ಬಿಎಸ್ವೈ ವಾಪಸ್ ನಿರ್ಣಯ ಹೈಕಮಾಂಡ್ ಹೆಗಲಿಗೆ!
ಬೆಂಗಳೂರು, ಸೆ.20 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆಸುವ ಕುರಿತ ನಿರ್ಧಾರವನ್ನು ಕೇಂದ್ರ ಕೈ ಕಮಾಂಡ್ ನಾಯಕರ ಹೆಗಲಿಗೆ ವಹಿಸಲು ರಾಜ್ಯ ಬಿಜೆಪಿ ಒಮ್ಮತದ ತೀರ್ಮಾನ ತೆಗೆದುಕೊಂಡಿದೆ. ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ಧ ಎಂದು ತಿಳಿಸಿದೆ.
ಗುರುವಾರ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ನಡೆದ ರಾಜ್ಯ ಘಟಕದ ಹಿರಿಯ ನಾಯಕರ ಕೋರ್ ಕಮಿಟಿ ಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ವಾಪಸ್ ಕುರಿತು ಚರ್ಚಿಸಲಾಗಿದೆ. ನಂತರ ಆ ಜವಾಬ್ದಾರಿಯನ್ನು ರಾಷ್ಟ್ರೀಯ ನಾಯಕರ ಹೆಗಲಿಗೆ ವಹಿಸಲಾಗಿದೆ.
ಸಭೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಗಿದೆ. ಯಡಿಯೂರಪ್ಪ ವಿಷಯವನ್ನು ದೆಹಲಿಗೆ ಸೀಮಿತಗೊಳಿಸಿ, ರಾಜ್ಯದ ನಾಯಕರು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಗಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಅಕ್ಟೋಬರ್ ತಿಂಗಳಿನಲ್ಲಿ ರಾಜ್ಯ ಪ್ರವಾಸಕ್ಕಾರಿ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಮೋದಿಯವರ ಜೊತೆ ಚರ್ಚಿಸಿ, ದಿನಾಂಕ ನಿಗದಿಗೊಳಿಸುವ ಹೊಣೆ ಅನಂತ್ ಕುಮಾರ್ ಅವರಿಗೆ ವಹಿಸಲಾಗಿದೆ. ಸಭೆಯ ಮುಖ್ಯ ತೀರ್ಮಾನಗಳು

ಪಕ್ಷ ಸಂಘಟನೆ
ಲೋಕಸಭೆ ಚುನಾವಣೆಗೆ ಪಕ್ಷವನ್ನು ವ್ಯವಸ್ಥಿತವಾಗಿ ಸಜ್ಜುಗೊಳಿಸಲು, ಮುಂಬರು 8-10 ದಿನಗಳಲ್ಲಿ ರಾಜ್ಯ ಸಮಿತಿಯ ಪುನಾರಚನೆ ಮಾಡುವ ಉದ್ದೇಶ ಹೊಂದಲಾಗಿದ್ದು, ಪಕ್ಷ ಸಂಘಟನೆಗೆ ನೆರವಾಗುವ ಪ್ರಭಾವಿ ಮುಖಂಡರನ್ನು ಸಮಿತಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.

ವೀಕ್ಷಕರ ನೇಮಕ
ಲೋಕಸಭೆ ಚುನಾವಣೆಯ ಸಿದ್ಧತೆಯ ಅಂಗವಾಗಿ ಪ್ರತಿ ಕ್ಷೇತ್ರಕ್ಕೆ ಇಬ್ಬರು ನಾಯಕರನ್ನು ಉಸ್ತುವಾರಿ ನೋಡಿಕೊಳ್ಳಲು ನೇಮಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಈ ಕುರಿತ ಪಟ್ಟಿ ಅಂತಿಮಗೊಂಡಿದ್ದು, ಚಿಕ್ಕ-ಪುಟ್ಟ ಬದಲಾವಣೆಗಳನ್ನು ಮಾಡಿ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.

ಸಾಲು-ಸಾಲು ಸಮಾವೇಶ
ರಾಜ್ಯ, ಜಿಲ್ಲೆ, ತಾಲೂಕು ಮತ್ತು ವಿಭಾಗಗಳಲ್ಲಿ ಸಹ ವಿವಿಧ ಮೋರ್ಚಾಗಳ ಸಮಾವೇಶವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸಮಾವೇಶಗಳ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ನಿರ್ಧರಿಸಲಾಗಿದೆ. ಅಕ್ಟೋಬರ್ ತಿಂಗಳಿನಿಂದ ಈ ಸಮಾವೇಶಗಳು ಪ್ರಾರಂಭವಾಗಲಿದೆ.

ಸೆಪ್ಟೆಂಬರ್ ಗಡುವು
ಯಡಿಯೂರಪ್ಪ ಸೇರಿದಂತೆ ಬಿಜೆಪಿ ತೊರೆದ ನಾಯಕರನ್ನು ಪಕ್ಷಕ್ಕೆ ಕರೆತರುವ ವಿಚಾರವಾಗಿ ತೀರ್ಮಾನ ತೆಗೆದುಕೊಳ್ಳಲು ರಾಷ್ಟ್ರೀಯ ನಾಯಕರಿಗೆ ಸೆಪ್ಟೆಂಬರ್ ತಿಂಗಳ ಗಡುವು ನೀಡಲಾಗಿದೆ. ಈ ಗೊಂದ ಹೀಗೆ ಮುಂದುವರೆದರೆ ಪಕ್ಷ ಸಂಘಟನೆಗೆ ಅಡಚಣೆಯಾಗಲಿಗೆ ಎಂದು ಮನವಿ ಮಾಡಲು ತೀರ್ಮಾನ.

ಯಡಿಯೂರಪ್ಪ ಅಗತ್ಯದ ಬಗ್ಗೆ ಮಾಹಿತಿ
ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತಂದರೆ ಆಗುವ ಲಾಭಗಳ ಕುರಿತು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡಿಕೊಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಂತರ ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ರಾಜ್ಯ ನಾಯಕರು ಬದ್ಧರಾಗಿ ಇರುವುದಾಗಿ ಎಲ್ಲಾ ನಾಯಕರು ನಿರ್ಧರಿಸಿದ್ದಾರೆ.

ಗೌಡರು ಹೇಳಿದ್ದೇನು?
ಯಡಿಯೂರಪ್ಪ ಅವರನ್ನು ವಾಪಸ್ ಕರೆತರುವ ಕುರಿತ ಚೆಂಡು ಇದೀಗ ಪಕ್ಷದ ಹೈಕಮಾಂಡ್ ಅಂಗಳದಲ್ಲಿದೆ. ಯಡಿಯೂರಪ್ಪ ಅವರ ವಾಪಸಾತಿ ಬಗ್ಗೆ ರಾಜ್ಯ ನಾಯಕರ ಪೈಕಿ ಯಾರೊಬ್ಬರ ವಿರೋಧವೂ ಇಲ್ಲ. ಹೈಕಮಾಂಡ್ ನಾಯಕರು ತೆಗೆದುಕೊಳ್ಳು ತೀರ್ಮಾನ ನಮಗೆ ಒಪ್ಪಿಗೆ ಎಂದು ಮಾಜಿ ಸಿಎಂ ಸದಾನಂ ಗೌಡರು ಹೇಳಿದರು.

ಅಕ್ಟೋಬರ್ ನಲ್ಲಿ ಮೋದಿಗೆ ಆಹ್ವಾನ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಅಕ್ಟೋಬರ್ ಅಂತ್ಯದಲ್ಲಿ ಕರ್ನಾಟಕಕ್ಕೆ ಬರುವಂತೆ ಆಹ್ವಾನಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅ.26 ಅಥವಾ 27ರಂದು ಮೋದಿ ಅವರ ನೇತೃತ್ವದಲ್ಲಿ ಯುವಭೇರಿ ಸಮಾವೇಶ ನಡೆಸಿ, ಚುನಾವಣಾ ಪ್ರಚಾರ ಕಾರ್ಯ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಸಮಾವೇಶಕ್ಕೆ ಆಗಮಿಸುವ ಜನರಿಂದ 10 ರೂ. ಸಂಗ್ರಹಿಸುವ ಕುರಿತು ಚರ್ಚೆ ನಡೆದಿದೆ.












Click it and Unblock the Notifications