ಅತ್ತ ದೋಸ್ತಿ ಸರ್ಕಾರಕ್ಕೆ ಟೆನ್ಷನ್, ಇತ್ತ ಬಿಜೆಪಿಗರಿಗೆ ಕ್ರಿಕೆಟ್, ಯೋಗ, ಭಜನೆ!
Recommended Video
ಬೆಂಗಳೂರು, ಜುಲೈ 16: ಸುಪ್ರೀಂಕೋರ್ಟ್ ತೀರ್ಪು ಏನಾಗಲಿದೆ ಎಂದು ದೋಸ್ತಿ ಸರ್ಕಾರದ ನಾಯಕರು ಮಂಗಳವಾರ ಟೆನ್ಷನ್‌ನಲ್ಲಿ ಕಾಯುತ್ತಿದ್ದರೆ, ಅತ್ತ ಬಿಜೆಪಿ ಶಾಸಕರು ಮತ್ತು ನಾಯಕರು ಇಡೀ ದಿನ ಮೋಜು ಮಸ್ತಿಯಲ್ಲಿ ಕಳೆದರು.
ಬೆಂಗಳೂರಿನ ಯಲಹಂಕ ರಸ್ತೆಯಲ್ಲಿರುವ ರಮಾಡ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿರುವ ಬಿಜೆಪಿ ಶಾಸಕರು ಸಮಯ ಕಳೆಯುವುದಕ್ಕಾಗಿ ಮನರಂಜನೆಯ ಮೊರೆ ಹೊಕ್ಕಿದ್ದಾರೆ.

ಗುರುವಾರ ವಿಶ್ವಾಸ ಮತಯಾಚನೆಯ ದಿನದವರೆಗೂ ಯಾವ ಶಾಸಕರೂ ಹೋಟೆಲ್ ಬಿಟ್ಟು ಹೋಗದಂತೆ ಕಾಯ್ದುಕೊಂಡಿರುವ ಬಿಜೆಪಿ, ಅಲ್ಲಿಯವರೆಗೂ ಸಮಯ ಸಾಗಿಸಲು ಮತ್ತು ರಾಜಕೀಯ ಜಂಟಾಟಗಳಿಂದ ಹಗುರವಾಗಲು ಕ್ರೀಡೆ, ಯೋಗ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೊರೆ ಹೋಗಿದ್ದಾರೆ.
ಹೋಟೆಲ್‌ನಲ್ಲಿರುವ ಶಾಸಕರು ಸೋಮವಾರ ಬೆಳಿಗ್ಗೆ ಯೋಗಾಭ್ಯಾಸ ನಡೆಸಿದರು. ಬಳಿಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರು ರೆಸಾರ್ಟ್ ಆವರಣದಲ್ಲಿಯೇ ಕ್ರಿಕೆಟ್ ಆಡಿದರು. ಒಟ್ಟಿಗೆ ಕುಳಿತು ಹರಟುತ್ತಾ ಊಟ ಸವಿದರು. ರಾತ್ರಿ ಭಜನಾ ತಂಡವೇ ಹೋಟೆಲ್‌ಗೆ ಬಂದಿತ್ತು. ಹೋಟೆಲ್ ಆವರಣದಲ್ಲಿ ಜಗಮಗಿಸುವ ವಿದ್ಯುತ್ ದೀಪಗಳ ಅಡಿಯಲ್ಲಿ ಭಜನಾ ತಂಡ ಅನೇಕ ಹಾಡುಗಳನ್ನು ಪ್ರಸ್ತುತಪಡಿಸಿತು.
ಆಟ, ಮನರಂಜನೆಯ ನಡುವೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಅತೃಪ್ತ ಶಾಸಕರು ಮತ್ತು ಸ್ಪೀಕರ್ ಅವರ ಅರ್ಜಿಗಳ ವಿಚಾರಣೆಯ ಕುರಿತೂ ಬಿಜೆಪಿ ಮುಖಂಡರು ಕಣ್ಣಿಟ್ಟಿದ್ದರು. ರೆಸಾರ್ಟ್‌ನಲ್ಲಿ ಟಿವಿಯಲ್ಲಿ ಕ್ಷಣ ಕ್ಷಣದ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮುಂದಿನ ರಣತಂತ್ರಗಳ ಬಗ್ಗೆ ಚರ್ಚೆಗಳನ್ನು ನಡೆಸಿದರು.












Click it and Unblock the Notifications