ಕನ್ನಡ ಕಡ್ಡಾಯಕ್ಕಾಗಿ ಹೋರಾಟ: 'ಕರವೇ' ಆರೋಪಗಳಿಗೆ ಜಿ.ಪರಮೇಶ್ವರ ತಿರುಗೇಟು
ಬೆಂಗಳೂರು, ಡಿಸೆಂಬರ್ 28: ಎಪ್ಪತ್ತು ವರ್ಷ ಆಡಳಿತ ನೀಡಿದ ಕಾಂಗ್ರೆಸ್ ಬೇಕಾದಷ್ಟು ಪಾಠ ಕಲಿತಿದೆ. ಈಗ ಕಲಿಸುವುದು ಬೇಕಾಗಿಲ್ಲ. ಕನ್ನಡ ಕಡ್ಡಾಯಕ್ಕೆ ಬಿಬಿಎಂಪಿ ಅಗತ್ಯ ಸೂಚನೆ ನೀಡಿದೆ. ಈ ಮಧ್ಯೆ ಶಾಪಿಂಗ್ ಮಳಿಗೆಗಳ ಮೇಲೆ ದಾಳಿ ಮಾಡಿರುವುದು ಸರಿಯಲ್ಲ. ಕಾನೂನು ಕೈಗೆತ್ತಿಕೊಂಡಾಗ ಪೊಲೀಸರು ಸೂಕ್ತ ನಿರ್ಧಾರ ಕೈಗೊಂಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಅವರು 'ಕರವೇ' ಆರೋಪಗಳಿಗೆ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿನ ವಾಣಿಜ್ಯ ಮಳಿಗೆಗಳು ಶೇಕಡಾ 60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು ಎಂದು ಬಿಬಿಎಂಪಿ ಸೂಚಿಸಿದೆ. ಇದರ ಬೆನ್ನಲ್ಲೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಬೀದಿಗಿಳಿದಿತ್ತು. ಆಂಗ್ಲ ನಾಮಫಲಕ ಕಿತ್ತು ಹಾಕಿದ್ದರು. ಮಾಲೀಕರಿಗೆ ಪೆಪ್ಪರ್ ಸ್ಪ್ರೇ ಹೊಡೆದಿದ್ದರು, ಬಿಸಿ ಮುಟ್ಟಿಸಿದ್ದರು.

ಈ ವೇಳೆ ಪೊಲೀಸರು ಕರವೇ ಸದಸ್ಯರನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ವಶಕ್ಕೆ ಪಡೆದವರನ್ನು ಬಿಡುಗಡೆ ಮಾಡಿಲ್ಲ. ಸರ್ಕಾರ, ಪೊಲೀಸರು ಮಾಲ್‌ಗಳ ಪರವಿದೆ ಎಂದು ಕರವೇ ಆರೋಪಿಸಿತ್ತು. ಇದಕ್ಕೆ ಗೃಹ ಸಚಿವರು ತಿರುಗೇಟು ಕೊಟ್ಟಿದ್ದಾರೆ.
ಪೊಲೀಸರು ಕಾನೂನಾತ್ಮಕ ಕೆಲಸ ಮಾಡಿದ್ದಾರೆ
ಗುರುವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕನ್ನಡ ರಕ್ಷಣೆ ವಿಚಾರದಲ್ಲಿ ಸರ್ಕಾರ ಕನ್ನಡ ಪರ ಅನೇಕ ನಿರ್ಧಾರ ಕೈಗೊಂಡಿದ್ದೇವೆ. ಕನ್ನಡದಲ್ಲಿ ನಾಮಫಲಕ ಹಾಕಬೇಕು ಎಂಬ ವಿಚಾರ ಕುರಿತು ಅಗತ್ಯ ಸೂಚನೆ ನೀಡಿದೆ. ಈ ಮಧ್ಯೆ ಒತ್ತಾಯ ಪೂರ್ವಕವಾಗಿ ಕರವೇ ಸಂಘಟನೆಯವರು ವಾಣಿಜ್ಯ ಮಳಿಗೆಗಳಲ್ಲಿ ದಾಳಿ ಮಾಡಿದ್ದಾರೆ. ಏನೇ ಆಗಲಿ ಕಾನೂನು ಕೈಗೆತ್ತಿಕೊಳ್ಳಬಾರದು. ಇಂತಹ ಸಂದರ್ಭದಲ್ಲಿ ಪೊಲೀಸರು ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಕನ್ನಡ ಕಡ್ಡಾಯ ಬಗ್ಗೆ 'ಕರವೇ' ಅವರು ಸರ್ಕಾರಕ್ಕೆ ಬಿಬಿಎಂಪಿ ಗೆ ತಿಳಿಸಿ ಒತ್ತಾಯಿಸಬಹುದಿತ್ತು. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಂಡರೆ ನೋಡಿಕೊಂಡು ಪೊಲೀಸರು ಸುಮ್ಮನಿರಬೇಕಿತ್ತಾ?. ಘಟನೆಯಲ್ಲಿ ಪೊಲೀಸರು ಕಾನೂನಾತ್ಮಕ ಕೆಲಸ ಮಾಡಿದ್ದಾರೆ.

ಹೊರಗಿನವರಿಗೆ ನಾವೇನು ಸಂದೇಶ ಕೊಡುತ್ತಿದ್ದೇವೆ?
ಬೆಂಗಳೂರು ವಿಶ್ವಕ್ಕೆ ಮಾದರಿಯಾದ ಪಟ್ಟಣ, ಈ ನಗರದ ಬಗ್ಗೆ ನಮಗೆಲ್ಲ ಹೆಮ್ಮೆ ಇದೆ. ಇಂತಹ ನಗರಕ್ಕೆ ರಾಜ್ಯ ಹೊರ ರಾಜ್ಯದಿಂದ ಬರುತ್ತಾರೆ. ಇಂತಹ ಘಟನೆಗಳಿಂದ ನಾವು ಏನು ಸಂದೇಶ ಕೊಡುತ್ತೇವೆ. ಇಂತಹ ಘಟನೆಗಳಾದಾಗ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಸೂಕ್ತ ಕ್ರಮ ಜರುಗಿಸಿದ್ದಾರೆ ಎಂದು ಕರವೆ ನಡೆ ಖಂಡಿಸಿದರು.
ಸರ್ಕಾರ ಸಹ ಬಿಬಿಎಂಪಿ ಮೂಲಕ ಸೂಚನೆ ನೀಡಿದೆ. ಕರೆವೇ ಅನ್ನು ಪೊಲೀಸರು ಸರಿಯಾಗಿ ನಡೆಸಿಕೊಂಡಿಲ್ಲ ಎಂದಿದ್ದಾರೆ. ಹಾಗಾದರೆ ಹೇಗೆ ನಡೆಸಿಕೊಳ್ಳಬೇಕು? ಪ್ರತಿಭಟನೆ ಮಾಡುತ್ತಿದ್ದರೆ, ಪೊಲೀಸರು ಚರ್ಚೆಗೆ ಅರ್ಧಗಂಟೆ ಸಮಯ ಕೊಡುತ್ತಾರೆ. ಅದರ ನಂತರ ಏನು ಮಾಡಬೇಕು? ಎಂದು ಸಚಿವರು ಪ್ರಶ್ನಿಸಿದರು.
ರಕ್ಷಣೆ ಕೊಡುವುದು ಪೊಲೀಸರ ಕರ್ತವ್ಯ
ಸರ್ಕಾರಕ್ಕೆ ಮನವಿ ಮಾಡುವ ಬದಲು ನೀವೇ ಮಳಿಗೆಗಳ ಮೇಲೆ ದಾಳಿ ಮಾಡಿ, ದಾಂಧಲೆ ಮಾಡಿದಾಗ, ಬೋರ್ಡ್ ಕಿತ್ತು ಹಾಕಿದಾಗ ಶಾಪಿಂಗ್ ಮಾಲ್ ನವರು ಪೊಲೀಸರ ಮುಂದೆ ರಕ್ಷಣೆ ಕೂರುತ್ತಾರೆ. ಅದನ್ನು ನೋಡಿಕೊಂಡು ಪೊಲೀಸರು ಸುಮ್ಮನಿರಲ್ಲ. ಅವರಿಗೂ ರಕ್ಷಣೆ ಕೊಡುವುದು ಪೊಲೀಸರ ಕೆಲಸ ಎಂದರು.
2017ರಲ್ಲಿನ ಕನ್ನಡ ಕಡ್ಡಾಯ ಕಾಯ್ದೆ ಅನುಷ್ಠಾನಕ್ಕಾಗಿ ಸರ್ಕಾರಕ್ಕೆ ಒತ್ತಾಯ ಮಾಡಲಿ. ಅದಕ್ಕಾಗಿ ಮೂರು ತಿಂಗಳ ಸಮಯ ಕೊಡಲಿ. ಅದನ್ನು ಬಿಟ್ಟು ಕಾನೂನು ಕೈಗೆತ್ತಿಕೊಳ್ಳಬಾರದು. ನಮ್ಮ ಸರ್ಕಾರ ಯಾರ ಪರವಾಗಿಯೂ ಇಲ್ಲ. ಇಲ್ಲಿ ಪರ ವಿರೋಧ ಪ್ರಶ್ನೆಯೇ ಇಲ್ಲ. ನಾವು ಕಾನೂನು ಪರವಾಗಿದ್ದೇವೆ. ಕಾಂಗ್ರೆಸ್ ಬೇಕಾದಷ್ಟು ಪಾಠ ಕಲಿತಿದೆ ಎಂದು ಅವರು ಪ್ರಶ್ನೆಗಳಿಗೆ ಉತ್ತರಿಸಿದರು.












Click it and Unblock the Notifications