Dinesh Gundu Rao: ಸಿಎಂ ಸಿದ್ದರಾಮಯ್ಯ ಹಾದಿ ತುಳಿದ ದಿನೇಶ್ ಗುಂಡೂರಾವ್!
ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸಿಎಂ ಸಿದ್ದರಾಮಯ್ಯ ಅವರ ಹಾದಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ. ಇನ್ನು ಮುಂದೆ ಸನ್ಮಾನದ ಸಂದರ್ಭದಲ್ಲಿ ಹಾರ, ತುರಾಯಿ, ಶಾಲುಗಳನ್ನು ಹಾಕದಂತೆ ಮನವಿ ಮಾಡಿದ್ದು, ಬದಲಾಗಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಹೇಳಿದ್ದಾರೆ.
ಈ ಕುರಿತಂತೆ ಸಚಿವ ದಿನೇಶ್ ಗುಂಡೂರಾವ್ ಅವರ ಆಪ್ತಕಾರ್ಯದರ್ಶಿ ಕೆ.ಎ. ಹಿದಾಯತ್ತುಲ್ಲ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಸುತ್ತೋಲೆ ಹೊರಡಿಸುವಂತೆ ನಿರ್ದೇಶನ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿಯಾಗಿರುವ ದಿನೇಶ್ ಗುಂಡೂರಾವ್, ಅಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಹಾರ, ತುರಾಯಿ ಬದಲು ಪುಸ್ತಕ ಕೊಡುವಂತೆ ಸುತ್ತೋಲೆ ಹೊರಡಿಸಲು ಕೇಳಲಾಗಿದೆ.

ಆಪ್ತ ಕಾರ್ಯದರ್ಶಿ ಬರೆದಿರುವ ಪತ್ರದಲ್ಲಿ, "ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸುವ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಲ್ಲಿ ಹಾರ, ಹೂಗುಚ್ಛಗಳನ್ನು ನೀಡುವುದನ್ನು ನಿಷೇಧಿಸುವಂತೆ ಮತ್ತು ಇಷ್ಟ ಇದ್ದವರು ಉಡುಗೊರೆ ರೂಪದಲ್ಲಿ ಪುಸ್ತಕಗಳನ್ನು ನೀಡುವಂತೆ ತಿಳಿಸಿ ಸೂಕ್ತ ಸುತ್ತೋಲೆ ಹೊರಡಿಸುವಂತೆ ಕೋರಲು ಸಚಿವರಿಂದ ನಿರ್ದೇಶಿತನಾಗಿದ್ದೇನೆ" ಎಂದು ಜಿಲ್ಲಾಧಿಕಾರಿಗಳಿ ತಿಳಿಸಿದ್ದಾರೆ.
ಸಿದ್ದರಾಮಯ್ಯ, ಪರಮೇಶ್ವರ್ ಅವರ ನಿರ್ಧಾರ
ಸಿದ್ದರಾಮಯ್ಯ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾದ ಬೆನ್ನಲ್ಲೇ ತಮಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ಹಾರ, ಶಾಲು ನೀಡದಂತೆ ಮತ್ತು ಕೊಡಲೇಬೇಕೆಂದರೆ ಪುಸ್ತಕಗಳನ್ನು ಕೊಡುವಂತೆ ಮನವಿ ಮಾಡಿದ್ದರು. ಸಿದ್ದರಾಮಯ್ಯ ಅವರ ಈ ನಡೆ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು, ನಂತರ ಬೆಂಗಳೂರು ಟ್ರಾಫಿಕ್ ಗಮನದಲ್ಲಿಟ್ಟುಕೊಂಡು ತಮಗೆ ಝೀರೋ ಟ್ರಾಫಿಕ್ ಸೌಲಭ್ಯ ಕೂಡ ಬೇಡ ಎಂದು ಪೊಲೀಸ್ ಇಲಾಖೆಗೆ ತಿಳಿಸಿದ್ದರು.

ಸಿದ್ದರಾಮಯ್ಯ ಅವರ ನಿರ್ಧಾರದ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್ ಕೂಡ ತಮಗೆ ಹಾರ, ಶಾಲು ನೀಡಬೇಡಿ ಪುಸ್ತಕಗಳನ್ನೇ ನೀಡಿ ಎಂದು ಮನವಿ ಮಾಡಿಕೊಂಡಿದ್ದರಲ್ಲದೆ, ತಮಗೂ ಝೀರೋ ಟ್ರಾಫಿಕ್ ಸೌಲಭ್ಯ ಬೇಡ ಎಂದು ಹೇಳಿದ್ದರು.
ಈಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಇದೇ ದಾರಿಯಲ್ಲಿ ಸಾಗಲಿದ್ದು, ಹಾರ, ಹೂಗುಚ್ಛದ ಬದಲಾಗಿ ಪುಸ್ತಕ ನೀಡುವಂತೆ ಕೇಳಿದ್ದಾರೆ. ಪುಸ್ತಕಗಳ ಖರೀದಿ, ಓದಿಗೆ ಇದು ಸಹಕಾರ ಸಿಕ್ಕಂತಾಗಲಿದ್ದು, ಬರಹಗಾರರಿಗೆ ಬೆಂಬಲ ಕೂಡ ನೀಡಿದಂತಾಗುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ಬಹುತೇಕ ಸಚಿವರು ಕೂಡ ಇದೇ ನಿರ್ಧಾರ ಮಾಡಿದರೆ ಅಚ್ಚರಿ ಪಡುವಂತಿಲ್ಲ.












Click it and Unblock the Notifications