Anna Bhagya: ಮಹತ್ವಾಕಾಂಕ್ಷೆ ಯೋಜನೆಗೆ ಒಂದಾ..ಎರಡಾ.. ಸಂಕಷ್ಟಗಳ ಸರಮಾಲೆ
ಬೆಂಗಳೂರು, ಸೆ 5: ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ದಾರರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಜಾರಿಗೆ ತಂದಿದ್ದ ಅನ್ನಭಾಗ್ಯಕ್ಕೆ ಹಲವು ಕಂಟಕ ಎದುರಾಗಿದೆ. ಒಂದು ಕಡೆ ಕೇಂದ್ರದಿಂದ ಪ್ರತಿ ಮನೆಗೆ ಬರೀ 5 ಕೆಜಿ ಅಕ್ಕಿ ಪೂರೈಕೆ ಮಾತ್ರ ಆಗುತ್ತಿರುವುದರಿಂದ ತಲೆಕೆಡಿಸಿಕೊಂಡಿದ್ದ ಆಹಾರ ಇಲಾಖೆಗೆ, ಇದೀಗ ಉಳಿದ 5 ಕೆಜಿ ಬಗ್ಗೆ ಬದಲಾಗಿ ಹಣ ನೀಡಲು ಮಾಡಿದ್ದ ಡಿಬಿಟಿ ವ್ಯವಸ್ಥೆಯಲ್ಲೂ ತಲೆನೋವು ಶುರುವಾಗಿದೆ. ಅತ್ತ ರೇಷನ್ ಕಾರ್ಡ್ ತಿದ್ದುಪಡಿಗೆ ಹೊರಟ ಜನರಿಗೆ ಸರ್ವರ್ ಸಮಸ್ಯೆ ಕಾಟ ಕೊಡುತ್ತಿದೆ.
ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ರಾಜ್ಯ ಸರ್ಕಾರ ನೀಡುವುದಕ್ಕೆ ಹೊರಟಿದ್ದ ಅನ್ನಭಾಗ್ಯ ಯೋಜನೆಗೆ ಒಂದರ ಮೇಲೋಂದು ಸಮಸ್ಯೆ ಎದುರಾಗುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರದಿಂದ ಒಂದು ಕುಟುಂಬಕ್ಕೆ ಕೇವಲ 5 ಕೆಜಿ ಮಾತ್ರ ಸಿಕ್ಕಿದ್ದರಿಂದ ಕಂಗಾಲಾಗಿದ್ದ ರಾಜ್ಯಸರ್ಕಾರ, ಹಲವು ರಾಜ್ಯಗಳ ಬಳಿ ಧಾನ್ಯಗಳನ್ನ ಪಡೆಯಲು ಯತ್ನಿಸಿತ್ತು.

ಅದಾದ ಬಳಿಕ 5 ಕೆಜಿ ಅಕ್ಕಿ ಜೊತೆಗೆ ಉಳಿದ 5 ಕೆಜಿ ಅಕ್ಕಿಯ ಹಣವನ್ನ ಕಾರ್ಡ್‌ದಾರರ ಖಾತೆಗೆ ಜಮಾ ಮಾಡೋದಾಗಿ ಭರವಸೆ ನೀಡಿತ್ತು, ಇದೀಗ ಖಾತೆಗೆ ಹಣ ಹಾಕುವ ಡಿಬಿಟಿ ವ್ಯವಸ್ಥೆಯಲ್ಲೂ ಹಲವು ಸವಾಲು ಎದುರಾಗಿದೆ. ಸದ್ಯ ಸರ್ಕಾರ ಯೋಜನೆ ಪ್ರಕಾರ 1.27 ಕೋಟಿ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಬೇಕಿತ್ತು.
ಆದರೆ, ತಾಂತ್ರಿಕ ದೋಷ, ದೋಷಪೂರಿತ ಅರ್ಜಿಗಳಿಂದ ಸುಮಾರು 29 ಲಕ್ಷ ಕಾರ್ಡ್‌ದಾರರಿಗೆ ಸರ್ಕಾರದ ಹಣ ಜಮವಾಗದೇ ಹಾಗೇ ಉಳಿದಿದೆ. ಅತ್ತ 98 ಲಕ್ಷ ಕುಟುಂಬಗಳಿಗೆ ಮಾತ್ರ ಡಿಬಿಟಿ ಮೂಲಕ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹಣ ವರ್ಗಾವಣೆ ಮಾಡಲಾಗಿದ್ದು, ಉಳಿದ ಕುಟುಂಬಗಳಿಗೆ ಹಣ ಜಮಾ ಮಾಡುವ ಸವಾಲು ಆಹಾರ ಇಲಾಖೆ ಮುಂದಿದೆ.
ಆಹಾರ ಇಲಾಖೆ ಅಧಿಕಾರಿಗಳ ಜೊತೆ ಕೆ.ಎಚ್.ಮುನಿಯಪ್ಪ ಸಭೆ
ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, "98 ಲಕ್ಷ ಕುಟುಂಬಗಳಿಗೆ ಮಾತ್ರ ಡಿಬಿಟಿ ಮೂಲಕ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ, 5 ಲಕ್ಷ ಕಾರ್ಡ್ ದಾರರು ಬ್ಯಾಂಕ್ ಅಕೌಂಟ್ ಕೊಟ್ಟೇ ಇಲ್ಲ" ಎಂದು ಬಾಂಬ್ ಸಿಡಿಸಿದ್ದಾರೆ.
ಅಲ್ಲದೇ ಈ ಹಿಂದೆ 21 ಲಕ್ಷ ಕಾರ್ಡ್ ಗೆ ಅಕೌಂಟ್ ಇರಲಿಲ್ಲ ,ಕೆಲವು ಕಡೆ ಅಕೌಂಟ್ ಮಾಡಿಸಿದ್ದೇವೆ ಬಾಕಿ 14 ಲಕ್ಷ ಕಾರ್ಡ್ ಗೆ ಅಕೌಂಟ್ ಆಗಬೇಕು. ಅದಾದರೇ, ನಮ್ಮ ಅನ್ನಭಾಗ್ಯ ಯೋಜನೆ ಪೂರ್ಣ ಆಗುತ್ತೆ ಎಂದು ಸಚಿವರು ಹೇಳಿದ್ದಾರೆ.
ರೇಷನ್‌ಕಾರ್ಡ್ ತಿದ್ದುಪಡಿಗೆ ಸೆಪ್ಟೆಂಬರ್ 10 ರ ತನಕ ಅವಕಾಶ
ಇತ್ತ ರೇಷನ್‌ಕಾರ್ಡ್ ತಿದ್ದುಪಡಿಗೆ ಸೆಪ್ಟೆಂಬರ್ 10 ರ ತನಕ ಆಹಾರ ಇಲಾಖೆ ಅವಕಾಶ ನೀಡಿದೆ. ಆದರೆ, ಕಾರ್ಡ್ ತಿದ್ದುಪಡಿಗೂ ಸರ್ವರ್ ಸಮಸ್ಯೆ ಎದುರಾಗಿದ್ದು, ಕಳೆದ ಮೂರು ದಿನಗಳಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಜನರು ಪರದಾಡುತ್ತಿದ್ದಾರೆ. ಈ ಬಗ್ಗೆ ಕೂಡ ಚರ್ಚೆ ನಡೆಸಿರುವ ಸಚಿವರು, ಸರ್ವರ್ ಸರಿಪಡಿಸೋ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದಿದ್ದಾರೆ. ಒಂದು ವೇಳೆ ಸರ್ವರ್ ಸಮಸ್ಯೆ ಮುಂದುವರಿದರೆ, ಆ ದಿನಾಂಕವನ್ನ ವಿಸ್ತರಣೆ ಮಾಡುವ ಸಾಧ್ಯತೆ ಕೂಡ ಇದೆ.
ಅನ್ನಭಾಗ್ಯ ಯೋಜನೆಗೆ ಒಂದಿಲ್ಲೊಂದು ವಿಘ್ನ
ಒಟ್ಟಿನಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಿದ್ದು, ಸದ್ಯ ಬಂದ ಸಮಸ್ಯೆಗಳನ್ನ ಎನ್‌ಕೌಂಟರ್ ಮಾಡೋಕೆ ಆಹಾರ ಇಲಾಖೆ ಕಸರತ್ತು ಮಾಡುತ್ತಿದೆ. ಇವೆಲ್ಲದರ ಮಧ್ಯೆ ಬರಪೀಡಿತ ಪ್ರದೇಶಗಳಿಗೆ 10 ಕೆಜಿ ಅಕ್ಕಿ ವಿತರಣೆ ಮಾಡುತ್ತೇವೆ ಅಂತಾ ಸಚಿವರು ಭರವಸೆ ಕೊಟ್ಟಿದ್ದು, ಅನ್ನಭಾಗ್ಯ ಯಾರ್ಯಾರ ಮನೆಗೆ ತಲುಪುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications