Industry: ಕರ್ನಾಟಕ ಕರಾವಳಿಯಲ್ಲಿ ಬಂದರು, ಲಾಜಿಸ್ಟಿಕ್ ವಲಯ ನಿರ್ಮಾಣ
ಬೆಂಗಳೂರು, ಫೆಬ್ರವರಿ 24: ಹಡಗು ನಿರ್ಮಾಣ ಮತ್ತು ಸಾಗರಮಾರ್ಗ ವಹಿವಾಟಿನಲ್ಲಿ ಪರಿಣತಿ ಹೊಂದಿರುವ ಗ್ರೀಸ್ ದೇಶವು ಸಹಭಾಗಿತ್ವದಲ್ಲಿ ಕರ್ನಾಟಕ ಕರಾವಳಿ ಭಾಗದಲ್ಲಿ ಹಲವು ಅಭಿವೃದ್ಧಿ ಯೋಜನೆ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಹೌದು, ಕರ್ನಾಟಕ ಕರಾವಳಿ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ದೂರದೃಷ್ಟಿ ಇದ್ದು, ಈ ಸಂಬಂಧ ಶುಕ್ರವಾರ ಬೆಂಗಳೂರಿನಲ್ಲಿ ಸರ್ಕಾರದೊಂದಿಗೆ ಗ್ರೀಸ್ ದೇಶದ ನಿಯೋಗವು ಚರ್ಚಿಸಿದೆ.

ಬೆಂಗಳೂರಿನ ಖನಿಜ ಭವನದಲ್ಲಿ ತಮ್ಮನ್ನು ಭೇಟಿಯಾದ ಗ್ರೀಸ್ ದೇಶದ ಉಪವಿದೇಶಾಂಗ ಸಚಿವ ಕೋಸ್ಟಾಸ್ ಫ್ರಾಗ್ಕೋಜಿಯಾನಿಸ್ ನೇತೃತ್ವದ ಉನ್ನತ ಮಟ್ಟದ ನಿಯೋಗವು ರಾಜ್ಯ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಅವರನ್ನು ಭೇಟಿ ಮಾಡಿದರು.
ಕರ್ನಾಟಕದ ನೀತಿ ಪೂರಕ
ಈ ವೇಳೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಅವರು, ಕರ್ನಾಟಕ ರಾಜ್ಯದ ಕರಾವಳಿ ತೀರದಲ್ಲಿ ಆಧುನಿಕ ಬಂದರು ಮತ್ತು ಸರಕು ಸಾಗಣೆ ತಾಣಗಳ (ಲಾಜಿಸ್ಟಿಕ್ ವಲಯ) ಅಭಿವೃದ್ಧಿ ನಿಟ್ಟಿನಲ್ಲಿ ಆ ದೇಶದೊಂದಿಗೆ ಸಹಭಾಗಿತ್ವಕ್ಕೆ ಕರ್ನಾಟಕ ಸರ್ಕಾರವು ಆಸಕ್ತಿ ಹೊಂದಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗೋದಾಮು ಮತ್ತು ಸಾಗಣೆ ವ್ಯವಸ್ಥಾಪನೆ ನೀತಿ ಇದಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

ಗ್ರೀಸ್ ದೇಶವು ಕೃಷಿ ಆಧಾರಿತ ಉದ್ದಿಮೆಗಳು ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿ ಕೂಡ ಮುಂಚೂಣಿಯಲ್ಲಿದೆ. ಹೀಗಾಗಿ, ನಾವು ಆಲಿವ್ ಬೆಳೆಗಾರಿಕೆ, ಫೆಟಾ ಗಿಣ್ಣು ಉತ್ಪಾದನೆ, ಮೆಡಿಟರೇನಿಯನ್ ವಲಯದ ಆಹಾರ ಸಂಸ್ಕರಣಾ ತಂತ್ರಗಳನ್ನು ಅವರೊಂದಿಗಿನ ಸಹಭಾಗಿತ್ವದ ಮೂಲಕ ಕಲಿಯಲು ಉತ್ಸುಕರಾಗಿದ್ದೇವೆ ಎಂದು ಅವರು ವಿವರಿಸಿದರು.
ಫುಡ್ ಪಾರ್ಕ್-ಪ್ರವಾಸೋದ್ಯಮ ಅಭಿವೃದ್ಧಿ
ವಿಜಯಪುರದಲ್ಲಿ ಸದ್ಯದಲ್ಲೇ ಸ್ಥಾಪನೆಯಾಗಲಿರುವ ಫುಡ್ ಪಾರ್ಕ್ ಬಗ್ಗೆ ಪ್ರಸ್ತಾಪಿಸಿದ ಅವರು, ಇಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಪರಿಶೀಲಿಸಬೇಕು ಎಂದು ಗ್ರೀಕ್ ನಿಯೋಗಕ್ಕೆ ಮಾಹಿತಿ ನೀಡಿದರು.
ರಾಜ್ಯವು ಪ್ರವಾಸೋದ್ಯಮ, ಪಾರಂಪರಿಕ ತಾಣಗಳ ಅಭಿವೃದ್ಧಿ, ಕರಾವಳಿ ಪ್ರವಾಸೋದ್ಯಮ, ವೆಲ್ನೆಸ್ ರಿಟ್ರೀಟ್ ಮುಂತಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲು ಆದ್ಯತೆ ಕೊಡಲಿದೆ. ಜತೆಗೆ ವಿದ್ಯುತ್ ಚಾಲಿತ ವಾಹನ, ಮರುಬಳಕೆ ಇಂಧನ, ಸೌರಶಕ್ತಿ, ಹೈಡ್ರೋಜನ್ ಉತ್ಪಾದನೆ, ಹಸಿರು ಅಮೋನಿಯಾ ಮುಂತಾದ ವಲಯಗಳ ಬಗ್ಗೆಯೂ ಗಮನ ಕೇಂದ್ರೀಕರಿಸಲಿದೆ. ಈ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವುದಕ್ಕೂ ಗ್ರೀಸ್ ವಿದೇಶಕ್ಕೆ ಒಳ್ಳೆಯ ಅವಕಾಶಗಳಿವೆ ಎಂದು ಸಚಿವರು ತಿಳಿಸಿದರು.
ಗ್ರೀಸ್‌ಗೆ ಭೇಟಿ ನೀಡಲು ಕರೆ
ಸ್ಪಂದಿಸಿದ ಗ್ರೀಸ್ ಉಪವಿದೇಶಾಂಗ ಸಚಿವರು, ದುಬಾರಿ ವೆಚ್ಚದ ಸಿನಿಮಾಗಳ ತಯಾರಿಕೆಗೆ ಹೆಸರಾಗಿರುವ ಕರ್ನಾಟಕದ ಚಿತ್ರರಂಗವು ಗ್ರೀಸ್ ದೇಶಕ್ಕೆ ಬಂದು ಚಿತ್ರೀಕರಣ ಮಾಡುವ ಮೂಲಕ ಅಲ್ಲಿನ ಪ್ರೋತ್ಸಾಹಕ ನೀತಿಗಳ ಪ್ರಯೋಜನ ಪಡೆಯಬೇಕು. ಜತೆಗೆ, ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ರಾಜ್ಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗ್ರೀಸ್ ಗೆ ಭೇಟಿ ನೀಡಬೇಕು. ಈ ಸಂಬಂಧ ಪ್ರವಾಸ ಆಯೋಜಕರ ಜತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.
ಭಾರತದಿಂದ, ಅದರಲ್ಲೂ ಬೆಂಗಳೂರಿನಿಂದ ಗ್ರೀಸ್ ನ ಅಥೆನ್ಸ್ ಗೆ ನೇರ ವಿಮಾನ ಸಂಚಾರ ಆರಂಭಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.












Click it and Unblock the Notifications