Karnataka Next CM : ನನ್ನ ಬಳಿ 135 ಶಾಸಕರು ಇದ್ದಾರೆ ಎಂದ ಡಿಕೆ ಶಿವಕುಮಾರ್
ಮುಖ್ಯಮಂತ್ರಿ ಸ್ಥಾನಕ್ಕೆ ಎಲ್ಲರೂ ಆಸೆ ಪಡಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಕರ್ನಾಟಕ ಸಿಎಂ ಗಾದಿಗೆ ಹಗ್ಗ ಜಗ್ಗಾಟ ಜೋರಾಗಿದ್ದು, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಪಟ್ಟು ಬಿಡದೆ ಹೋರಾಟ ಮಾಡುತ್ತಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, "ಮುಖ್ಯಮಂತ್ರಿ ಹುದ್ದೆಗೆ ಎಲ್ಲರೂ ಆಸೆ ಪಡಲಿ, ನಾವು ಒಂದು ಸಾಲಿನ ನಿರ್ಣಯ ಅಂಗೀಕರಿಸಿದ್ದೇವೆ. ಪಕ್ಷದ ಶಾಸಕಾಂಗ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಯಾವ ಶಾಸಕರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ, ನನ್ನ ಬಳಿ 135 ಶಾಸಕರು ಒದ್ದಾರೆ, ಎಲ್ಲರನ್ನೂ ಸೋನಿಯಾ ಗಾಂಧಿಗೆ ಅರ್ಪಿಸಿದ್ದೇವೆ" ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷನಾಗಿ 135 ಶಾಸಕರನ್ನು ಸೋನಿಯಾ ಗಾಂಧಿಗೆ ಅರ್ಪಿಸಿದ್ದೇನೆ, ನನ್ನ ಹತ್ತಿರ ಈಗ ಯಾವ ಶಾಸಕರೂ ಇಲ್ಲ, 135 ಶಾಸಕರು ಇದ್ದು, ಯಾವ ತೀರ್ಮಾನ ಬೇಕಾದರೂ ಹೊರ ಬೀಳಬಹುದು ಎಂದು ಹೇಳಿದರು. ಡಿಕೆ ಶಿವಕುಮಾರ್ ಸಿಎಂ ಹುದ್ದೆಗಾಗಿ ಪಟ್ಟು ಹಿಡಿದಿದ್ದು, ಏನಾದರೂ ಸರಿ ನಾನೇ ಸಿಎಂ ಆಗಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.
ಸಿಎಂ ಸ್ಥಾನ ತೆಗೆದುಕೊಳ್ಳುತ್ತೇನೆ: ಸಚಿವ ಸ್ಥಾನ ಬೇಡ
ಇನ್ನು ಮುಖ್ಯಮಂತ್ರಿ ಹುದ್ದೆ ಸಿಕ್ಕರೆ ಮಾತ್ರ ತೆಗೆದುಕೊಳ್ಳುವುದಾಗಿ ಹೇಳಿದ್ದು, ಇಲ್ಲದಿದ್ದರೆ ಸಚಿವ ಸ್ಥಾನವೂ ಬೇಡ. ಸಂಪುಟದಲ್ಲಿ ಕೂಡ ಸೇರ್ಪಡೆಯಾಗುವುದಿಲ್ಲ ಎಂದು ಅವರು ಹೇಳಿದರು. ಡಿಕೆ ಶಿವಕುಮಾರ್ ಗೆ ಹಲವು ಶಾಸಕರು ಕೂಡ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಒಕ್ಕಲಿಗ ಸ್ವಾಮೀಜಿಗಳು ಕೂಡ ಡಿಕೆಶಿ ಪರವಾಗಿ ಬ್ಯಾಟ್ ಬೀಸಿದ್ದಾರೆ.
ರಾತ್ರಿ ವೇಳೆಗೆ ಸಿಎಂ ಹೆಸರು ಘೋಷಣೆ
ಸಿಎಂ ಆಯ್ಕೆ ವಿಚಾರ ಈಗ ದೆಹಲಿಗೆ ತಲುಪಿದ್ದು, ಹೈ ಕಮಾಂಡ್ ತೀರ್ಮಾನಕ್ಕೆ ಬಿಡಲಾಗಿದೆ. ಶಾಸಕರು ಲಿಖಿತ ರೂಪದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದು, ಮುಂದಿನ ಸಿಎಂ ಆಯ್ಕೆ ಬಗ್ಗೆ ಗುಪ್ತ ಮತದಾನ ಮಾಡಿದ್ದಾರೆ. ಡಿಕೆಶಿ ಮತ್ತು ಸಿದ್ದರಾಮಯ್ಯ ಸಮ್ಮುಖದಲ್ಲಿ ಮತದಾನದ ಚೀಟಿಗಳನ್ನು ತೆಗೆದು ಎಣಿಕೆ ಮಾಡಲಿದ್ದಾರೆ. ಬಹುತೇಕ ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ದರಾಗಿರುತ್ತೇವೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಈಗಾಗಲೇ ದೆಹಲಿಗೆ ತೆರಳಿದ್ದು, ಇಂದು ರಾತ್ರಿ ವೇಳೆಗೆ ಸಿಎಂ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.












Click it and Unblock the Notifications