ಕನ್ನಡ ಅನುಷ್ಠಾನಕ್ಕಾಗಿ ಸಿದ್ದರಾಮಯ್ಯಗೆ ರಕ್ತದ ಪತ್ರ!
ಬೆಂಗಳೂರು, ನ.3 : ಹುಡುಗಿಗೆ ಪ್ರೀತಿಯನ್ನು ತಿಳಿಸಲು ಕೆಲವು ಪ್ರೇಮಿಗಳು ರಕ್ತದಲ್ಲಿ ಪತ್ರ ಬರೆಯುವುದನ್ನು ಕೇಳಿದ್ದೀರಿ. ಆದರೆ, ಕನ್ನಡದಲ್ಲಿ ಆಡಳಿತ ಕೊಡಿ ಎಂದು ಮನವಿ ಮಾಡಿ, ಸಿಎಂ ಸಿದ್ದರಾಮಯ್ಯ ಅವರಿಗೆ ವ್ಯಕ್ತಿಯೊಬ್ಬರು ರಕ್ತದಲ್ಲಿ ಪತ್ರ ಬರೆದಿದ್ದಾರೆ.
ಕನ್ನಡ ರಾಜ್ಯೋತ್ಸವದ ದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕನ್ನಡ ಪ್ರೀತಿಯ 19 ಪುಟಗಳ ರಕ್ತದ ಪತ್ರ ರವಾನೆಯಾಗಿದೆ. ಇದನ್ನು ಬರೆದಿರುವುದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮೆಣಗನಹಳ್ಳಿ ನಿವಾಸಿಯಾದ ಎಂ.ಎಲ್.ಚಂದ್ರಶೇಖರ್.

ಚಂದ್ರಶೇಖರ್ ಮೂಲತಃ ಹಾಸನ ಜಿಲ್ಲೆಯವರಾಗಿದ್ದರೂ ಕಳೆದ ಮೂರು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿನ ಜನರ ಮರಾಠಿ ಪ್ರೀತಿಯನ್ನು ಕಂಡು, ಕರ್ನಾಟಕದ ಜನರಿಗೂ ಭಾಷೆಯ ಮೇಲೆ ಇಂತಹ ಪ್ರೀತಿ ಬರಬೇಕು. ಆದ್ದರಿಂದ ಸರ್ಕಾರ ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕು ಎಂದು ಪತ್ರ ಬರೆದಿದ್ದಾರೆ.
ಆಡಳಿತದಲ್ಲಿ ಕನ್ನಡದ ಪರಿಣಾಮಕಾರಿ ಅನುಷ್ಠಾನ, ಜನಪರ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ಮುಂತಾದ ವಿಷಯಗಳನ್ನು ಹೊಂದಿರುವ 19 ಪುಟಗಳ ಪತ್ರವನ್ನು ರಕ್ತದಲ್ಲಿ ಬರೆದಿರುವ ಚಂದ್ರಶೇಖರ್ ಮುಖ್ಯಮಂತ್ರಿಗಳಿಗೆ ತಮ್ಮ ಮನವಿ ಸಲ್ಲಿಸಿ, ಕನ್ನಡ ಪ್ರೀತಿ ತೋರಿದ್ದಾರೆ.
19 ಪುಟಗಳ ರಕ್ತದ ಪತ್ರ ಒಟ್ಟು 27 ಅಂಶಗಳನ್ನು ಒಳಗೊಂಡಿದೆ. ಸರ್ಕಾರಿ ನೌಕರರು ಕನ್ನಡದಲ್ಲಿಯೇ ಸಹಿ ಮಾಡುವುದನ್ನು ಕಡ್ಡಾಯ ಮಾಡುವುದು, ಕನ್ನಡದಲ್ಲಿ ಶಿಕ್ಷಣ ನೀಡಬೇಕು, ಕರ್ನಾಟಕಕ್ಕೆ ದ್ರೋಹ ಬಗೆಯುವವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂಬುದು ಚಂದ್ರಶೇಖರ್ ಅವರ ಪತ್ರದಲ್ಲಿನ ಪ್ರಮುಖ ಅಂಶಗಳಾಗಿವೆ.
ಉಳಿದಂತೆ, ಹೊರನಾಡ ಕನ್ನಡಿಗರಿಗೆ ಕಾನೂನು ನೆರವು ನೀಡಿ ಅವರ ಹಿತ ಕಾಪಾಡಬೇಕು, ಹೊರ ರಾಜ್ಯಗಳಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕು ಎಂಬ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ದಿನದಂದು ಈ ಪತ್ರ ಸಿಎಂ ಸಿದ್ದರಾಮಯ್ಯ ಅವರ ಕೈ ಸೇರಿದೆ. ಕನ್ನಡ ಭಾಷೆಯ ಅಭಿವೃದ್ಧಿಗೆ ಸಿಎಂ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕು.












Click it and Unblock the Notifications