ಬೆಂಗಳೂರು ಗ್ರಾಮಾಂತರ; 20 ಲಕ್ಷ ನಗದು, 48 ಕೆಜಿ ಬೆಳ್ಳಿ ವಶಕ್ಕೆ
ಬೆಂಗಳೂರು, ಮಾರ್ಚ್ 27; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ದಿನಗಣನೆ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಚೆಕ್‌ಪೋಸ್ಟ್ ರಚನೆ ಮಾಡಿ ಚುನಾವಣಾ ಅಕ್ರಮ ತಡೆಗೆ ಕ್ರಮ ಕೈಗೊಂಡಿದ್ದಾರೆ. ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗ ಇನ್ನಷ್ಟು ಕಠಿಣ ನಿಯಮಗಳು ಜಾರಿಗೆ ಬರಲಿವೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದಾಖಲೆ ರಹಿತವಾಗಿ ಸಾಗಿಸುತ್ತಿದ್ದ 20 ಲಕ್ಷ ರೂ. ನಗದು, ಸುಮಾರು 20 ಲಕ್ಷಕ್ಕೂ ಅಧಿಕ ಮೌಲ್ಯದ 48 ಕೆ.ಜಿ. ಬೆಳ್ಳಿ, ವಿವಿಧ ಉಡುಪು, ಬಟ್ಟೆಗಳು ಸೇರಿ ಸುಮಾರು 42,83,320 ರೂ. ಮೌಲ್ಯದ ವಸ್ತುಗಳನ್ನು ನೆಲಮಂಗಲದಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ, ಜಿಲ್ಲಾಧಿಕಾರಿ ಆರ್. ಲತಾ ಈ ಕುರಿತು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1,66,980 ರೂ. ಮೌಲ್ಯದ 347 ಲೀಟರ್ ಅಕ್ರಮ ಮದ್ಯ, 3 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ 13 ಸಾವಿರ ಗ್ರಾಂ ಡ್ರಗ್ಸ್ ಹಾಗೂ 3 ಲಕ್ಷಕ್ಕೂ ಅಧಿಕ ಮೌಲ್ಯದ 536 ಕುಕ್ಕರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ಶುಕ್ರವಾರ ಪೊಲೀಸರು ಕಾರ್ಯಾಚರಣೆ ನಡೆಸಿ, ಎರಡು ಕಾರುಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ಸಾಗಣೆ ಮಾಡುತ್ತಿದ್ದ 20 ಲಕ್ಷ ರೂ.ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾರ್ಗದರ್ಶನದಲ್ಲಿ ನೆಲಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ, 20,22,300 ರೂ.ಮೌಲ್ಯದ 48.156 ಕೆ. ಜಿ. ಬೆಳ್ಳಿ,1,23,000 ರೂ. ಮೌಲ್ಯದ 410 ಸೀರೆಗಳು, 87,800 ರೂ.ಮೌಲ್ಯದ 439 ಚೂಡಿದಾರ್‌ಗಳು, ಸುಮಾರು 39 ಸಾವಿರ ರೂ.ಮೌಲ್ಯದ ಪ್ಯಾಂಟ್ ಬಟ್ಟೆ, 9,800 ರೂ. ಮೌಲ್ಯದ 49 ಶರ್ಟ್ ಪೀಸ್‌ಗಳು ಸೇರಿ ಒಟ್ಟು 42,83,320 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹೇಗಿದೆ ಚುನಾವಣೆ ಸಿದ್ಧತೆ?; ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆಯೋಗದ ಸೂಚನೆಯಂತೆ ಫೆಕ್ಸ್, ಬ್ಯಾನರ್, ಗೋಡೆ ಬರಹಗಳನ್ನು ತೆರವುಗೊಳಿಸಲಾಗುತ್ತಿದೆ. 27 ಸಾವಿರಕ್ಕೂ ಅಧಿಕ ಬ್ಯಾನರ್, ಪೋಸ್ಟರ್, ಗೋಡೆ ಬರಹ ತೆರವು ಮಾಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಈಗಾಗಲೇ ಮಾರ್ಚ್ 27ರೊಳಗೆ ರಾಜಕೀಯ ನಾಯಕರ ಭಾವಚಿತ್ರ ಇರುವ ಬ್ಯಾನರ್, ಪೋಸ್ಟರ್, ಗೋಡೆ ಬರಹ ತೆರವು ಮಾಡಲು ಚುನಾವಣಾ ಆಯೋಗ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಮಾರ್ಚ್ 27ರ ತನಕ ಗಡುವು ನೀಡಿದೆ.
ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಪೂರಕ ವಾತಾವರಣ ನಿರ್ಮಿಸಲು ಶ್ರಮಿಸುತ್ತಿರುವ ಜಿಲ್ಲಾಡಳಿತವು ಚೆಕ್‌ಪೋಸ್ಟ್‌ಗಳನ್ನು ಸ್ಥಾಪನೆ ಮಾಡಿದೆ. ಕಳೆದ ಮಾರ್ಚ್ 13 ರಿಂದ ಮಾರ್ಚ್ 25ರ ಬೆಳಗ್ಗೆಯವರೆಗೆ ಜಿಲ್ಲೆಯ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಸುಮಾರು 31 ಸಾವಿರಕ್ಕೂ ಅಧಿಕ ಬ್ಯಾನರ್ ,ಪೋಸ್ಟರ್ ,ಗೋಡೆ ಬರಹ ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿದ್ದ 512 ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ 1124 ಸೇರಿ 1636 ಗೋಡೆಬರಹಗಳು. ಗ್ರಾಮೀಣ ಪ್ರದೇಶಗಳಲ್ಲಿನ 6767 ಹಾಗೂ ಪಟ್ಟಣ, ನಗರ ಪ್ರದೇಶಗಳಲ್ಲಿನ 5496 ಸೇರಿ ಒಟ್ಟು 12,263 ಪೋಸ್ಟರ್‌ಗಳನ್ನು ತೆರವುಗೊಳಿಸಲಾಗಿದೆ.
ಗ್ರಾಮೀಣ ಭಾಗದ 6670 ಹಾಗೂ ಪಟ್ಟಣ ಪ್ರದೇಶಗಳಲ್ಲಿನ 4465 ಸೇರಿ ಒಟ್ಟು 11,135 ಬ್ಯಾನರ್‌ಗಳು ಹಾಗೂ 1980 ಇತರೆ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಖಾಸಗಿ ಸ್ಥಳಗಳಲ್ಲಿ ಬರೆಯಲಾಗಿದ್ದ 580 ಗೋಡೆ ಬರಹಗಳು, 1637 ಪೋಸ್ಟರ್‌ಗಳು, 1631 ಬ್ಯಾನರುಗಳು ಹಾಗೂ 613 ಇತರೆ ಪ್ರಚಾರ ಸಾಮಗ್ರಿಗಳು ಸೇರಿ ಒಟ್ಟು 4,469 ಪ್ರಚಾರ ವಸ್ತುಗಳನ್ನು ತೆಗೆಯಲಾಗಿದೆ. ಮಾದರಿ ನೀತಿ ಸಂಹಿತೆಯ ಜಿಲ್ಲಾ ನೋಡಲ್ ಅಧಿಕಾರಿಗಳೂ ಆಗಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರವಿ ಎಂ. ತಿರ್ಲಾಪುರ ಅವರ ನೇತೃತ್ವದಲ್ಲಿ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ.












Click it and Unblock the Notifications