ಲೈಂಗಿಕ ಕಾರ್ಯಕರ್ತೆಯರ ಪಾಲಿಗೆ ಮತದಾರರ ಗುರುತಿನ ಚೀಟಿಗಳು ಕೇವಲ ಪೇಪರ್!
ಬೆಂಗಳೂರು, ಏಪ್ರಿಲ್. 23: ವಿಧಾನಸಭಾ ಚುನಾವಣೆ ಎಂಬುದು ಕೇವಲ ಸರ್ಕಾರ ಬದಲಿಸುವ ಅಥವಾ ರಾಜಕೀಯ ಬದಲಾವಣೆಯಷ್ಟೇ ಅಲ್ಲ. ಅದು ಹಲವರ ಪಾಲಿಗೆ ಆಶಾದಾಯಕ ಸಮಯ ಕೂಡ. ಎಷ್ಟೋ ಕೆಲಸ, ಕಾರ್ಯಗಳು, ಅಭಿವೃದ್ಧಿ ಯೋಜನೆಗಳು ಈ ಸಮಯದಲ್ಲಿ ವೇಗ ಪಡೆದುಕೊಳ್ಳುತ್ತವೆ. ಆದರೆ, ಕೆಲವರ ಪಾಲಿಗೆ ಚುನಾವಣೆ ಮತ್ತು ಮತದಾರರ ಗುರುತಿನ ಚೀಟಿ ಎರಡು ಇದ್ದು ಇಲ್ಲದಂತೆ.
ಸ್ಪಲ್ಪ ಕಠಿಣ ಎನ್ನಿಸಿದರೂ ಇದು ವಾಸ್ತವ. ಲೈಂಗಿಕ ಕಾರ್ಯಕರ್ತೆಯರಿಗೆ ಗುರುತಿನ ಚೀಟಿಗಳು ಕೇವಲ ಪೇಪರ್‌ಗಳಾಗಿದ್ದು, ಅವರ ದುಃಸ್ಥಿತಿಯನ್ನು ಬದಲಾಯಿಸಲು ವಿಫಲವಾಗಿವೆ. ಈ ಬಗ್ಗೆ ಹಲವು ಸಂಘಟನೆಗಳು ಮತ್ತು ಲೈಂಗಿಕ ಕಾರ್ಯಕರ್ತೆಯರು ಕೂಡ ಅಸಮಾಧಾನ ಹೊರಹಾಕಿದ್ದಾರೆ.

ಕರ್ನಾಟಕ ಸೆಕ್ಸ್ ವರ್ಕರ್ಸ್ ಅಸೋಸಿಯೇಷನ್ (ಕೆಎಸ್‌ಡಬ್ಲ್ಯುಎ) ಮತ್ತು ಅವರೊಂದಿಗೆ ಕೆಲಸ ನಿರ್ವಹಿಸುವ ಎನ್‌ಜಿಒಗಳು ಹೇಳುವಂತೆ, 70 ರಷ್ಟು ಲೈಂಗಿಕ ಸಮುದಾಯದವರು ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಮತ್ತು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಆದರೆ ಅವರಿಗೆ ಇನ್ನೂ ಮೂಲಭೂತ ಆರೋಗ್ಯ ಮತ್ತು ಶಿಕ್ಷಣ ಲಭ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
"ನಾವು ಮತ ಚಲಾಯಿಸಿದರೂ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಈ ಸಮುದಾಯದ ಸದಸ್ಯರು ಭಾವಿಸುತ್ತಾರೆ" ಎಂದು ಕೆಎಸ್‌ಡಬ್ಲ್ಯುಎ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. ಗಾರ್ಮೆಂಟ್ಸ್, ಗೃಹೋಪಯೋಗಿ ಮತ್ತು ನೈರ್ಮಲ್ಯ ಕಾರ್ಮಿಕರಿಗೆ ನೀಡುವಂತೆಯೇ ಈ ಸಮುದಾಯಕ್ಕೂ ಸಮಾನವಾಗಿ ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ಸಮಯದಲ್ಲಿ, ಅವರಿಗೆ ಪಡಿತರ ಕಿಟ್‌ಗಳನ್ನು ಒದಗಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರ ಹೊರತಾಗಿಯೂ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಅನೇಕ ಲೈಂಗಿಕ ಕಾರ್ಯಕರ್ತರು ದೂರಿದ್ದಾರೆ. ಅವರಲ್ಲಿ ಹಲವರು ಎಚ್‌ಐವಿ ಪಾಸಿಟಿವ್ ಮತ್ತು ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಅಂತಿಮವಾಗಿ, ಅವರು ಔಷಧಗಳು ಮತ್ತು ಸರಿಯಾದ ಚಿಕಿತ್ಸೆ ಇಲ್ಲದೆ ಮೃತಪಟ್ಟಿದ್ದಾರೆ.

ಮೂಲಭೂತ ಆರೋಗ್ಯ, ಶಿಕ್ಷಣದ ಹಕ್ಕು ಮತ್ತು ಉದ್ಯೋಗಾವಕಾಶಗಳನ್ನು ನೀಡಬೇಕು. ಈ ಸಮುದಾಯದವರು ಆಸ್ಪತ್ರೆ ಅಥವಾ ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ ಅವರಿಗೆ ಕಿರುಕುಳ ನೀಡಬಾರದು ಎಂದು ಕರ್ನಾಟಕ ಸೆಕ್ಸ್ ವರ್ಕರ್ಸ್ ಅಸೋಸಿಯೇಷನ್ ಆಗ್ರಹಿಸಿದೆ.
ಸಾಲಿಡಾರಿಟಿ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಶುಭಾ ಚಾಕೋ ಮಾತನಾಡಿ, ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ತೀರ್ಪನ್ನು ಅನುಸರಿಸಬೇಕು ಮತ್ತು ಪೊಲೀಸ್ ಅಧಿಕಾರಿಗಳಿಂದ ಲೈಂಗಿಕ ಕಾರ್ಯಕರ್ತೆಯರಿಗೆ ಕಿರುಕುಳವಾಗದಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಅನೇಕ ಲೈಂಗಿಕ ಕಾರ್ಯಕರ್ತರನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಾಜ್ಯದ ಮನೆ ಆಶ್ರಯಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದ್ದಾರೆ.
ಅವರ ದುಡಿಮೆಗೆ ಕಳಂಕ ಅಂಟಿಕೊಂಡಿರುವುದರಿಂದ ಅನೇಕರು ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಅಧಿಕಾರಿಗಳು ಲೈಂಗಿಕ ಕಾರ್ಯಕರ್ತರೊಂದಿಗೆ ವ್ಯವಹರಿಸುವಾಗ ಅವರ ಬಗ್ಗೆ ಹೆಚ್ಚು ಸಂವೇದನಾಶೀಲರಾಗಿರಬೇಕು. ಜೊತೆಗೆ ಅವರ ಗುರುತನ್ನು ಗೌಪ್ಯವಾಗಿಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
(ಮಾಹಿತಿ ಕೃಪೆ- ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್)












Click it and Unblock the Notifications