ಜೈಲಿನಿಂದ ಹೊರ ಬಂದ ಕರವೇ ಅಧ್ಯಕ್ಷ ನಾರಾಯಣ ಗೌಡ ಹೇಳಿದ್ದೇನು?
ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳುಸವ ಹೋರಾಟಕ್ಕೆ ಸಂಬಂಧ ಪಟ್ಟಂತೆ ಜೈಲು ಸೇರಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಎ. ನಾರಾಯಣಗೌಡ 15 ದಿನಗಳ ಸೆರೆವಾಸದ ನಂತರ ಬಿಡುಗಡೆಯಾಗಿದ್ದಾರೆ. ಅವರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಟ್ವೀಟ್ ಮಾಡಿರುವ ನಾರಾಯಣ ಗೌಡ, ಯಾವುದೇ ಕಾರಣಕ್ಕೂ ಕನ್ನಡಪರ ಕೆಲಸಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಇದೆಲ್ಲ ಹೊರಾಟಗಾರರಿಗೆ ಹೊಸದಲ್ಲ, ಇದಕ್ಕೆ ಹೆದರಿ ಸುಮ್ಮನೆ ಇರುವುದಿಲ್ಲ ಎಂದಿದ್ದಾರೆ.

ನಮ್ಮ ಚಳವಳಿ ಗೆದ್ದಿದೆ
ಸರಣಿ ಟ್ವೀಟ್ ಮಾಡಿರುವ ಅವರು, "ಹದಿನೈದು ದಿನಗಳ ಸೆರೆವಾಸದಿಂದ ಹೊರಗೆ ಬಂದಿದ್ದೇನೆ. ಇದು ನನಗೆ ಹೊಸದಲ್ಲ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ, ಕನ್ನಡತನಕ್ಕಾಗಿ ಎಷ್ಟೋ ಬಾರಿ ಜೈಲಿಗೆ ಹೋಗಿದ್ದೇನೆ. ಮೊಕದ್ದಮೆಗಳು, ಸೆರೆವಾಸ ಇದೆಲ್ಲವೂ ಒಬ್ಬ ಚಳವಳಿಗಾರನ ಬದುಕಲ್ಲಿ ಅನಿವಾರ್ಯ." ಎಂದಿದ್ದಾರೆ.
ನನ್ನ ಸೆರೆವಾಸದ ಸಂದರ್ಭದಲ್ಲಿ ನನ್ನ ಬಿಡುಗಡೆಗಾಗಿ ಧ್ವನಿ ಎತ್ತಿದ ಎಲ್ಲರಿಗೂ ಕೋಟಿ ನಮನಗಳು. ವಿಶೇಷವಾಗಿ ನನ್ನ ಕರವೇ ಕಾರ್ಯಕರ್ತರು, ವಿವಿಧ ಕನ್ನಡ ಚಳವಳಿಗಳ ಮುಖಂಡರು, ರಾಜಕೀಯ ನಾಯಕರು, ಸಾಹಿತಿ-ಕಲಾವಿದರು, ಮಾಧ್ಯಮದ ಬಂಧುಗಳು ಹಾಗು ಎಲ್ಲ ಕನ್ನಡಿಗರಿಗೂ ನನ್ನ ಕೃತಜ್ಞತೆಗಳು ಎಂದು ಧನ್ಯವಾದ ತಿಳಿಸಿದ್ದಾರೆ.
ಹೋರಾಟಗಾರರಿಗೆ ಕಾಯಬೇಡಿ!
ಒಂದಾದ ಮೇಲೊಂದರಂತೆ ಪೊಲೀಸ್ ಕೇಸ್‌ಗಳು, ಜೈಲುವಾಸ ಎಲ್ಲದರ ನಡುವೆಯೂ ನನಗೆ ಅತ್ಯಂತ ಸಮಾಧಾನ ತಂದಿರುವುದು ನಮ್ಮ ಹೋರಾಟ ತಾರ್ಕಿಕ ಗುರಿಯತ್ತ ಸಾಗಿರುವ ಬೆಳವಣಿಗೆ. ರಾಜ್ಯ ಸರ್ಕಾರ ಈಗಾಗಲೇ ಕನ್ನಡ ನಾಮಫಲಕ ಕಡ್ಡಾಯದ ಸುಗ್ರೀವಾಜ್ಞೆ ಹೊರಡಿಸಿದೆ. ನಮ್ಮ ಚಳವಳಿ ಯಶಸ್ವಿಯಾಗಿರುವುದಕ್ಕೆ ಇದು ಸಾಕ್ಷಿ
ಫೆಬ್ರವರಿ 28ರೊಳಗೆ ರಾಜ್ಯದ ಎಲ್ಲ ಭಾಗಗಳಲ್ಲೂ ನಾಮಫಲಕಗಳು, ಜಾಹೀರಾತು ಫಲಕಗಳು ಕನ್ನಡೀಕರಣಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ, ನಮ್ಮೆಲ್ಲರ ಜವಾಬ್ದಾರಿ. ನೀವು ಇರುವ ಪ್ರದೇಶಗಳಲ್ಲಿ ನಾಮಫಲಕಗಳು ಕನ್ನಡೀಕರಣಗೊಳ್ಳದಿದ್ದರೆ ನೀವೇ ಪ್ರಶ್ನಿಸಿ. ಎಲ್ಲದಕ್ಕೂ ಹೋರಾಟಗಾರರಿಗೆ ಕಾಯಬೇಡಿ ಎಂದು ಕನ್ನಡಿಗರಿಗೆ ಮನವಿ ಮಾಡಿದ್ದಾರೆ.
ಡಿಸೆಂಬರ್ 27ರಂದು ಕನ್ನಡ ನಾಮಫಲಕ ಚಳವಳಿಯ ಸಂದರ್ಭದಲ್ಲಿ ಒಂದಷ್ಟು ಸಮಸ್ಯೆಗಳಾದವು. ದೊಡ್ಡ ಮಟ್ಟದ ಚಳವಳಿಗಳ ಸಂದರ್ಭದಲ್ಲಿ ಹೀಗಾಗುವುದು ಸಹಜ. ನಾವು ಪ್ರಜಾಪ್ರಭುತ್ವ ಮಾರ್ಗದ ಕಾನೂನು ಬದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾಡುವ ಸಂಬಂಧ ನಡೆದ ಹೋರಾಟದಲ್ಲಿ ಕನ್ನಡ ಪರ ಸಂಘಟನೆಗಳ ನಾಯಕರು, ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ನಂತರ ಹಲವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರೂ, ನಾರಾಯಣಗೌಡರನ್ನು ಮಾತ್ರ ಮತ್ತೆ ಬಂಧಿಸಿ 15 ದಿನಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು.












Click it and Unblock the Notifications