ನಾಟಕ ರಾಜ್ಯದಲ್ಲಿ ಮುಂದಿನ ಐದು ದಿನಗಳು ಅಂದರೆ ಏಪ್ರಿಲ್ 12ರವರೆಗೆ ಜೋರು ಮಳೆ ಆಗುವ ಸಂಭವವಿದೆ. ಈ ಪೈಕಿ ಏಪ್ರಿಲ್ 8ರಂದು ಒಂದು ದಿನ ಕರಾವಳಿಯ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವೆಡೆ, ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಧಾರವಾಡ, ಹಾವೇರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಒಂದಷ್ಟು ಕಡೆಗಳಲ್ಲಿ ಮಳೆ ಬೀಳಲಿದೆ. ಇದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ದಾವಣಗೆರೆ, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹಲವೆಡೆ ಮಳೆ ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಕರ್ನಾಟಕ ಕೇಂದ್ರ ಮುನ್ಸೂಚನೆ ನೀಡಿದೆ.












Click it and Unblock the Notifications