ಶ್ರೀನಿವಾಸಗೌಡ ವಿರುದ್ಧ ಹಕ್ಕುಚ್ಯುತಿ ಮಂಡನೆ: ಯಡಿಯೂರಪ್ಪ
ಬೆಂಗಳೂರು, ಜುಲೈ 19: ತಮಗೆ ಬಿಜೆಪಿ ಮುಖಂಡರು ಐದು ಕೋಟಿ ರೂಪಾಯಿ ನೀಡಲು ಮುಂದೆ ಬಂದಿದ್ದರು ಎಂದು ಶುಕ್ರವಾರ ವಿಧಾನಸಭೆಯಲ್ಲಿ ಆರೋಪಿಸಿದ್ದ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ತಿಳಿಸಿದರು.
ಕಲಾಪವನ್ನು 3 ಗಂಟೆಗೆ ಮುಂದೂಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀನಿವಾಸ ಗೌಡ ಅವರದ್ದು ದುರುದ್ದೇಶದ ಹೇಳಿಕೆ. ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಶಾಸಕ ವಿಶ್ವನಾಥ್ ಅವರು ಬಿಜೆಪಿಯಿಂದ 28 ಕೋಟಿ ರೂಪಾಯಿ ಹಣ ಪಡೆದಿದ್ದಾರೆ ಎಂಬ ಸಾರಾ ಮಹೇಶ್ ಹೇಳಿಕೆಗೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ವಿಶ್ವನಾಥ್ ಅವರು ಸದನದಲ್ಲಿ ಇಲ್ಲದೆ ಇರುವಾಗ ಸಾರಾ ಮಹೇಶ್ ಆರೋಪ ಮಾಡಿದ್ದಾರೆ. ವಿಶ್ವನಾಥ್ ಒಬ್ಬ ಪ್ರಾಮಾಣಿಕ ವ್ಯಕ್ತಿ. ಅವರು ಬಂದ ಬಳಿಕ ಸದನದಲ್ಲಿ ಎಲ್ಲರವನ್ನೂ ಚರ್ಚಿಸುತ್ತೇವೆ. ಸಾರಾ ಮಹೇಶ್ ಅವರು ತಮ್ಮ ಬಳಿ ಇರುವ ದಾಖಲೆಗಳನ್ನು ಬಹಿರಂಗಪಡಿಸಲಿ. ಅವರು ವಿಶ್ವನಾಥ್ ಅವರ ಕ್ಷಮೆಯಾಚಿಸಲಿ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿಯ ಅಶ್ವತ್ಥ್ ನಾರಾಯಣ, ಸಿಪಿ ಯೋಗೀಶ್ವರ್ ಮತ್ತು ಎಸ್ ಆರ್ ವಿಶ್ವನಾಥ್ ಅವರು ನಮ್ಮ ಮನೆಗೆ ಬಂದು 5 ಕೋಟಿ ರೂಪಾಯಿ ಮುಂಗಡ ಹಣ ನೀಡಿದ್ದರು. ಆದರೆ, ನಾನು ಅದನ್ನು ತಿರಸ್ಕರಿಸಿದ್ದೆ ಎಂದು ಶ್ರೀನಿವಾಸ ಗೌಡ ಆರೋಪಿಸಿದ್ದರು. ನಾನು ಸಮಾಜಸೇವೆ ಮಾಡಲು ಬಂದವನು. ಮನುಷ್ಯರನ್ನು ಬೆಲೆ ಕಟ್ಟಿ ಕೊಂಡುಕೊಳ್ಳಲು ಹೊರಟಿದ್ದಾರೆ ಎಂದು ಹೇಳಿದ್ದರು.
ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್, ವಿನಾಕಾರಣ ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಶ್ರೀನಿವಾಸ ಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು.












Click it and Unblock the Notifications