ಕಾಂಗ್ರೆಸ್ 2ನೇ ಪಟ್ಟಿ: ತಮ್ಮ ನಾಯಕರಿಗೆ ಟಿಕೆಟ್ ನೀಡಿ ಎಂದು ಬೀದಿಗಿಳಿದ ಕಾರ್ಯಕರ್ತರು, ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ
ಬೆಂಗಳೂರು, ಮಾರ್ಚ್. 03: ರಾಜ್ಯ ಚುನಾವಣೆಗೆ ರಾಜಕೀಯ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿವೆ. ಇದರ ಜೊತೆಗೆ ವಿಧಾನಸಭಾ ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತಿದ್ದು, ಈಗಾಗಲೇ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೊಷಿಸಲಾಗಿದೆ. ಉಳಿದ ಕ್ಷೇತ್ರಗಳಿಗೆ ಟಿಕೆಟ್ ನೀಡುವುದು ಪಕ್ಷಗಳಿಗೆ ಭಾರೀ ತಲೆ ನೋವಾಗಿದೆ.
ಕರ್ನಾಟಕ ಕಾಂಗ್ರೆಸ್ ಈಗಾಗಲೇ 124 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿ ಪಟ್ಟಿ ಬಿಡುಗಡೆ ಮಾಡಿದೆ. ಈ ಕ್ಷೇತ್ರಗಳಲ್ಲಿ ಬಹುತೇಕ ಎಲ್ಲೂ ಟಿಕೆಟ್ ಪೈಪೋಟಿ ಅಷ್ಟಾಗಿ ಕಂಡು ಬಂದಿರಲಿಲ್ಲ. ಉಳಿದ 100 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಬೇಕಿದ್ದು, ಇದು ಪಕ್ಷಕ್ಕೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಕಾರಣ ಟಿಕೆಟ್ ಆಕಾಂಕ್ಷಿಗಳು. ಈ ಕ್ಷೇತ್ರಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆಯುತ್ತಿದೆ.

ಯಾರಿಗೆ ಟಿಕೆಟ್ ನೀಡುವುದು ಎಂಬ ಲೆಕ್ಕಾಚಾರಕ್ಕೆ ತಲೆ ಕೆಡಿಸಿಕೊಂಡಿರುವ ಹಿರಿಯ ನಾಯಕರಿಗೆ ಈಗ ಮತ್ತೊಂದು ತಲೆ ನೋವಾಗಿ ತಮ್ಮ ನಾಯಕರಿಗೆ ಎರಡನೇ ಪಟ್ಟಿಯಲ್ಲಿ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕದ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರ ನಗರದಲ್ಲಿನ ಪಕ್ಷದ ಕಚೇರಿ ಬಳಿ ಜಮಾಯಿಸಿದ ವಿವಿಧ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರು ಕಾಂಗ್ರೆಸ್ ಬಿಡುಗಡೆ ಮಾಡಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಮಂಗಳವಾರ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ನಡೆಸಲಿದ್ದು, ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.
ಇನ್ನು, ತರೀಕೆರೆ ಟಿಕೆಟ್ ಸಂಬಂಧ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಚ್.ಎಂ. ಗೋಪಿಕೃಷ್ಣ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಮಡಿವಾಳ ಸಮುದಾಯದವರು ಪ್ರತಿಭಟನೆ ನಡೆಸುತ್ತಿದ್ದು, ಈ ವೇಳೆ ಅವರ ಅಭಿಮಾನಿಯೊಬ್ಬ ಕೆಪಿಸಿಸಿ ಕಚೇರಿ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ವರದಿಯಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಕ್ಷೇತ್ರಗಳ ಸಮೀಕ್ಷೆಯ ವರದಿಯು ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಮಂಗಳವಾರ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಕ್ಷೇತ್ರಗಳ ಸಮೀಕ್ಷೆ ವರದಿಯೂ ಸಿಗಲಿದ್ದು, ಉತ್ತಮ ಅಭ್ಯರ್ಥಿಗಳು ಟಿಕೆಟ್ ಪಡೆಯುತ್ತಾರೆ ಎನ್ನಲಾಗಿದೆ.
There is a lot of demand for our tickets. Tomorrow is the CEC meeting and in the meeting, we will discuss and finalise it. We are getting a survey report and whosoever is the best will get the ticket: Saleem Ahmed, Working President of Karnataka Congress pic.twitter.com/tnSEk8FBL7
— ANI (@ANI) April 3, 2023
ಇದೇ ವೇಳೆ ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷ ಜಯಭೇರಿ ಬಾರಿಸುತ್ತದೆ, ಹೀಗಾಗಿ ನಮ್ಮ ಪಕ್ಷದ ಟಿಕೆಟ್‌ಗೆ ಸಾಕಷ್ಟು ಬೇಡಿಕೆ ಇದೆ ಎಂದು ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ತಿಂಗಳ ಮಾರ್ಚ್ 25 ರಂದು ಕಾಂಗ್ರೆಸ್ ಪಕ್ಷವು ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತು. ಉಳಿದ 100 ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಈ ವಾರ ಪ್ರಕಟಿಸಲಾಗುವುದು ಎಂದು ವರದಿಯಾಗಿದೆ. ಈ ಹಿನ್ನೆಲೆ ಮಂಗಳವಾರ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೇ ನಡೆಸಲಿದೆ.
ಮುಖ್ಯವಾಗಿ ಸಿದ್ದರಾಮಯ್ಯ ಅವರು ಸ್ಪರ್ಧಿಸಲು ನಿರ್ಧರಿಸಿರುವ ಕೋಲಾರ ಕ್ಷೇತ್ರದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ, ಪಕ್ಷದ ಕಾರ್ಯಕರ್ತರ ಒತ್ತಡವಿರುವುದರಿಂದ ಅಲ್ಲಿಂದ ಸ್ಪರ್ಧಿಸಲು ಬಯಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರಿಂದ ಒಂದೇ ಒಂದು ಅರ್ಜಿ ಬಂದಿದ್ದು, ವರುಣಾದಲ್ಲಿ ಟಿಕೆಟ್ ನೀಡಲಾಗಿದೆ ಎಂದು ಹೇಳಿ ಮತ್ತಷ್ಟು ಕಗ್ಗಂಟು ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಈ ಹಿಂದೆ ಹೇಳಲಾಗಿತ್ತು, ಆದರೆ ಮೊದಲ ಪಟ್ಟಿಯಲ್ಲಿ ವರುಣಾ ಸ್ಥಾನದಲ್ಲಿ ಮಾಜಿ ಸಿಎಂ ಹೆಸರನ್ನು ತೋರಿಸಲಾಗಿದೆ. ಆದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇನ್ನೂ ತಮ್ಮ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.
ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ್ದು, ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನವಾಗಿದ್ದು, ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕೊನೆಯ ದಿನವಾಗಿದೆ.











Click it and Unblock the Notifications