IPS; ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ರಾಜೀನಾಮೆ ಅಂಗೀಕಾರ
ಬೆಂಗಳೂರು, ಫೆಬ್ರವರಿ.21: ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಸಿಎಚ್ ಪ್ರತಾಪ್ ರೆಡ್ಡಿ ಫೆಬ್ರವರಿ 09 ರಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು, ಅವರ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ರಾಜ್ಯ ಆಂತರಿಕ ಭದ್ರತಾ ವಿಭಾಗದ(ಐಎಸ್ಡಿ) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಆಗಿ ಪ್ರತಾಪ್ ರೆಡ್ಡಿ ಕಾರ್ಯನಿರ್ವಹಿಸುತ್ತಿದ್ದರು.
ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಪ್ರತಾಪ್ ರೆಡ್ಡಿ, ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಕಾರ್ಯ ನಿರ್ವಹಣೆ ಮಾಡಿದ್ದರು. 1991ರ ಬ್ಯಾಚ್ನ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ಈ ವರ್ಷದ ಜೂನ್ ಕೊನೆಯ ವಾರದಲ್ಲಿ ನಿವೃತ್ತರಾಗಲಿದ್ದರು. ಹೀಗಿರುವಾಗಲೇ ಸ್ವಯಂ ನಿವೃತ್ತಿ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು.

ಸೈಬರ್ ಕ್ರೈಂ ಸ್ಪೆಷಲಿಸ್ಟ್ ಆಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಕಮಲ್ ಪಂತ್ ಅವರ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಿಲಾಗಿತ್ತು. ಬಳಿಕ ಅವರನ್ನು ವರ್ಗಾವಣೆ ಮಾಡಿ ದಯಾನಂದ್ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು. ಈಗ ಸರ್ಕಾರ ಪ್ರತಾಪ್ ರೆಡ್ಡಿಯವರ ಸ್ವಯಂ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದು, ಏಪ್ರಿಲ್ 30 ಕ್ಕೆ ಇಲಾಖೆಯಿಂದ ಬಿಡುಗಡೆಗೊಳಿಸುಂವತೆ ಆದೇಶಿಸಿದೆ.
ಬಿಟೆಕ್ ಪದವೀಧರರಾಗಿರುವ ಪ್ರತಾಪ್ ರೆಡ್ಡಿ ಅವರು ಪ್ರೊಬೆಷನ್ ಮುಗಿಸಿ ಹಾಸನ ಜಿಲ್ಲೆಯ ಅರಸೀಕೆರೆ ಎಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಕ್ರಮೇಣ ಹಲವು ಪ್ರಮುಖ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಸೈಬರ್ ಸೆಕ್ಯುರಿಟಿ ವಿಭಾಗದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕರ್ತವ್ಯ ನಿರ್ವಹಣೆಯಲ್ಲಿನ ಶ್ರೇಷ್ಠತೆಗಾಗಿ ಅವರಿಗೆ ರಾಷ್ಟ್ರಪತಿಗಳು ಮತ್ತು ಕರ್ನಾಟಕದ ಮುಖ್ಯಮಂತ್ರಿಗಳಿಂದ ಗೌರವ ಪದಕಗಳನ್ನು ನೀಡಲಾಗಿದೆ.
ಈ ವರ್ಷದ ಜೂನ್ ಕೊನೆಯ ವಾರದಲ್ಲಿ ಅವರು ನಿವೃತ್ತರಾಗಲಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ನಿವೃತ್ತಿ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಾಪ್ ರೆಡ್ಡಿ ಸೇವೆಗೆ ಗುಡ್ ಬೈ ಹೇಳಿರುವುದು ಸಂಚಲನ ಮೂಡಿಸುತ್ತಿದೆ. ಅವರ ರಾಜೀನಾಮೆಗೆ ಕಾರಣಗಳು ತಿಳಿದುಬಂದಿಲ್ಲ, ಆದರೆ ಕರ್ನಾಟಕ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಬೀಳಲಿದೆ. ಈ ಸಂದರ್ಭದಲ್ಲಿ, ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯುತ್ತಿರುವುದರಿಂದ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.












Click it and Unblock the Notifications