ಕರ್ನಾಟಕ ಬಜೆಟ್ : ಗೂಗಲ್+ನಲ್ಲಿ ಬಿಪ್ಯಾಕ್ ಹ್ಯಾಂಗೌಟ್
ಬೆಂಗಳೂರು, ಫೆ. 14 : ಹಣಕಾಸು ಮಂತ್ರಿಯೂ ಆಗಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 9ನೇ ಬಾರಿಗೆ 2014-15ನೇ ಸಾಲಿನ ಆಯವ್ಯಯವನ್ನು ಫೆ.14ರ ಶುಕ್ರವಾರ, ಮಧ್ಯಾಹ್ನ 12.30ಕ್ಕೆ ಮಂಡಿಸಲಿದ್ದು, ಲೋಕಸಭೆ ಚುನಾವಣೆಗೆ ಮುನ್ನ ಬಜೆಟ್ ಮಂಡಿಸುತ್ತಿರುವುದರಿಂದ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬಜೆಟ್ಟಿನಲ್ಲಿ ಸಿದ್ದರಾಮಯ್ಯ ಏನೇನು ಮಂಡಿಸಲಿದ್ದಾರೆ, ಯಾರ್ಯಾರಿಗೆ ಮಂಡಿಗೆ ತಿನ್ನಿಸಲಿದ್ದಾರೆ, ಯಾವ ವರ್ಗಕ್ಕೆ ಎಷ್ಟು ಸಿಗಲಿದೆ, ಯಾರಿಗೆ ತೆಂಗಿನ ಚಿಪ್ಪು ಸಿಗಲಿದೆ ಎಂಬುದು ಫೆ.14 ಪ್ರೇಮಿಗಳ ದಿನದಂದು ಬಹಿರಂಗವಾಗಲಿದೆ. ಇದರ ಬಗ್ಗೆ ಹಲವಾರು ಜನರು ತಲೆ ಕೆಡಿಸಿಕೊಂಡಿದ್ದರೆ, ಪ್ರೇಮಿಗಳು ಮಾತ್ರ ನಮಗೂ ಇದಕ್ಕೂ ಸಂಬಂಧವಿಲ್ಲವೆಂದು ತಮ್ಮ ಲೋಕದಲ್ಲಿ ವಿಹರಿಸುತ್ತಿದ್ದಾರೆ.
ಆದರೆ, ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗಾಗಿ ಟೊಂಕಕಟ್ಟಿ ಯುವಜನತೆಯನ್ನು ಉತ್ತೇಜಿಸುತ್ತಿರುವ ಬಿಪ್ಯಾಕ್ (Bangalore Political Action Committee) ಬಜೆಟ್ಟನ್ನು ಅತ್ಯಂತ ಆಸಕ್ತಿಯಿಂದ ಎದುರುನೋಡುತ್ತಿದ್ದು, ಬೆಂಗಳೂರಿನ ಅಭಿವೃದ್ಧಿಗೆ ಸಿದ್ದರಾಮಯ್ಯ ಏನೇನು ಕೊಡುಗೆ ನೀಡಲಿದ್ದಾರೆ ಎಂದು ಕಾತುರದಿಂದಿದ್ದಾರೆ.

ಬಜೆಟ್ ಮಂಡನೆಯ ನಂತರ ಕರ್ನಾಟಕ ಆಯವ್ಯಯದ ಓರೆಕೋರೆಗಳನ್ನು ಆನ್ ಲೈನ್ ನಲ್ಲಿ ಚರ್ಚಿಸುವ ಉದ್ದೇಶದಿಂದ, ಸಾಮಾಜಿಕ ತಾಣಗಳಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಗೂಗಲ್ ಪ್ಲಸ್ ಹ್ಯಾಂಗೌಟ್ ನಲ್ಲಿ ಸಂವಾದ ನಡೆಸಲಿದ್ದಾರೆ. 'ಕರ್ನಾಟಕ ಬಜೆಟ್ 2014-15' ಎಂಬ ವಿಷಯದ ಮೇಲೆ 'GOOGLE+ Hangout on Air' ಆಯೋಜಿಸಿದ್ದು, ಆಸಕ್ತರು ಭಾಗವಹಿಸಬಹುದಾಗಿದೆ. [ಭಾಗಿಯಾಗಲು ಇಲ್ಲಿ ಕ್ಲಿಕ್ಕಿಸಿ]
ಈ ಸಂವಾದದಲ್ಲಿ ಬಿಪ್ಯಾಕ್ ಅಧ್ಯಕ್ಷೆ ಡಾ. ಕಿರಣ್ ಮಜುಂದಾರ್ ಷಾ, ಉಪಾಧ್ಯಕ್ಷ ಟಿ.ವಿ. ಮೋಹನದಾಸ್ ಪೈ, ಕಾರ್ಯದರ್ಶಿ ಕೆ. ಜೈರಾಜ್ ಮತ್ತು ಅರ್ಬನ್ ಪಾಲಿಸಿ ಎಕ್ಸ್‌ಪರ್ಟ್ ಡಾ. ಅಶ್ವಿನ್ ಮಹೇಶ್ ಅವರು ಭಾಗವಹಿಸುತ್ತಿದ್ದಾರೆ. ಇದು ಶುಕ್ರವಾರ ಮಧ್ಯಾಹ್ನ 3ರಿಂದ 4 ಗಂಟೆಯವರೆಗೆ ನಡೆಯಲಿದೆ. ಬಿಪ್ಯಾಕ್ ನ ಮುಖ್ಯ ನಿರ್ವಾಹಕ ಅಧಿಕಾರಿ ರೇವತಿ ಅಶೋಕ್ ಅವರು ಮಾಡರೇಟ್ ಮಾಡಲಿದ್ದಾರೆ.
ಕರ್ನಾಟಕ ಬಜೆಟ್ ಮಂಡನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಈ ವೇದಿಕೆಯಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು. ಇದರ ಜೊತೆಗೆ, ಕರ್ನಾಟಕ ಬಜೆಟ್ ನ ಮುಖ್ಯಾಂಶಗಳನ್ನು ಒನ್ಇಂಡಿಯಾ ಕನ್ನಡ ಗೂಗಲ್ + ಪುಟ ಕ್ಷಣಕ್ಷಣಕ್ಕೂ ನೀಡಲಿದೆ. ನಿರೀಕ್ಷಿಸಿ.











Click it and Unblock the Notifications