ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಎಂಇಎಸ್ ವಿರುದ್ಧ ವಾಟಾಳ್ ನಾಗರಾಜ್ ಪ್ರತಿಭಟನೆ
ಬೆಂಗಳೂರು, ನವೆಂಬರ್ 25: ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿರುದ್ಧ ಕನ್ನಡ ವಾಟಾಳ್ ಚಳವಳಿ ಪಕ್ಷ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನವೆಂಬರ್ 26ರಂದು ಪ್ರತಿಭಟನೆ ನಡೆಯಲಿದೆ.
ಕರ್ನಾಟಕದ ಜಾಗ ನಮ್ಮ ರಾಜ್ಯಕ್ಕೆ ಸೇರಬೇಕೆಂದು ಮಹಾರಾಷ್ಟ್ರ ರಾಜ್ಯವು ಪದೇ ಪದೆ ಗಡಿ ಭಾಗದಲ್ಲಿ ಪುಂಡಾಟಿಕೆ ನಡೆಸುತ್ತಿದೆ. ಇದರ ವಿರುದ್ಧ ಶನಿವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬೆಳಗ್ಗೆ 11ಗಂಟೆ ಚಳವಳಿ ನಡೆಸಲಿದ್ದೇವೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಬೆಳಗಾವಿ ನಮ್ಮದು, ಕನ್ನಡದ ಒಂದು ಅಂಗುಲ ಜಾವನ್ನು ಸಹ ಬಿಟ್ಟುಕೊಡುವುದಿಲ್ಲ. ಮುಂಬೈ, ಸೊಲ್ಲಾಪುರ, ಅಂಕಲಕೋಟೆ ಸೇರಿದಂತೆ ಮಹಾರಾಷ್ಟ್ರದ ಎಲ್ಲಾ ಕನ್ನಡ ಪ್ರದೇಶಗಳು ಕನ್ನಡಿಗರದ್ದು. ಕರ್ನಾಟಕದ ನೆಲಕ್ಕೆ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಗಟ್ಟಿಯಾಗಬೇಕು. ರಾಜ್ಯದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

ಕನ್ನಡ ವಾಟಾಳ್ ಚಳವಳಿ ಪಕ್ಷದ ಸದಸ್ಯರು, ಕನ್ನಡಪರ ಹೋರಾಟಗಾರರು, ವಾಟಾಳ್ ನಾಗರಾಜ್ ಬೆಂಬಲಿಗರು ಈ ಕನ್ನಡ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಅರ್ಜಿ ವಿಚಾರಣೆ ಸ್ಪಷ್ಟತೆ ಸಿಗಬೇಕಿದೆ
ಅನೇಕ ವರ್ಷಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಸೃಷ್ಟಿಯಾಗಿದೆ. ಈ ಸಂಬಂಧ ಬೆಳಗಾವಿ ನಮಗೆ ಸೇರಿದ್ದು ಎಂದು ಮಹಾರಾಷ್ಟ್ರ ಆಗಾಗ ತಗಾದೆ ತೆಗೆಯುತ್ತಲೇ ಬಂದಿದ್ದಾರೆ. ನವೆಂಬರ್ 23ರಂದು ಗಡಿ ವಿವಾದದ ಅರ್ಜಿ ಸುಪ್ರೀಂ ಕೋರ್ಟ್ ವಿಚಾರಣೆಗೆ ಬರುವುದಾಗಿ ಹೇಳಲಾಗಿತ್ತು. ಈ ಸಂಬಂಧ ಕರ್ನಾಟಕದಲ್ಲಿ ಬಿರುಸಿನ ಚಟುವಟಿಕೆ ನಡೆದಿದ್ದವು. ಎರಡು ರಾಜ್ಯಗಳ ನಾಯಕರ ನಡುವೆ ಭಾರಿ ವಾಕ್ಸಮರಗಳು ಆರಂಭವಾಗಿದ್ದವು. ಆದರೆ ಮೂಲಗಳ ಪ್ರಕಾರ ಎರಡು ರಾಜ್ಯಗಳ ಗಡಿ ವಿವಾದ ಅರ್ಜಿ ಸುಪ್ರೀಂ ನಡೆಬೇಕೇ? ಬೇಡವೆ? ಎಂಬುದರ ಕುರಿತೇ ಇತ್ಯರ್ಥವಾಗಬೇಕಿದೆ. ಈ ಬಗ್ಗೆ ಸ್ಪಷ್ಟತೆ ದೊರೆಯಬೇಕಿದೆ.












Click it and Unblock the Notifications