ಜೆಡಿಎಸ್ ಅಧಿಕಾರಕ್ಕೆ ಬಂದರೆ ಬೆಂಗಳೂರು ನೀರಿನ ಸಮಸ್ಯೆ ಇತ್ಯರ್ಥ?
ಬೆಂಗಳೂರು: ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ಆಶ್ವಾಸನೆ ಹೆಚ್ಚಾಗುತ್ತಿದೆ. ಈಗ ಜೆಡಿಎಸ್ ಬೆಂಗಳೂರಿಗರ ಮನ ಗೆಲ್ಲಲು, ಮೇಕೆದಾಟು ಯೋಜನೆ ಮೂಲಕ ಬೆಂಗಳೂರಿನ ನೀರಿನ ಸಮಸ್ಯೆ ಪರಿಹರಿಸುವುದಾಗಿ ಹೇಳಿದೆ. ಹಾಗಾದರೆ JDS ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಬಗ್ಗೆ ನೀಡಿರುವ ಆಶ್ವಾಸನೆ ಏನು? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ಸಾಕಷ್ಟು ಮುಂದಿದೆ. ಅದರಲ್ಲೂ ಬೆಂಗಳೂರಲ್ಲಿ ಈಗಾಗಲೇ 1 ಕೋಟಿ 36 ಲಕ್ಷ ಜನ ವಾಸಿಸುತ್ತಿದ್ದಾರೆ. ಮುಂದಿನ 20 ರಿಂದ 25 ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 3 ಕೋಟಿ ದಾಟುವ ನಿರೀಕ್ಷೆ ಇದೆ. ಹೀಗಾಗಿ ನೀರಿನ ಸಮಸ್ಯೆ ಕಾಡುವುದು ಪಕ್ಕಾ ಎನ್ನಲಾಗುತ್ತಿದೆ. ಜೆಡಿಎಸ್ ಇದೇ ಮಾಹಿತಿ ಮಾನದಂಡವಾಗಿ ಇಟ್ಟುಕೊಂಡು, ಮೇಕೆದಾಟು ಯೋಜನೆ ಮೂಲಕ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರಿಗರಿಗೆ ಬಂಪರ್ ಗ್ಯಾರಂಟಿ?
ಅದಂಹಾಗೆ ಮೇಕೆದಾಟು ಯೋಜನೆ ಬಗ್ಗೆ ಜೆಡಿಎಸ್ ಹೇಳಿರುವುದು ಇಷ್ಟು, ಈ ಯೋಜನೆ ಸಮಾನಂತರ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದ್ದು, ಬೆಂಗಳೂರು ನಗರ ಮತ್ತು ಆಸುಪಾಸಿನ ವಸತಿ ಪ್ರದೇಶಗಳು ಎದುರಿಸುತ್ತಿರುವ ಕುಡಿವ ನೀರಿನ ಕೊರತೆ ನೀಗಿಸಲು 67 TMC ಶೇಖರಣೆ ಸಾಮರ್ಥ್ಯವುಳ್ಳ ಅಣೆಕಟ್ಟು ಯೋಜನೆ. ಈ ಯೋಜನೆಯ ವಿಸ್ತೃತ ವರದಿಯನ್ನು ಜನವರಿ 2019 ರಲ್ಲಿಅನುಮೋದನೆಗಾಗಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. 4 ವರ್ಷಗಳು ಕಳೆದಿದ್ದರೂ ಅನುಮತಿ ಸಿಕ್ಕಿಲ್ಲ.
ಕುಡಿಯುವ ನೀರಿಗೆ ಹಾಹಾಕಾರ!
ತಮಿಳುನಾಡು ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿರುವುದು ಒಂದು ಕಾರಣವಾದರೆ, ತಾಂತ್ರಿಕ ಕಾರಣಗಳು ಹಲವಾರು ಇರುತ್ತವೆ. ಈ ಯೋಜನೆಯ ವೆಚ್ಚ 9 ಸಾವಿರ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, ಈಗಿನ ಅಂದಾಜಿನಂತೆ 13 ಸಾವಿರ ಕೋಟಿ ರೂಪಾಯಿ ಆಗಬಹುದು. ಬೆಂಗಳೂರು ನಗರದ ಪ್ರಸ್ತುತ ಜನಸಂಖ್ಯೆ 136 ಲಕ್ಷ ಮುಂದಿನ 20 ರಿಂದ 25 ವರ್ಷಗಳಲ್ಲಿ ಇದು 300 ಲಕ್ಷ ದಾಟಬಹುದೆಂದು ನಿರೀಕ್ಷಿಸಲಾಗಿದ್ದು, ಹಾಗಾಗಿ ಕುಡಿಯುವ ನೀರಿಗೆ ನಗರದ ಜನತೆ ಹಾಹಾಕಾರ ಪಡುವ ದಿನ ದೂರವಿರುವುದಿಲ್ಲ.
ಯೋಜನೆ ಮುಗಿಸುವ ಆಶ್ವಾಸನೆ
ಈ ಯೋಜನೆಗೆ ಅವಶ್ಯವಿರುವ ಅನುಮತಿಗಳನ್ನು ತ್ವರಿತಗತಿಯಲ್ಲಿ ಪಡೆದುಕೊಳ್ಳಲು ಮತ್ತು ಕಾನೂನಿನ ತೊಡಕುಗಳನ್ನು ಸಮರ್ಥವಾಗಿ ನಿವಾರಿಸಿಕೊಳ್ಳಲು ಹಾಗೂ ತಾಂತ್ರಿಕ ಸಲಹೆ ಪಡೆದು ಬೆಂಗಳೂರು ನಗರ ಜನತೆಯ ಹಿತದೃಷ್ಟಿಯಿಂದ ಮತ್ತು ರಾಜ್ಯಕ್ಕೆ ಹಂಚಿಕೆ ಮಾಡಲಾದ ನೀರಿನ ಪರಿಮಿತಿಯಲ್ಲಿ ಯೋಜನೆಯ ವಿನ್ಯಾಸವನ್ನು ಮರುಪರಿಶೀಲನೆಗೆ ಒಳಪಡಿಸಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಈ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲಾಗುವುದು. ಎಂದು ಜೆಡಿಎಸ್ ನಾಯಕರು ತಮ್ಮ ಪ್ರಣಾಳಿಕೆಯಲ್ಲಿ ಆಶ್ವಾಸನೆ ನೀಡಿದ್ದಾರೆ.

ಈ ಮೂಲಕ ಬೆಂಗಳೂರಿಗರ ಮನ ಗೆಲ್ಲಲು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ವಿಶಿಷ್ಟ ಯೋಜನೆಯನ್ನು ಮೀಸಲಾಗಿಟ್ಟಿದೆ. ಹಲವು ದಿನಗಳಿಂದ ಮೇಕೆದಾಟು ಯೋಜನೆಗೆ ಬೆಂಗಳೂರಿಗರು ಕಾಯುತ್ತಿದ್ದಾರೆ. ಅದರಲ್ಲೂ ಬೆಂಗಳೂರು ಹೊರವಲಯದಲ್ಲಿ ಜನರು ನೀರಿನ ಸಮಸ್ಯೆಯಿಂದ ಒದ್ದಾಡುತ್ತಿದ್ದು, ಮೇಕೆದಾಟು ಯೋಜನೆಯಿಂದ ಈ ಸಮಸ್ಯೆಗೆ ಮುಕ್ತಿ ಸಿಗುವ ನಿರೀಕ್ಷೆ ಇದೆ. ಇದೀಗ ಇದೇ ವಿಚಾರವನ್ನು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಪ್ರಸ್ತಾಪ ಮಾಡಿದೆ.
ಒಟ್ಟಾರೆ ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗ ಜೆಡಿಎಸ್ ಪ್ರಣಾಳಿಕೆ ರಿಲೀಸ್ ಮಾಡಿದೆ. ಈ ಮೂಲಕ JDS ಅಧಿಕಾರಕ್ಕೆ ಬಂದರೆ ರೈತಪರ ಯೋಜನೆಗಳ ಜೊತೆಗೆ ನಗರಗಳ ಅಭಿವೃದ್ಧಿಗೂ ಒತ್ತು ನೀಡುತ್ತದೆ ಎಂಬ ಆಶ್ವಾಸನೆ ನೀಡಿದೆ. ಆದರೆ ಈ ಆಶ್ವಾಸನೆಗಳು ಮತದಾರ ಪ್ರಭುವಿನ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎಂಬುದನ್ನ ಕಾದು ನೋಡಬೇಕಿದೆ. ಮೇ 10ರಂದು ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ.












Click it and Unblock the Notifications