ಲೈಂಗಿಕ ಕಿರುಕುಳ: ಬಿಎಚ್ಇಎಲ್ ನ ಇಬ್ಬರು ಉದ್ಯೋಗಿಗಳ ಮೇಲಿನ ಕೇಸ್ ರದ್ದು
ಬೆಂಗಳೂರು, ಆ. 26: ತಮ್ಮ ಸಹೋದ್ಯೋಗಿ ಮಹಿಳೆ ಮೇಲೆ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಸರ್ಕಾರಿ ಒಡೆತನದ ಬಿಎಚ್ಇಎಲ್ (Bharat Heavy Electricals Limited) ಕಂಪನಿಯ ಇಬ್ಬರು ಉದ್ಯೋಗಿಗಳ ಮೇಲಿನ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದೆ.
ಬಿಎಚ್‌ಇಎಲ್‌ನ ಇಬ್ಬರು ಉದ್ಯೋಗಿಗಳಾದ ಎಂ.ಸಿ.ನಾಗರಾಜ್ ಹಾಗೂ ಸಿ.ನರಸಿಂಹಮೂರ್ತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಭಾರತಿಯ ದಂಡ ಸಂಹಿತೆಯ ಕಲಂ 354 (ಡಿ)ರ ಅನ್ವಯ ಸಂಜ್ಞೇಯ ಅಪರಾಧವೆಂದು ಪರಿಗಣಿಸಿ ವಿಚಾರಣೆಗೆ ಮುಂದಾಗುವ ಮುನ್ನ ಸೂಕ್ತ ಸಾಕ್ಷ್ಯಾಧಾರಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆಯೊ ಇಲ್ಲವೊ ಎಂಬುದನ್ನು ಪರಿಶೀಲಿಸಬೇಕು. ಇಲ್ಲವಾದರೆ ಅದು ಕಾನೂನಿನ ದುರ್ಬಳಕೆ ಆಗುತ್ತದೆ' ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದುರುದ್ದೇಶಪುರ್ವಕ ದೂರು: ಅರ್ಜಿದಾರರ ಪರ ಹಿರಿಯ ವಕೀಲರು'ಅರ್ಜಿದಾರರ ವಿರುದ್ಧದ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಷ್ಟೇ ಅಲ್ಲದೇ, ಹಿಂಬಾಲಿಸಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ, ಪುರಾವೆಗಳೂ ಇಲ್ಲ. ಇದು ದುರುದ್ದೇಶಪೂರ್ವಕ ದೂರು ಎಂದು ವಿವರಿಸಿದರು.
ಫಿರ್ಯಾದುದಾರ ಮಹಿಳೆಯು ತಮ್ಮ ಸಹೋದ್ಯೋಗಿಗಳ ವಿರುದ್ಧ ಇದೇ ಮೊದಲ ಬಾರಿಗೇನೂ ಇಂತಹ ದೂರು ದಾಖಲಿಸುತ್ತಿಲ್ಲ. ಈಕೆ ಪದೇ ಪದೇ ತಮ್ಮ ಸಹೋದ್ಯೋಗಿಗಳ ವಿರುದ್ಧ ಸುಳ್ಳು ದೂರು ನೀಡುವುದನ್ನು ವಾಡಿಕೆಯನ್ನಾಗಿ ಮಾಡಿಕೊಂಡಿದ್ದಾರೆ' ಎಂದು ಆಕ್ಷೇಪಿಸಿದರು.
ಈ ಪ್ರಕರಣದಲ್ಲಿ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಇಲ್ಲದೇ ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 354 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಇದನ್ನು ಸಂಜ್ಞೇಯ ಅಪರಾಧವಾಗಿ ವಿಚಾರಣೆಗೆ ಪರಿಗಣಿಸಿರುವುದು ಕಾನೂನಿನ ದುರ್ಬಳಕೆ. ಆದ್ದರಿಂದ, ಆರೋಪಿಗಳ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು" ಎಂದು ಕೋರಿದರು. ಈ ವಾದಾಂಶವನ್ನು ಪುರಸ್ಕರಿಸಿದ ನ್ಯಾಯಪೀಠ ಪ್ರಕರಣವನ್ನು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ: ನಾಗಸಂದ್ರ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇ ಔಟ್‌ನ ಮಹಿಳೆ ಬಿಎಚ್ಇಎಲ್ ನಲ್ಲಿ ಕೆಲಸ ಮಾಡುತ್ತಿದ್ದು, ತಮ್ಮದೇ ಸಂಸ್ಥೆಯ ಉದ್ಯೋಗಿಗಳಾದ ಎಂ.ಸಿ.ನಾಗರಾಜ್ ಹಾಗೂ ಸಿ.ನರಸಿಂಹಮೂರ್ತಿ ವಿರುದ್ಧ ಲೈಂಗಿಕ ಕಿರುಕಳ ಆರೋಪದ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ಕೆಲಸ ಮುಗಿಸಿಕೊಂಡು ಯಶವಂತಪುರದ ಸರ್ಕಲ್ ಕಡೆಗೆ ನಡೆದುಕೊಂಡು ಹೋಗುವಾಗ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ದೂರಿನಲ್ಲಿ ವಿವರಿಸಿದ್ದರು. ದೂರನ್ನು ದಾಖಲಿಸಿಕೊಂಡಿದ್ದ ಯಶವಂತಪುರ ಠಾಣೆ ಪೊಲೀಸರು ನಗರದ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಪಡಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.












Click it and Unblock the Notifications