ವಕ್ಫ್ ಮಂಡಳಿ ನಾಮನಿರ್ದೇಶನ ರದ್ದು ಆದೇಶ ಹಿಂಪಡೆದ ಸರ್ಕಾರ
ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಸೇರಿ ನಾಲ್ವರು ಸದಸ್ಯರ ನಾಮನಿರ್ದೇಶವನ್ನು ರದ್ದು ಮಾಡಿದ್ದ ಆದೇಶವನ್ನು ರಾಜ್ಯ ಸರ್ಕಾರ ಎರಡೇ ದಿನಗಳಲ್ಲಿ ವಾಪಸ್ ಪಡೆದುಕೊಂಡಿದೆ. ನಾಮ ನಿರ್ದೇಶನ ವಾಪಸ್ ಪಡೆದಿರುವುದಾಗಿ ಅಲ್ಪ ಸಂಖ್ಯಾತರ ಇಲಾಖೆ ಸ್ಪಷ್ಟಪಡಿಸಿದೆ.
ಬಿಜೆಪಿ ಅವಧಿಯಲ್ಲಿ ನೇಮಕವಾಗಿದ್ದ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಅದಿ ಸೇರಿದಂತೆ ಸದಸ್ಯರಾದ ಮೀರ್ ಅಝರ್ ಹುಸೈನ್, ಜಿ.ಯಾಕೂಬ್ ಹಾಗೂ ಐಎಎಸ್ ಅಧಿಕಾರಿ ಝೆಹೆರಾ ನಸೀಮ್ ಅವರ ನಾಮ ನಿರ್ದೇಶನವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತ ರದ್ದು ಮಾಡಿತ್ತು. ವಕ್ಫ್ ಮಂಡಳಿ ಮಾತ್ರವಲ್ಲದೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿಗಮ, ಮಂಡಳಿ, ಪ್ರಾಧಿಕಾರ ಮತ್ತು ಅಕಾಡಮಿಗಳಿಗೆ ಮಾಡಿದ್ದ ನಾಮನಿರ್ದೇಶನ ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದರು.

ಜಮೀರ್ ಅಹ್ಮದ್ ಒತ್ತಡ
ನಾಮನಿರ್ದೇಶವನ್ನು ರದ್ದು ಮಾಡಿದ್ದ ಆದೇಶವನ್ನು ವಾಪಸ್ ಪಡೆಯುವಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರ ಪಾತ್ರವಿದೆ ಎಂದು ಮೂಲಗಳು ತಿಳಿಸಿವೆ. ಅವರು ಒತ್ತಡ ಹಾಕಿದ ಬಳಿಕ ಆದೇಶ ವಾಪಸ್ ಪಡೆಯಲು ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಜಮೀರ್ ಅಹಮದ್ ಅವರನ್ನು ಭೇಟಿ ಮಾಡಿದ್ದ ಶಾಫಿ ಸಅದಿ ಮತ್ತು ಬೆಂಬಲಿಗರು ನಾಮನಿರ್ದೇಶನ ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದರು. ರಾಜ್ಯ ವಕ್ಫ್ ಬೋರ್ಡ್ ಸ್ವಾಯತ್ತ ಸಂಸ್ಥೆಯಾಗಿದ್ದು, ಸದಸ್ಯರ ಅಧಿಕಾರ ಅವಧಿಯು 5 ವರ್ಷಗಳಾಗಿರುತ್ತದೆ ಎಂದು ಮಾಹಿತಿ ನೀಡಲಾಗಿತ್ತು.
ನಾಲ್ಕು ಜನರ ನಾಮನಿರ್ದೇಶನ ರದ್ದುಗೊಳಿಸಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿತ್ತು. ಅದಾದ ಕೇವಲ ಎರಡೇ ದಿನಗಳಲ್ಲಿ "ವಕ್ಫ್ ಮಂಡಳಿಯ ಸದಸ್ಯರ ನಾಮನಿರ್ದೇಶನ ರದ್ದುಗೊಳಿಸಿದ್ದ ಅಧಿಸೂಚನೆಯನ್ನು ಮುಂದಿನ ಅಧಿಸೂಚನೆ ಹೊರಡಿಸುವವರೆಗೆ ವಾಪಸ್ ಪಡೆಯಲಾಗಿದೆ" ಎಂದು ತಿಳಿಸಿದೆ.
ಜಮೀರ್ ಅಹಮದ್‌ಗೆ ಡಿಸಿಎಂ ಸ್ಥಾನ ಕೊಡಿ ಎಂದಿದ್ದ ಶಾಫಿ ಸಅದಿ
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿರುವ ಶಾಫಿ ಸಅದಿ ಕಾಂಗ್ರೆಸ್ ಸರ್ಕಾರದಲ್ಲಿ ಮುಸ್ಲಿಮರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಡ ಹಾಕಿದ್ದರು. ಜಮೀರ್ ಅಹ್ಮದ್ ಅವರನ್ನು ಡಿಸಿಎಂ ಮಾಡಬೇಕು ಮತ್ತು ಕನಿಷ್ಠ 5 ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದರು. ಜಮೀರ್ ಅಹಮದ್‌ಗೆ ಬೆಂಬಲ ನೀಡಿದ ಕಾರಣಕ್ಕಾಗಿ ಜಮೀರ್ ಶಾಫಿ ಸಅದಿ ಅವರಿಗೆ ಮಂಡಳಿ ಅಧ್ಯಕ್ಷ ಸ್ಥಾನ ವಾಪಸ್ ಸಿಕ್ಕಿದೆ ಎಂದು ಮೂಲಗಳು ತಿಳಿಸಿದೆ.












Click it and Unblock the Notifications