ಕಲಘಟಗಿ ಖಾಸನೀಸ ಬ್ರದರ್ಸ್ ಅಂದರೆ ಗಾಂಧೀನಗರದವರ ಪಾಲಿಗೆ ಹಾರರ್ ಸಿನಿಮಾ
ಬೆಂಗಳೂರು, ಜೂನ್ 1: ಕಲಘಟಗಿಯ ಹರ್ಷ ಎಂಟರ್ ಪ್ರೈಸಸ್ ಅಂದರೆ ಅಲ್ಲಿ ಹೂಡಿಕೆ ಮಾಡಿದ್ದವರು ಮಾತ್ರವಲ್ಲ, ಸಿನಿಮಾ ಮಂದಿ ಕೂಡ ಗಾಬರಿ ಪಡುವಂತೆ ಆಗಿದೆ. ಏಕ ಕಾಲಕ್ಕೆ ಹತ್ತು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದ ಖಾಸನೀಸ ಸಹೋದರರು ಅವುಗಳ ನಿರ್ದೇಶಕರು, ನಟರನ್ನು ಕೂಡ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಐರಾ, ಶಾದಿ ಭಾಗ್ಯ, ಎಂಟಿವಿ ಸುಬ್ಬುಲಕ್ಷ್ಮಿ, ಸೆಕೆಂಡ್ ಬಕೆಟ್ ಬಾಲ್ಕನಿ, ಪ್ರೇಮದಲ್ಲಿ, ಪ್ರೀತಿ ಪ್ರಾಪ್ತಿರಸ್ತು, ದಂಡಯಾತ್ರೆ, ಉತ್ಸವ ಸಿನಿಮಾಗಳು ಆರಂಭವಾಗಿ ವಿವಿಧ ಹಂತಗಳಲ್ಲಿದ್ದವು. ಈ ಪೈಕಿ ಐರಾ ಸಿನಿಮಾ ಸೆನ್ಸಾರ್ ಗೆ ಹೋಗಬೇಕಿದೆ. ಇನ್ನು ಶಾದಿ ಭಾಗ್ಯ ಶೇ ಎಂಬತ್ತರಷ್ಟು ಹಾಗೂ ಎಂಟಿವಿ ಸುಬ್ಬುಲಕ್ಷ್ಮಿ ಶೇ ಅರವತ್ತರಷ್ಟು ಮುಗಿದಿದೆ.[ಕಲಘಟಗಿಯಲ್ಲಿ ನೂರಾರು ಕೋಟಿ ವಂಚಿಸಿದ್ದ ಸಹೋದರರು ಅರೆಸ್ಟ್!]

ಈ ಸಿನಿಮಾಕ್ಕೆ ಸಂಬಂಧಿಸಿದ ಹಾಗೆ ನಿರ್ದೇಶಕ ಪವನ್ ಒಡೆಯರ್ ಒನ್ಇಂಡಿಯಾ ಕನ್ನಡದ ಜತೆ ಮಾತನಾಡಿದ್ದಾರೆ. ಐರಾ, ಶಾದಿ ಭಾಗ್ಯ ಹಾಗೂ ಎಂಟಿವಿ ಸುಬ್ಬುಲಕ್ಷ್ಮಿ ಸಿನಿಮಾವನ್ನು ನನ್ನ ತಂಡದ ಹುಡುಗರೇ ನಿರ್ದೇಶಿಸುತ್ತಿದ್ದರು. ಶಾದಿ ಭಾಗ್ಯ ಸಿನಿಮಾಗೆ ನಾನೇ ಹೀರೋ. ಐರಾ ಸೆನ್ಸಾರ್ ಗೆ ಸಿದ್ಧವಾಗಿದೆ ಅಂತ ನಿರ್ಮಾಪಕರಿಗೆ ಫೋನ್ ಮಾಡಿ ತಿಳಿಸಿದ್ದೆ.
ನನ್ನ ತಾಯಿಗೆ ಹುಷಾರಿಲ್ಲ. ಅವರು ಚೇತರಿಸಿಕೊಂಡ ತಕ್ಷಣ ಬರ್ತೀವಿ ಅಂತ ಅವರು ಕೂಡ ತಿಳಿಸಿದ್ದರು. ಷೂಟಿಂಗ್ ಸಮಯದಲ್ಲಿ ದುಡ್ಡು-ಕಾಸಿನ ವ್ಯವಸ್ಥೆಗೆ ಏನೂ ತೊಂದರೆ ಕೊಟ್ಟಿರಲಿಲ್ಲ. ಆದರೆ ಏಪ್ರಿಲ್ ಎಂಟನೇ ತಾರೀಕಿನ ನಂತರ ಮೊಬೈಲ್ ಸ್ವಿಚ್ಛ್ ಆಫ್ ಆಗಿಹೋಯಿತು ಎನ್ನುತ್ತಾರೆ ಪವನ್ ಒಡೆಯರ್.[ಚಿಟ್ ಫಂಡ್, ನೂರಾರು ಜನರಿಗೆ ಸಾವಿರಾರು ಕೋಟಿ ದೋಖಾ]
ಇದೀಗ ಸಿಐಡಿಯಿಂದ ಸಿನಿಮಾಗೆ ಸಂಬಂಧಪಟ್ಟವರ ತನಿಖೆ ಕೂಡ ಆಗುತ್ತದೆ ಎಂಬ ಮಾತಿದೆ. ಈ ಬಗ್ಗೆ ಏನಂತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕಾನೂನಿನ ವಿಷಯ. ಅವರಿಗೆ ಬೇಕಾದ ಮಾಹಿತಿ ನೀಡುತ್ತೇನೆ. ಆದರೆ ಇಷ್ಟೊಂದು ನಿರ್ದೇಶಕರು ತಂತ್ರಜ್ಞರ ಸಮಯ, ಬುದ್ಧಿ, ಶ್ರಮ ಎಲ್ಲ ಹೀಗೆ ಆಗಿಹೋಯ್ತಲ್ಲ ಎಂಬ ಬೇಸರವಾಗುತ್ತಿದೆ ಎಂದರು ಪವನ್ ಒಡೆಯರ್.












Click it and Unblock the Notifications