ಮತಾಂತರಕ್ಕೆ ಎಟಿಎಂ ಸರ್ಕಾರ ಬೆಂಬಲ: ಈ ನೆಲದ ಸಂಸ್ಕೃತಿ ಮೇಲೇಕೆ ದ್ವೇಷ?
ಬೆಂಗಳೂರು, ಜಲೈ 04: ಕರ್ನಾಟಕದಲ್ಲಿ ಬಿಜೆಪಿ ತನ್ನ ಅವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ವಿವಿಧ ಕಾನೂನುಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಹಿಂಡೆದಿದೆ. ಈ ಕುರಿತು ಮತ್ತೆ ವಾಗ್ದಾಳಿ ಆರಂಭಿಸಿರುವ ಬಿಜೆಪಿ ಮತಾಂತರ ಕಾಯ್ದೆ ನಿಷೇಧದ ಮೂಲಕ ನಮ್ಮ ಆಸ್ಮಿತೆಯ ಬೇರಿಗೆ ಕಾಂಗ್ರೆಸ್ ಕೊಡಲಿ ಪೆಟ್ಟು ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಮತಾಂತರ ನಿಷೇದ ಕಾಯ್ದೆ ರದ್ದು ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು, ನಮ್ಮ ಸಂಸ್ಕೃತಿ -ಪರಂಪರೆಗಳೇ ನಮ್ಮ ನಾಡಿನ ಅಸ್ಮಿತೆ ಕಾಪಾಡುವ ಮೂಲ ಬೇರು. ಮತಾಂತರಕ್ಕೆ ಕುಮ್ಮಕ್ಕು ನೀಡುವ ಮೂಲಕ ಆ ಬೇರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಈ ನೆಲದ ಸಂಸ್ಕೃತಿ ಮೇಲೆ ನಿಮಗೆ (ಕಾಂಗ್ರೆಸ್) ಏಕೆ ಇಷ್ಟು ದ್ವೇಷ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

ಸಿದ್ದರಾಮಯ್ಯನವರು ಒಂದೆಡೆ ಹೈಕಮಾಂಡ್ ತೃಪ್ತಿಪಡಿಸಲು ಮಿಷನರಿಗಳನ್ನು ಒಳಬಿಟ್ಟುಕೊಂಡು ಇನ್ನೊಂದೆಡೆ ನಿಮ್ಮ ಪಿಎಫ್‌ಐ ಬಾಂಧವರಿಗೆ ಸಹಾಯ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಅದೆಲ್ಲವು ಇಂದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿ ಕಾರಿದೆ. ಇದು ಎಟಿಎಂ ಸರ್ಕಾರ (ATMSarkara), ಮತಾಂತರಕ್ಕೆ ಎಟಿಎಂ ಸರ್ಕಾರ ಬೆಂಬಲ ಎಂದು ಗುಡುಗಿದೆ.
ಮೊದಲೇ ವಿರೋಧಿಸಿದ್ದ ಕಾಂಗ್ರೆಸ್
ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ಸೇರಿದಂತೆ ಕೆಲವು ಕಾನೂನುಗಳನ್ನು ಜಾರಿ ತಂದಿತ್ತು. ಈ ವೇಳೆ ಅವುಗಳನ್ನು ಜಾರಿಗೆ ತರದಂತೆ ಒತ್ತಾಯಿಸಿ ಕಾಂಗ್ರೆಸ್ ನಾಯಕರು ಪ್ರತಿಭಟಿಸಿದ್ದರು.
ನಮ್ಮ ಸಂಸ್ಕೃತಿ -ಪರಂಪರೆಗಳೇ ನಮ್ಮ ನಾಡಿನ ಅಸ್ಮಿತೆ ಕಾಪಾಡುವ ಮೂಲ ಬೇರು.
— BJP Karnataka (@BJP4Karnataka) July 4, 2023
ಮತಾಂತರಕ್ಕೆ ಕುಮ್ಮಕ್ಕು ನೀಡುವ ಮೂಲಕ ಆ ಬೇರಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಿರಲ್ಲಾ @siddaramaiah ರವರೇ.
ಒಂದೆಡೆ ಹೈಕಮಾಂಡ್ ತೃಪ್ತಿಪಡಿಸಲು ಮಿಷನರಿಗಳನ್ನು ಒಳಬಿಟ್ಟುಕೊಂಡು ಇನ್ನೊಂದೆಡೆ ನಿಮ್ಮ ಪಿಎಫ್‌ಐ ಬಾಂಧವರಿಗೆ ಸಹಾಯ ಮಾಡುತ್ತಿರುವುದು ಗುಟ್ಟಾಗಿ… pic.twitter.com/OY3sotob89
ತದನಂತರ ಎದುರಾದ 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರದ ವೇಳೆ ಬಿಜೆಪಿ ಸರ್ಕಾರ ಜಾರಿಗೆ ತಂದ ಕಾನೂನುಗಳನ್ನು ರದ್ದುಗೊಳಿಸುವ ಬಗ್ಗೆ ಕಾಂಗ್ರೆಸ್ ನಾಯಕರು ಭರವಸೆ ನೀಡಿದ್ದರು. ಇದೀಗ ಕಾಂಗ್ರೆಸ್ ಪಕ್ಷದ ಸರ್ಕಾರ ರಚನೆಯಾಗಿ ಎರಡು ತಿಂಗಳು ಕಳೆಯುತ್ತಾ ಬಂದಿದೆ.
ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಬಗ್ಗೆ ಕಾಂಗ್ರೆಸ್ ಸಚಿವ ಸಂಪುಟದಲ್ಲೇ ನಿರ್ಧರಿಸಲಾಗಿದೆ. ಇದಕ್ಕೆ ಬಿಜೆಪಿ ನಾಯಕರು, ಹಿಂದುಪರ ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಕ್ಕೆ ಮಠಾಧೀಶರ ಉಗ್ರ ಹೋರಾಟದ ಎಚ್ಚರಿಕೆ
ಇತ್ತೀಚೆಗೆ ನಾಡಿನ ಮಠಾಧೀಶರು ಸಹ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆ ಹಿಂಪಡೆದಿದ್ದೇ ಆದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಹಿಂದೂ ಧರ್ಮದರ್ಶಿಗಳು ಹಾಗೂ ಮುಖಂಡರು ಕಾಯ್ದೆ ರದ್ದುಪಡಿಸಿದರೆ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆಯಾಗುತ್ತದೆ. ನಾವೆಲ್ಲರೂ ರಾಜ್ಯಾದ್ಯಂತ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರತಿನಿಧಿಗಳೂ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರೆ, ಆ ನಿರ್ಧಾರವನ್ನು ಹಿಂದೂ ವಿರೋಧಿ ಎಂದು ಪರಿಗಣಿಸಲಾಗುವುದು. ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.












Click it and Unblock the Notifications