ಕರ್ನಾಟಕದ ಚುನಾವಣಾ ಗ್ಯಾರಂಟಿಗಳು ಇತರ ರಾಜ್ಯಗಳಲ್ಲಿ ಪಕ್ಷಕ್ಕೆ ಮಾದರಿಯಾಗಬಹುದು: ಡಿಕೆ ಶಿವಕುಮಾರ್
ಬೆಂಗಳೂರು, ಜೂನ್. 11: ಐದು ಗ್ಯಾರಂಟಿಗಳ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ "ಬಹಳ ಕಠಿಣ ನಿರ್ಧಾರ" ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಗ್ಯಾರಂಟಿಗಳನ್ನು ಆಯಾ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದು ಮಾದರಿಯಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಸರ್ಕಾರಗಳು ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ದೊಡ್ಡ ಉದ್ಯಮಗಳಿಗೆ ಸಹಾಯ ಮಾಡುತ್ತವೆ. ಆದರೆ ಸಾಮಾನ್ಯ ಜನರಿಗೆ ಸಹಾಯ ಮಾಡುವುದು ಹೇಗೆ..? ಆದ್ದರಿಂದ ನಾವು ಗ್ಯಾರಂಟಿಗಳನ್ನು ತರಲು ನಿರ್ಧರಿಸಿದ್ದೇವು" ಎಂದು ಡಿಕೆ ಶಿವಕುಮಾರ್ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಜೊತೆಗೆ ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಬಡತನವು ಮುಖ್ಯ ವಿಷಯಗಳಾಗಿವೆ. ಸೈದ್ಧಾಂತಿಕ ವಿಷಯಗಳಲ್ಲ. ಸೈದ್ಧಾಂತಿಕ ವಿಷಯಗಳು "ಹೊಟ್ಟೆ ತುಂಬುವುದಿಲ್ಲ" ಎಂದು ತಿಳಿಸಿದ್ದಾರೆ.

ಚುನಾವಣಾ ಗ್ಯಾರಂಟಿಗಳ ಕುರಿತು, ಪಕ್ಷದ ಆಯಾ ರಾಜ್ಯ ಘಟಕಗಳು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿರುವ ಅವರು, ಮುಂದಿನ ಒಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಇತರ ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಚುನಾವಣಾ ಗ್ಯಾರಂಟಿ ಮಾದರಿಯಾಗಬಹುದೇ ಎಂಬ ಪ್ರಶ್ನೆಗೆ, ಕರ್ನಾಟಕದಲ್ಲಿ ಅದರ ಪ್ರಚಂಡ ಗೆಲುವಿಗೆ ಇದು ಪ್ರಮುಖ ಅಂಶವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
"ಇದು ಅವರವರ ಆರ್ಥಿಕ ಬಲದ ಮೇಲೆ ಅವಲಂಬಿತವಾಗಿದೆ. ಕರ್ನಾಟಕಕ್ಕೆ ಆರ್ಥಿಕ ಬಲವಿದೆ. ನಾವು ಈ ಗ್ಯಾರಂಟಿಗಳನ್ನು ಏಕೆ ನೀಡಿದ್ದೇವೆ ಬೆಲೆ ಏರಿಕೆಯಿಂದಾಗಿ. ಬೆಲೆಗಳು ಹೆಚ್ಚಾಗಿವೆ, ಆದಾಯವು ತಳ ಹಿಡಿದಿದೆ. ಆದ್ದರಿಂದ ಬೆಲೆ ಏರಿಕೆಯನ್ನು ಸರಿದೂಗಿಸಲು ನಾವು ಯೋಚಿಸಿದ್ದೇವೆ. ಸರ್ಕಾರವು ಜನರಿಗೆ ಸಹಾಯ ಮಾಡಬೇಕು. ಇದು ನಾವು ತೆಗೆದುಕೊಂಡಿರುವ ಅತ್ಯಂತ ಕಠಿಣ ನಿರ್ಧಾರ ಎಂದು ನಮಗೆ ತಿಳಿದಿದೆ" ಎಂದು ಕೆಪಿಸಿಸಿ ಮುಖ್ಯಸ್ಥ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಜೂನ್ 2 ರಂದು ನಡೆದ ಕರ್ನಾಟಕ ಸಚಿವ ಸಂಪುಟವು ಕಾಂಗ್ರೆಸ್‌ನ ಐದು ಚುನಾವಣಾ ಗ್ಯಾರಂಟಿಗಳನ್ನು ಜಾತಿ ಅಥವಾ ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯವಿಲ್ಲದೆ ಜಾರಿಗೆ ತರಲು ನಿರ್ಧರಿಸಿದೆ. ಈ ಹಣಕಾಸು ವರ್ಷದೊಳಗೆ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಮಯವನ್ನು ನಿಗದಿಪಡಿಸಿದೆ.

"ನಾನು ಹೇಳಿದ್ದು ಸರಿ, ಇದು 50,000 ಕೋಟಿಗಿಂತ ಹೆಚ್ಚು ವೆಚ್ಚವಾಗುವ ಯೋಜನೆಗಳು. ಒಂದೇ ದಿನದಲ್ಲಿ, ಒಂದು ಕ್ಯಾಬಿನೆಟ್ ಸಭೆಯಲ್ಲಿ ನಾವು ಸಾಮಾನ್ಯ ಜನರಿಗೆ ಸಹಾಯ ಮಾಡಲು ಎಲ್ಲವನ್ನೂ ಜಾರಿಗೊಳಿಸಿದ್ದೇವೆ. ನಾವು ಅಕ್ಷರಶಃ ಮಾತನ್ನು ನಡೆಸಿದ್ದೇವೆ" ಎಂದು ಹೇಳಿದ್ದಾರೆ.
ಐದು ಗ್ಯಾರಂಟಿಗಳು ಹೀಗಿವೆ. ಎಲ್ಲಾ ಮನೆಗಳಿಗೆ 200 ಯುನಿಟ್ ಉಚಿತ ವಿದ್ಯುತ್ (ಗೃಹ ಜ್ಯೋತಿ), ಪ್ರತಿ ಕುಟುಂಬದ ಮಹಿಳೆಯ ಮುಖ್ಯಸ್ಥರಿಗೆ 2,000 ಮಾಸಿಕ ನೆರವು (ಗೃಹ ಲಕ್ಷ್ಮಿ), ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ 10 ಕೆಜಿ ಉಚಿತ ಅಕ್ಕಿ (ಅನ್ನ ಭಾಗ್ಯ), ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು ₹ 3,000 ಮತ್ತು 18-25 ವರ್ಷ ವಯಸ್ಸಿನ ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ₹ 1,500 (ಯುವನಿಧಿ) ಮತ್ತು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (ಶಕ್ತಿ ಯೋಜನೆ).
2024 ರ ಲೋಕಸಭಾ ಚುನಾವಣೆಯ ಕುರಿತ ಪ್ರಶ್ನೆಗೆ, ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಚುನಾವಣಾ ತಂತ್ರವನ್ನು ಎದುರಿಸಲು ತಮ್ಮ ಪಕ್ಷವು "ಪರ್ಯಾಯ ಯೋಜನೆಗಳನ್ನು" ಮಾಡುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದ ಒಟ್ಟು 28 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.
61 ವರ್ಷದ ಡಿಕೆ ಶಿವಕುಮಾರ್, 2024 ರ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕೈಜೋಡಿಸುತ್ತಿವೆ ಎಂದು ಹೇಳಿಕೊಂಡಿದ್ದು, "ರಾಷ್ಟ್ರ ಮಟ್ಟದ ಬಗ್ಗೆ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಬಿಜೆಪಿ ಮತ್ತು ಜೆಡಿಎಸ್ ಇಬ್ಬರೂ ಕೈಜೋಡಿಸುತ್ತಿದ್ದಾರೆ. ಇದು ನನಗೆ ತಿಳಿದು ಬಂದಿದೆ. ನಮಗೆ ಅಭ್ಯಂತರವಿಲ್ಲ, ಅವರು ಕೈಜೋಡಿಸಲಿ, ಆದರೆ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಸಂಖ್ಯಾಬಲವಿದೆ " ಎಂದು ಶಿವಕುಮಾರ್ ಹೇಳಿದ್ದಾರೆ
ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವೀಪ್ ಮಾಡಿತ್ತು. ಪಕ್ಷೇತರ, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿವೆ.
ಲೋಕಸಭೆ ಚುನಾವಣೆ ಎದುರಿಸಲು ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇತ್ತೀಚೆಗಷ್ಟೇ ದೆಹಲಿಗೆ ಭೇಟಿ ನೀಡಿದ್ದ ಜೆಡಿಎಸ್ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬಿಜೆಪಿಯ ಕೆಲವು ಹಿರಿಯ ನಾಯಕರನ್ನು ಭೇಟಿ ಮಾಡಿದ್ದರು ಎಂದು ಹೇಳಲಾಗಿದೆ. ಆದರೆ ಈ ವರದಿಗಳನ್ನು ಜೆಡಿಎಸ್ ನಿರಾಕರಿಸಿದೆ.












Click it and Unblock the Notifications