ಬೆಂಗಳೂರಿನ ರಸ್ತೆ ಗುಂಡಿ ಮುಚ್ಚುವ ವಿಚಾರ: ಪರಿಶೀಲನೆ ಹೊಣೆ NHAIಗೆ
ಬೆಂಗಳೂರು, ನ.2: ಬೆಂಗಳೂರು ನಗರದ ರಸ್ತೆ ಗುಂಡಿ ಮುಚ್ಚುವಲ್ಲಿ ವಿಫಲವಾಗಿರುವ ಬಿಬಿಎಂಪಿ ವಿರುದ್ಧ ಮತ್ತೆ ಹರಿಹಾಯ್ದಿರುವ ಹೈಕೋರ್ಟ್, ರಸ್ತೆ ದುರಸ್ತಿ ಹಾಗೂ ಗುಂಡಿಗಳನ್ನು ಮುಚ್ಚುವ ಕಾಮಗಾರಿಯ ಗುಣಮಟ್ಟದ ಪರಿಶೀಲನೆ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(NHAI)ಕ್ಕೆ ವಹಿಸಿದೆ. ಬುಧವಾರ ಸುದೀರ್ಘ ವಿಚಾರಣೆ ನಂತರ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಲೆ ಅವರಿದ್ದ ವಿಭಾಗೀಯಪೀಠ ಪಾಲಿಕೆಯ ಕ್ರಮಕ್ಕೆ ತೀವ್ರ ಅಸಮಾಧನ ವ್ಯಕ್ತಪಡಿಸಿದೆ.
ಎನ್‌ಎಚ್‌ಎಐನ ಮುಖ್ಯ ಎಂಜಿನಿಯರ್ ಅಥವಾ ಅವರು ನಿಯೋಜಿಸಿದ ಹಿರಿಯ ಎಂಜಿನಿಯರ್ ಬೆಂಗಳೂರಿನಲ್ಲಿ ಪಾಲಿಕೆ ಕೈಗೊಂಡಿರುವ ಕಾಮಗಾರಿ ಪರಿಶೀಲನೆ ನಡೆಸಿ ಗುಣಮಟ್ಟ ಮತ್ತು ನಿರ್ಲಕ್ಷದ್ಯದ ಅಂಶಗಳನ್ನು ಉಲ್ಲೇಖಿಸಿ ಒಂದು ತಿಂಗಳಲ್ಲಿ ವರದಿ ನೀಡುವಂತೆ ಆದೇಶ ನೀಡಿದೆ.
ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್ ಮೆನನ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಬಿಬಿಎಂಪಿಯನ್ನು ತೀವ್ರ ತರಾಟೆ ತೆಗೆದುಕೊಂಡಿತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ದ ಅಧಿಕಾರಿಗಳಿಂದ ರಸ್ತೆ ಗುಂಡಿ ಕಾಮಗಾರಿ ಪರಿಶೀಲನೆಗೆ ಸೂಚನೆ ನೀಡಿದೆ. ಜತೆಗೆ, ಎನ್‌ಎಚ್‌ಎಐನ ಮುಖ್ಯ ಎಂಜಿನಿಯರ್ ಅಥಾವಾ ಮುಖ್ಯ ಎಂಜಿನಿಯರ್ ಅವರಿಂದ ನೇಮಕ ಗೊಂಡ ಹಿರಿಯ ಎಂಜಿನಿಯರ್ ಬೆಂಗಳೂರು ರಸ್ತೆ ಗುಂಡಿ ಮುಚ್ಚಿರುವುದನ್ನು ಪರಿಶೀಲನೆ ನಡೆಸಬೇಕು. ಅದರ ಗುಣಮಟ್ಟದ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.

ಪರಿಶೀಲನೆಗಿಲ್ಲ ಕಾರ್ಯತಂತ್ರ: ಬಿಬಿಎಂಪಿ ಅಧಿಕಾರಿಗಳು ರಸ್ತೆ ಗುಂಡಿಗಳನ್ನು ಮುಚ್ಚುವುದಕ್ಕಾಗಿ ಇ-ಪ್ರಕ್ರೂರ್‌ಮೆಂಟ್ ಮೂಲಕ ಕೆಲ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತಿದ್ದಾರೆ. ಆದರೆ, ಆ ರಸ್ತೆ ಗುಂಡಿಗಳನ್ನು ಮುಚ್ಚಿರುವ ಸಂಬಂಧ ಬಿಬಿಎಂಪಿ ಅಧಿಕಾರಿಗಳೇ ಪ್ರಮಾಣೀಕರಿಸುತ್ತಿದ್ದಾರೆ. ಆದರೆ, ಗುತ್ತಿಗೆದಾರರ ಕೆಲಸವನ್ನು ಪ್ರಮಾಣೀಕರಿಸಲು ಯಾವುದೇ ಸ್ವಾತಂತ್ರ್ಯ ಸಂಸ್ಥೆ ಇಲ್ಲ ಎಂದು ನ್ಯಾಯಪೀಠ ಪ್ರಶ್ನಿಸಿತು.
ಕಾಮಗಾರಿ ಪರಿಶೀಲನೆಗೆ ಥರ್ಡ್ ಪಾರ್ಟಿಯ ಯಾವುದೇ ಕಾರ್ಯತಂತ್ರ ಇಲ್ಲ. ಹಾಗಾಗಿಯೇ ರಸ್ತೆ ಗುಂಡಿಗಳು ಮರುಕಳಿಸುತ್ತಿವೆ. ಅಲ್ಲದೆ, ಅಲ್ಲದೆ, ಯಾವ ರಸ್ತೆಯಲ್ಲಿ ಎಷ್ಟು ಭಾರದ ವಾಹನಗಳು ಸಂಚರಿಸಲಿವೆ. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚಿರುವುದು ವಾಹನದ ಭಾರ ತಡೆಯಲಿದಿಯೇ ಎಂಬುದನ್ನು ಪರಿಶೀಲನೆ ನಡೆಸಿ ದೃಢೀಕರಿಸಲು ಯಾವುದೇ ಪ್ರತ್ಯೇಕ ಸಂಸ್ಥೆಯಿಲ್ಲ. ಹೀಗಿರುವಾಗ ನಂಬುವುದಾದರೂ ಹೇಗೆ ಎಂದು ನ್ಯಾಯಪೀಠ ಕೇಳಿತು.
ಶಾಶ್ವತ ಪರಿಹಾರವಿಲ್ಲ: ಕಳೆದ 8 ವರ್ಷಗಳಿಂದ ಅರ್ಜಿಯ ವಿಚಾರಣೆ ನಡೆಯುತ್ತಿದೆ. ಆದರೆ, ಈವರೆಗೂ ಶಾಶ್ವತ ಪರಿಹಾರವನ್ನು ಕಂಡುಕೊಂಡಿಲ್ಲ, ಪ್ರತಿ ವರ್ಷ ರಸ್ತೆ ಮುಚ್ಚಲಾಗುತ್ತಿದೆ, ಮತ್ತೆ ಹಾಳಾಗುತ್ತಿದೆ. ಅಲ್ಲದೆ, ಸಾಮಾನ್ಯ ಜನತೆ ರಸ್ತೆ ಗುಂಡಿ ತಪ್ಪಿಸುವುದಕ್ಕಾಗಿ ಮುಂದಾಗಿ ಪ್ರಾಣ ಕಳೆದುಕೊಳ್ಳಲಾಗುತ್ತಿದೆ. ಈ ಬೆಳವಣಿಗೆಯನ್ನು ಸಹಿಸಲಾಗದು ಎಂದು ಹೈಕೋರ್ಟ್ ತಿಳಿಸಿದೆ.

ಸಾರ್ವಜನಿಕರಿಗೆ ಗುಂಡಿ ಮುಕ್ತ ರಸ್ತೆ ನಿರ್ಮಾಣ ಮಾಡುವುದು ಬಿಬಿಎಂಪಿ ಕೆಲಸವಾಗಿದೆ. ನ್ಯಾಯಾಲಯ ಹಲವು ಆದೇಶಗಳನ್ನು ನೀಡಿದರೂ ಪಾಲಿಕೆ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂದಾಗುತ್ತಿಲ್ಲ. ರಸ್ತೆ ಗುಂಡಿಗಳ ಮುಚ್ಚದ ಪರಿಣಾಮ ಸಮಾನ್ಯ ಜನತೆ ಸಾವನ್ನಪ್ಪುವಂತಾಗಿದೆ ಎಂದು ನ್ಯಾಯಪೀಠ ಕಳವಳ ವ್ಯಕ್ತ ಪಡಿಸಿತು.
ಶಸ್ತ್ರ ಚಿಕಿತ್ಸೆ ಮಾಡಿದಂತಿದೆ: ರಸ್ತೆ ಗುಂಡಿ ಮುಚ್ಚುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಪಾಲಿಕೆಯನ್ನು ದಂಡಿಸಿದ ಮುಖ್ಯ ನ್ಯಾಯಮೂರ್ತಿ, ನಗರದಲ್ಲಿ ರಸ್ತೆ ಗುಂಡಿ ಮುಚ್ಚುವ ಪ್ರಕ್ರಿಯೆ ಸೌಂದರ್ಯ ಹೆಚ್ಚಿಸಲು ಶಸ್ತ್ರ ಚಿಕಿತ್ಸೆ ಮಾಡಿದಂತಿದೆ ಎಂದು ಖಾರವಾಗಿ ಹೇಳಿತು.
ಅಲ್ಲದೆ, ಗುತ್ತಿಗೆದಾರರ ಸಂಸ್ಥೆಯಾದ ಅಮೆರಿಕನ್ ಟೆಕ್ನಾಲಜಿ ಸಲೂಷನ್ ಸಂಸ್ಥೆ ಯಾವ ರೀತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ ಎಂಬುದರ ಕುರಿತು ಮುಂದಿನ ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೈಕೋರ್ಟ್ ಇದೇ ವೇಳೆ ನೋಟಿಸ್ ಜಾರಿ ಮಾಡಿತು.












Click it and Unblock the Notifications