Karnataka Election 2023: ಕರ್ನಾಟಕ ರಾಷ್ಟ್ರ ಸಮಿತಿಯ ಚುನಾವಣಾ ಪ್ರಣಾಳಿಕೆಯಲ್ಲಿ ನವಸೂತ್ರಗಳು
ಬೆಂಗಳೂರು, ಏಪ್ರಿಲ್. 04: ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ಗ್ಯಾರಮಟಿ ಯೋಜನೆಗಳನ್ನು ಘೋಷಿಸುತ್ತಿವೆ. ಅಧಿಕೃತವಾಗಿ ಕೆಲವು ಪಕ್ಷಗಳು ಮಾತ್ರ ಪ್ರಣಾಳಿಕೆ ಬಿಡುಗಡೆ ಮಾಡಿವೆ. ಈ ಬಾರಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇವೆ ಎಂದು ಚುನಾವಣಾ ಆಖಾಡಕ್ಕೆ ಇಳಿದಿರುವ ಪ್ರಾದೇಶಿಕ ಪಕ್ಷದ ಕರ್ನಾಟಕ ರಾಷ್ಟ್ರ ಸಮಿತಿ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸಲಿದೆ. ಹೀಗಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೊಜನೆಗಳನ್ನು ರೂಪಿಸಬೇಕು. ಕಾರ್ಯಕ್ರಮಗಳನ್ನು ಅನುಷ್ಟಾನಕ್ಕೆ ತರಬೇಕು ಎನ್ನುವ ನಿಟ್ಟಿನಲ್ಲಿ ರಾಜ್ಯದ ಜನಸಾಮಾನ್ಯರ ಜೊತೆ ಮತ್ತು ಚಿಂತಕರು ಹಾಗೂ ತಜ್ಞರ ಜೊತೆ ಹಲವಾರು ಸಭೆಗಳು ಮತ್ತು ಸಂವಾದಗಳನ್ನು ನಡೆಸಿದ ನಂತರ ಪಕ್ಷವು ಪ್ರಣಾಳಿಕೆಯನ್ನು ಸಿದ್ದಪಡಿಸಲಾಗಿದೆ ಎಂದು ಪಕ್ಷ ಹೇಳಿಕೊಂಡಿದೆ.

ರಾಜ್ಯದ ಉತ್ತಮ ವಾತಾವರಣದಲ್ಲಿ ಜೀವಿಸಲು, ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಪಡೆಯಲು, ತಲೆ ಮೇಲೊಂದು ಸೂರು ಕಲ್ಪಿಸಿಕೊಳ್ಳಲು ಮತ್ತು ದುಡಿಯುವ ಕೈಗಳಿಗೆ ಉದ್ಯೋಗ ಕಲ್ಪಿಸಲು "ಸ್ವಚ್ಚ - ಸದೃಢ - ಸಂವೃದ್ಧ - ಸಾಂಕೃತಿಕ - ಹಸಿರು ಕರ್ನಾಟಕಕ್ಕಾಗಿ" ನವಸೂತ್ರಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಹೊರತರಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೇಳಿದೆ.
ಕೆ.ಆರ್.ಎಸ್. ಪಕ್ಷದ ಪ್ರಣಾಳಿಕೆಯನ್ನು 9 ವಿಭಾಗಗಳನ್ನಾಗಿ ವಿಂಗಡಿಸಲಾಗಿದ್ದು, ಪ್ರತಿ ವಿಭಾಗದಲ್ಲೂ ಅನೇಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಇವು ಕೇವಲ ನಮ್ಮ ಭರವಸೆಯಲ್ಲ, ಸ್ವಚ್ಚ, ಸದೃಢ, ಸಂಮೃದ್ಧ, ಸಾಂಸ್ಕೃತಿಕ, ಹಸಿರು ಕರುನಾಡು ಕಟ್ಟಲು ನಮ್ಮ ಬದ್ಧತೆ, ನಮ್ಮ ಸಂಕಲ್ಪ ಎಂದು ಹೇಳಿದೆ.
*ಕೆಆರ್‌ಎಸ್ ಪಕ್ಷದ ಪ್ರಣಾಳಿಕೆಯ ನವಸೂತ್ರಗಳು*
1. ಭ್ರಷ್ಟಾಚಾರ ಮುಕ್ತ ದಕ್ಷ ಆಡಳಿತ
2. ಆರೋಗ್ಯ
3. ಶಿಕ್ಷಣ
4. ಕೃಷಿ
5. ಮಹಿಳೆ ಮತ್ತು ಕುಟುಂಬ ಕಲ್ಯಾಣ
6. ಯುವಜನತೆ
7. ಪ್ರಾದೇಶಿಕತೆ
8. ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿ
9. ಉದ್ದಿಮೆ ಮತ್ತು ಸಂಘಟಿತ/ಅಸಂಘಟಿತ ಕಾರ್ಮಿಕರ ಕಲ್ಯಾಣ

ಈ ಎಲ್ಲಾ ಅಂಶಗಳ ಅಡಿಯಲ್ಲಿ ತಾವು ಮಾಡುವ ಹಲವು ಕೆಲಸಗಳನ್ನು ಪಕ್ಷ ಪಟ್ಟಿ ಮಾಡಿದೆ. ಇದಲ್ಲದೆ, ಉದ್ಯೋಗ, ಬಡತನ ನಿವಾರಣೆ, ಮದ್ಯ ನಿಷೇಧ ಸೇರಿದಂತೆ ಮತ್ತಷ್ಟು ಅಂಶಗಳನ್ನು ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ.
* ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ 3 ಲಕ್ಷಕ್ಕಿಂತಲೂ ಹೆಚ್ಚಿನ ಹುದ್ದೆಗಳನ್ನು ಒಂದು ವರ್ಷದ ಒಳಗೆ ಭರ್ತಿ ಮಾಡಲಾಗುವುದು.
* ಭ್ರಷ್ಟಾಚಾರರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ/ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲು ಕ್ರಮ.
* ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯ ನಿಷೇಧ.
* ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ.
* ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲ್ಲೂಕಿಗೊಂದು ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
* ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ಗ್ರಾಮ ಸ್ವರಾಜ್ಯ.
* ವೈಜ್ಞಾನಿಕ ಬೆಳೆ ಮತ್ತು ಬೆಲೆ ಪದ್ದತಿ ಜಾರಿ. ಕೃಷಿ ಉತ್ಪನ್ನಗಳಿಗೆ ಗ್ರಾಮೀಣ ಭಾಗದಲ್ಲಿಯೇ ಮೌಲ್ಯವರ್ಧನೆಗೆ ಕ್ರಮ, ಸಾಲಮುಕ್ತ ರೈತ, ಬಡತನಮುಕ್ತ ಹಳ್ಳಿಗಳು.
* ರಾಜ್ಯಾದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ.
* ರಾಜ್ಯದ ಪ್ರತಿ ಹಳ್ಳಿ/ಪಟ್ಟಣಕ್ಕೂ ಮಳೆ/ನದಿ ಮೂಲದ ಕುಡಿಯುವ ನೀರಿನ ವ್ಯವಸ್ಥೆ.
* ರಾಜ್ಯದ ಪ್ರತಿ ಕೆರೆ ಮತ್ತು ಬಂಜರು ಭೂಮಿಗಳಲ್ಲಿ ಗ್ರಾಮ ಪಂಚಾಯಿತಿ ಮಾಲೀಕತ್ವದಲ್ಲಿ ಸೌರವಿದ್ಯುತ್ ಘಟಕ ಸ್ಥಾಪನೆ. ಸ್ಥಳೀಯವಾಗಿ ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆಗೆ ಮತ್ತು ಉದ್ಯೋಗಸೃಷ್ಟಿಗೆ ಆದ್ಯತೆ.
* ನ್ಯಾಯಾಂಗವೂ ಸೇರಿದಂತೆ ಆಡಳಿತದ ಎಲ್ಲಾ ಹಂತದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ, ಕನ್ನಡ ಕಡ್ಡಾಯ.
* ಕರ್ನಾಟಕದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಪ್ರಾಥಮಿಕ ಆದ್ಯತೆ.
* ರಾಜ್ಯದ ನಿರುದ್ಯೋಗಿ ಪದವೀಧರರಿಗೆ ಕನಿಷ್ಠ 2000 ರೂಪಾಯಿ ಮಾಸಾಶನ; ನಿರುದ್ಯೋಗ ಭತ್ಯೆ.
* ಎಲ್ಲಾ ತರಹದ ಮಾಸಾಶನಗಳನ್ನು ಕನಿಷ್ಠ ರೂ.3000ಕ್ಕೆ ಏರಿಕೆ.












Click it and Unblock the Notifications