ಶನಿವಾರದ ಕರ್ನಾಟಕದ ಸುದ್ದಿಗಳ ಕ್ವಿಕ್ ಲುಕ್
ಬೆಂಗಳೂರು, ನ.9 : ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಪುನರುಚ್ಚರಿಸಿದ್ದಾರೆ. ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಆನಂದ್ ರಾವ್ ವೃತ್ತದ ಬಳಿ ಶಾದಿ ಭಾಗ್ಯ ಯೋಜನೆಯನ್ನು ಎಲ್ಲಾ ವರ್ಗದವರಿಗೂ ವಿಸ್ತರಿಸುವಂತೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಯಡಿಯೂರಪ್ಪ ಶನಿವಾರ ಧರಣಿ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರದ ವಿರುದ್ಧ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಹೇಳಿದರು.
ಯಡಿಯೂರಪ್ಪ ಬಿಜೆಪಿಗೆ ಕರೆತರುವಂತೆ ವಿಧಾನಪರಿಷತ್ ಸದಸ್ಯ ಶಿವಪ್ಪ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದ ಕುರಿತು ಸ್ಪಷ್ಟನೆ ನೀಡಿದ ಅವರು, ನಾನು ಬಿಜೆಪಿಗೆ ಮರಳುವುದಿಲ್ಲ, ಯಾವ ನಾಯಕರು ನನ್ನ ಪರವಾಗಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯಬಾರದು ಎಂದರು.
10 ರಿಂದ 12 ಕ್ಷೇತ್ರಗಳಲ್ಲಿ ಕೆಜೆಪಿ ಲೋಕಸಭೆ ಚುನಾವಣೆಯಗೆ ಸ್ಪರ್ಧಿಸಲಿದೆ. ಕೆಲವು ಕ್ಷೇತ್ರಗಳಲ್ಲಿ ಮೈತ್ರಿ ಮಾತುಕತೆ ನಡೆಯುತ್ತಿದೆ. ತಾವು ಬಿಜೆಪಿಗೆ ಮರಳಿ, ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನಗೊಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ನ.24ರವರೆಗೆ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಧರಣಿ ಮುಂದುವರೆಸುವುದಾಗಿ ಹೇಳಿದರು. (ಶನಿವಾರದ ಇತರ ಪ್ರಮುಖ ಸುದ್ದಿಗಳು)

ಬಿಜೆಪಿಗೆ ಮರಳುವ ಪ್ರಶ್ನೆ ಇಲ್ಲ
ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಪುನರುಚ್ಚರಿಸಿದ್ದಾರೆ. ಬಿಜೆಪಿ ನಾಯಕರು ತಮ್ಮನ್ನು ಬೆಂಬಲಿಸಿ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯಬಾರದು ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ. ತಮ್ಮ ಅಹೋರಾತ್ರಿ ಧರಣಿಯನ್ನು ನ.24ರವೆರೆಗೆ ಮುಂದುವರೆಸುವುದಾಗಿ ಹೇಳಿದ್ದಾರೆ.

ಮೆಟ್ರೋಗೆ ನಿಜಲಿಂಗಪ್ಪ ಹೆಸರಿಡಿ
ಬೆಂಗಳೂರಿನ ಮೆಟ್ರೋ ರೈಲಿಗೆ ದಿ.ಮಾಜಿ ಸಿಎಂ ನಿಜಲಿಂಗಪ್ಪ ಅವರ ಹೆಸರು ಇಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ನಿಜಲಿಂಗಪ್ಪ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ನಿಜಲಿಂಗಪ್ಪ ಅವರು ನಿಜವಾದ ಕರ್ನಾಟಕದ ಏಕೀಕರಣಕ್ಕಾಗಿ ದುಡಿದವರು. ಆದ್ದರಿಂದ ಮೆಟ್ರೋ ರೈಲಿಗೆ ಅವರ ಹೆಸರು ನಾಮಕರಣ ಮಾಡಬೇಕು ಎಂದು ಹೇಳಿದರು.

ಸತ್ತು ಹೋಗಿದ್ದ ಮಗು ಎದ್ದು ಬಂದಾಗ
ಮಗು ಸತ್ತಿದೆ ಎಂದು ವೈದ್ಯರು ದೃಢೀಕರಿಸಿದ್ದರು, ಆದರೆ, ಅಂತ್ಯಸಂಸ್ಕಾರದ ವೇಳೆ ಮಗು ಜೀವಂತವಾಗಿದ್ದ ಅಚ್ಚರಿಯ ಘಟನೆ ಉಡುಪಿಯಲ್ಲಿ ನಡೆದಿದೆ. ಬಳ್ಳಾರಿ ಮೂಲದ ಮಂಜುಳಾ ಎಂಬುವವರು ಮೂರು ದಿನಗಳ ಹಿಂದೆ ಮಗುವೊಂದಕ್ಕೆ ಜನ್ಮ ನೀಡಿದ್ದರು. ಆದರೆ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರು. ದಂಪತಿ ಮಗುವಿನ ಅಂತ್ಯಸಂಸ್ಕಾರ ಮಾಡುವ ವೇಳೆ ಅದು ಬದುಕಿರುವ ಬಗ್ಗೆ ತಿಳಿದಿದೆ. ತಕ್ಷಣವೇ ಮಗುವನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಮಗುವಿನಗೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗುಹವಾತಿ ಹೈ ಕೋರ್ಟ್ ತೀರ್ಪು ಸರಿ : ಅಶೋಕ್
ಸಿಬಿಐ ಅಸ್ತಿತ್ವದ ಕುರಿತು ಗುಹವಾತಿ ಹೈಕೋರ್ಟ್ ನೀಡಿರುವ ತೀರ್ಪು ಸರಿ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ. ಸಿಬಿಐ ನಡೆದು ಬಂದಿರುವ ಹಾದಿಯೇ ಹಾಸ್ಯಸ್ಪದವಾಗಿದೆ. ಲೋಕಾಯುಕ್ತ, ಕೇಂದ್ರ ಚುನಾವಣಾ ಆಯೋಗದ ಮಾದರಿಯಲ್ಲಿ ಸಿಬಿಐ ಸ್ವತಂತ್ರ ಸಂಸ್ಥೆಯಾಗಿ, ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಬೇಕು ಎಂದು ಅಶೋಕ್ ಆಶಯ ವ್ಯಕ್ತಪಡಿಸಿದರು.

ಆನೆ ಕಾಟ ಅಧಿಕಾರಿಗಳು ಸುಸ್ತು
ತುಮಕೂರು ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಸುಸ್ತು ಹೊಡೆದು ಹೋಗಿದ್ದಾರೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಆನೆ ಹಾವಳಿ ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡಿಸುತ್ತಿದೆ. ತುಮಕೂರು ನಗರಕ್ಕೆ ಸಮೀಪದ ಸಿದ್ಧಾರ್ಥ ಮೆಡಿಕಲ್ ಕಾಲೇಜು ಬಳಿಯ ಕೆರೆಯಲ್ಲಿ 6-7 ಆನೆಗಳು ಮೂರು ದಿನಗಳಿಂದ ಬೀಡು ಬಿಟ್ಟಿವೆ. ಗುಬ್ಬಿ, ಶಿರಾ ತಾಲೂಕಿನಲ್ಲಿಯೂ ಆನೆಗಳು ಬೀಡು ಬಿಟ್ಟಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ನಿದ್ದೆಗೆಡಿಸಿದೆ. ಹೇಮಾವತಿ ನದಿ ನೀರನ್ನು ಹರಿಸಿರುವುದರಿಂದ ಜಿಲ್ಲೆಯ ಕೆರೆಗಳು ತುಂಬಿದ್ದು, ಆನೆಗಳು ಅಲ್ಲೇ ಠಿಕಾಣಿ ಹೂಡಲು ಪೂರಕ ವಾತಾವರಣ ನಿರ್ಮಿಸಿದೆ.

ಕೆಎಸ್ ಸಿಎ ಚುನಾವಣೆಗೆ ಒಡೆಯರ್
ಡಿಸೆಂಬರ್ ನಲ್ಲಿ ನಡೆಯಲಿರುವ ಕೆಎಸ್ ಸಿಎ ಚುನಾವಣೆಗೆ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಸ್ಪರ್ಧಿಸಲಿದ್ದಾರೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ಉದ್ಯಮಿ ವಿಜಯ್ ಮಲ್ಯ ಮುಂತಾದವರು ಒಡೆಯರ್ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಹೇಳಿದ್ದಾರೆ. ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಕೆಪಿಎಲ್ ಅನ್ನು ಪುನಃ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಮೈಸೂರಲ್ಲಿ ಸಂಚಾರಿ ಪೊಲೀಸರ ಎಡವಟ್ಟು
ಹೆಲ್ಮೆಟ್ ಧರಿಸದೆ ವಾಹನ ಓಡಿಸುತ್ತಿದ್ದ ವಿದ್ಯಾರ್ಥಿಗಳನ್ನು ಥಳಿಸಿದ ಸಂಚಾರಿ ಪೊಲೀಸ್ ಸಿಬ್ಬಂದಿ ವಿರುದ್ಧ ಮೈಸೂರಿನ ರಾಮಕೃಷ್ಣ ನಗರದಲ್ಲಿ ಸಾರ್ವಜನಕರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು. ರಾಮಕೃಷ್ಣ ನಗರದ ನಿವಾಸಿ ಲಿಂಗರಾಜು ಮತ್ತು ಆತನ ಸ್ನೇಹಿತ ಹೆಲ್ಮಟ್ ಧರಿಸಿಲ್ಲ ಎಂದು ಸಂಚಾರಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೈಸೂರಿನಲ್ಲಿ ಹೆಲ್ಮಟ್ ಕಡ್ಡಾಯ ಮಾಡಿರುವ ಸಂಚಾರಿ ಪೊಲೀಸರು, ಅದನ್ನು ಉಲ್ಲಂಘಿಸಿದರೆ ದಂಡ ವಿಧಿಸುತ್ತಿದ್ದಾರೆ.

ಅಧಿವೇಶನಕ್ಕೆ ರಾಜ್ಯಪಾಲರ ಒಪ್ಪಿಗೆ
ನ.25ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಶನಿವಾರ ಒಪ್ಪಿಗೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯುತ್ತಿದ್ದು, ಸರ್ಕಾರ ಮತ್ತು ಪ್ರತಿಪಕ್ಷಗಳು ಅಧಿವೇಶನಕ್ಕೆ ಸಿದ್ಧತೆ ನಡೆಸಿವೆ.

ಭಾನುವಾರದಿಂದ ಪರಮೇಶ್ವರ್ ಜಿಲ್ಲಾ ಪ್ರವಾಸ
ಲೋಕಸಭಾ ಚುನಾವಣೆ ಕುರಿತು ಚರ್ಚೆ ನಡೆಸಲು ಕೆಪಿಸಿ ಅಧ್ಯಕ್ಷ ಪರಮೇಶ್ವರ್ ಭಾನುವಾರದಿಂದ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಭಾನುವಾರ ಹುಬ್ಬಳ್ಳಿಗೆ ಆಗಮಿಸುವ ಪರಮೇಶ್ವರ್, ನ.11ರಂದು ಬಿಜಾಪುರ, ನ.12ರಂದು ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ನ.13ರಂದು ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.

ಭಾನುವಾರದಿಂದ ಮನೆ-ಮನೆ ಪ್ರಚಾರ
ನ.17ರ ನರೇಂದ್ರ ಮೋದಿ ಅವರ ಬೆಂಗಳೂರಿನ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಬಿಜೆಪಿ ಭಾನುವಾರದಿಂದ ಮಂಡಲ ಮಟ್ಟದಲ್ಲಿ ಮನೆ-ಮನೆ ಪ್ರಚಾರ ಹಮ್ಮಿಕೊಳ್ಳುತ್ತಿದೆ. ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ, ಜಯನಗರ ಶಾಸಕ ವಿಜಯ್ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.












Click it and Unblock the Notifications