ಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ: ಬಿಜೆಪಿ ಲೇವಡಿ
ಬೆಂಗಳೂರು, ಜುಲೈ 22: 'ಯಾರಿಂದ ಸಾಂದರ್ಭಿಕ ಶಿಶು ಜನಿಸಿತ್ತೋ ಅವರಿಂದಲೇ ಸತ್ತಿದೆ. ಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ'- ಇದು ತಾವು 'ಸಾಂದರ್ಭಿಕ ಶಿಶು' ಎಂದು ಹೇಳಿಕೊಂಡಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಲೇವಡಿ ಮಾಡಿದ ಪರಿ.
ಬೆಂಗಳೂರಿನ ಯಲಹಂಕ ಸಮೀಪದ ರಮಾಡ ರೆಸಾರ್ಟ್‌ನಲ್ಲಿ ಸೋಮವಾರ ಬೆಳಿಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಜೀವ ಕಳೆದುಕೊಂಡು ಹಲವು ದಿನಗಳಾಗಿವೆ ಎಂದು ವ್ಯಂಗ್ಯವಾಡಿದರು.
ವಿಶ್ವಾಸಮತ ಯಾಚನೆ ಮಾಡುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ ಸಂದರ್ಭದಿಂದಲೂ ಬಿಜೆಪಿ ಶಾಸಕರು ಬೆಂಗಳೂರು ಬಿಟ್ಟು ಕದಲದಂತೆ ನೊಡಿಕೊಳ್ಳಲು ಪಕ್ಷದ ಎಲ್ಲ ಶಾಸಕರನ್ನೂ ರಮಾಡ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುವಂತೆ ಮಾಡಲಾಗಿದೆ.
ಹೋಟೆಲ್‌ನಲ್ಲಿ ಕ್ರಿಕೆಟ್ ಆಡಿ, ಯೋಗಾಭ್ಯಾಸ ಮಾಡಿ ಸಮಯ ಕಳೆಯುತ್ತಿರುವ ಶಾಸಕರು, ಆಗಾಗ ಸಭೆಗಳನ್ನು ನಡೆಸಿ ಮುಂದಿನ ತಂತ್ರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಸೋಮವಾರ ಬೆಳಿಗ್ಗೆ ಸಹ ಅವರು ಯೋಗಾಭ್ಯಾಸ ನಡೆಸಿದರು.

ಹೆಣ ಇಟ್ಟುಕೊಂಡು ಕೂತಿದ್ದಾರೆ
'ಸಾಂದರ್ಭಿಕ ಶಿಶು ಸತ್ತು 16 ದಿನಗಳಾಗಿವೆ. ಆ ಹೆಣವನ್ನು ವಿಧಾನಸೌಧದಲ್ಲಿ ಇಟ್ಟುಕೊಂಡು ಕೂತಿದ್ದಾರೆ. ಹೆಣ ಹೊರಲು ನಾಲ್ಕು ಜನ ಬರಬಹುದು ಎಂದು ಕಾಯುತ್ತಿದ್ದಾರೆ' ಎಂದು ಪಾಟೀಲ ನಡಹಳ್ಳಿ ಹೇಳಿದರು.
ಸ್ಪೀಕರ್ ರಮೇಶ್ ಕುಮಾರ್ ಇಂದು ವಿಶ್ವಾಸಮತಕ್ಕೆ ಹಾಕುವ ವಿಶ್ವಾಸವಿದೆ. ಸಿದ್ದರಾಮಯ್ಯ ಕೂಡ ಅದನ್ನೇ ಹೇಳಿದ್ದಾರೆ. ಅವರ ಮಾತನ್ನು ನಂಬಿದ್ದೇವೆ ಎಂದು ತಿಳಿಸಿದರು.

ಮಾತೇ ಮಾಣಿಕ್ಯ, ಮಾತೇ ಮನುಷ್ಯತ್ವ
ಮಾತೇ ಮಾಣಿಕ್ಯ, ಮಾತೇ ಮನುಷ್ಯತ್ವ. ಅದರಂತೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ನಡೆದುಕೊಳ್ಳಬೇಕು. ಸ್ಪೀಕರ್ ರಮೇಶ್ ಕುಮಾರ್ ಅವರು ಮೌಲ್ಯಗಳನ್ನು ಎತ್ತಿಹಿಡಿಯುವ ನಿರೀಕ್ಷೆಯಿದೆ. ಅವರ ಮೇಲೆ ಭರವಸೆ ಇದೆ. ವಿಶ್ವಾಸಮತ ಯಾಚನೆ ಮಾಡುವುದಾಗಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿಜೆಪಿಯ ರವಿಕುಮಾರ್ ಹೇಳಿದರು.

ಮಾತಿಗೆ ಬದ್ಧರಾಗಿರಿ- ಯಡಿಯೂರಪ್ಪ
ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸದೆಯೇ ಕಾಲಹರಣ ಮಾಡುವ ಮೂಲಕ ಪ್ರಜಾಪ್ರಭುತ್ವದಕ್ಕೆ ಧಕ್ಕೆ ತಂದಿದ್ದಾರೆ. ಸೋಮವಾರ ವಿಶ್ವಾಸಮತ ಪ್ರಕ್ರಿಯೆ ನಡೆಸುವುದಾಗಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಸ್ಪೀಕರ್ ರಮೇಶ್ ಕುಮಾರ್ ಮಾತು ನೀಡಿದ್ದಾರೆ. ಆ ಪ್ರಕಾರವೇ ಅವರು ನಡೆದುಕೊಳ್ಳಬೇಕು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬಿಜೆಪಿಯಲ್ಲಿ ಆಸೆ-ತಳಮಳ
ಇಂದು ವಿಶ್ವಾಸಮತ ಯಾಚನೆ ನಡೆಯಲಿದೆಯೇ ಅಥವಾ ಕಳೆದ ಮೂರು ದಿನಗಳ ಕಲಾಪದಲ್ಲಿ ನಡೆಸಿದಂತೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಕಲಾಪದಲ್ಲಿ ಚರ್ಚೆಯನ್ನು ನಡೆಸುವ ಮೂಲಕ ಮತ್ತಷ್ಟು ಕಾಲ ಎಳೆಯಲಿದ್ದಾರೆಯೇ ಎಂಬ ಗೊಂದಲ ಬಿಜೆಪಿ ನಾಯಕರಲ್ಲಿ ಮೂಡಿದೆ. ವಿಶ್ವಾಸಮತ ಯಾಚನೆ ನಡೆದು ಸರ್ಕಾರ ಪತನಗೊಳ್ಳಲಿದೆ. ಅತೃಪ್ತ ಶಾಸಕರನ್ನು ತಮ್ಮೆಡೆಗೆ ಸೆಳೆದುಕೊಂಡರೆ ಸರ್ಕಾರ ರಚಿಸಲು ಸಾಧ್ಯ ಎಂಬ ಆಸೆ ಬಿಜೆಪಿಯಲ್ಲಿದೆ. ಆದರೆ ಅದು ಅಷ್ಟು ಸುಲಭವಲ್ಲ. ಸುಪ್ರೀಂಕೋರ್ಟ್ ತೀರ್ಪಿನೆಡೆಗೆ ದೋಸ್ತಿ ನಾಯಕರು ಕಣ್ಣಿಟ್ಟಿರುವುದರಿಂದ ಬಿಜೆಪಿಗರ ದುಗುಡ ಹೆಚ್ಚಾಗಿದೆ.












Click it and Unblock the Notifications