ಪ್ರಿಯಾಂಕ್ ಖರ್ಗೆಯವರೇ ಜೈವಿಕ ನಾವೀನ್ಯತಾ ಕೇಂದ್ರದ ಕಡೆ ನೋಡ್ರೀ
ಬೆಂಗಳೂರಿನಲ್ಲಿ ಜೈವಿಕ ನಾವೀನ್ಯತಾ ಕೇಂದ್ರ ಎಂಬುದೊಂದಿದೆ. ಅಲ್ಲಿ ಅಕ್ರಮ ನೇಮಕಾತಿ ಆರೋಪ ಕೇಳಿಬರುತ್ತಿದೆ ಎಂಬ ಬಗ್ಗೆ ಆ ಕೇಂದ್ರದ ಜವಾಬ್ದಾರಿ ಬರುವ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಯಾವಾಗ ನೆನಪಾಗುತ್ತದೋ ಏನೋ?
ಬೆಂಗಳೂರು, ಮಾರ್ಚ್ 24: ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮತ್ತೊಮ್ಮೆ ಈ ಬಗ್ಗೆ ಗಮನಕ್ಕೆ ತರಬೇಕಿದೆ. ಏಕೆಂದರೆ, ಅವರಿಗ್ಯಾಕೋ ತಮ್ಮ ಹತೋಟಿಯ ಇಲಾಖೆಯಲ್ಲಿನ ಅವ್ಯವಸ್ಥೆ ಸರಿ ಮಾಡಬೇಕೆಂಬ ಇರಾದೆ ಇದೆಯೇ ಎಂಬ ಪ್ರಶ್ನೆ ಮೂಡುವಂತಹ ಪರಿಸ್ಥಿತಿ ಇದು. ನೋಡೋಣ ಈ ಬಾರಿಯಾದರೂ ಕ್ರಮ ತೆಗೆದುಕೊಳ್ಳುತ್ತಾರೋನೋ?
ಇದೇನು ಸಮಸ್ಯೆ ಅಂದರೆ, ಬೆಂಗಳೂರಿನಲ್ಲಿ ಜೈವಿಕ ನಾವೀನ್ಯತೆ ಕೇಂದ್ರ ಎಂಬುದೊಂದಿದೆ. ರಾಜ್ಯ ಸರಕಾರದ ಅಡಿಯಲ್ಲೇ ಅದು ಕೆಲಸ ಮಾಡುತ್ತದೆ. ಅದರ ಹೊಣೆ ಪ್ರಿಯಾಂಕ್ ಖರ್ಗೆ ಸಚಿವರಾಗಿರುವ ಇಲಾಖೆಗೆ ಬರುತ್ತದೆ. ಆ ಕೇಂದ್ರದಲ್ಲಿ ಕನ್ನಡಿಗರಿಗೆ ಅವಕಾಶ ಸಿಕ್ಕಿಲ್ಲ ಎಂಬುದನ್ನು ಈ ಹಿಂದೆ ಕೂಡ ಸುದ್ದಿ ಮಾಡಲಾಗಿತ್ತು. ಆದರೆ ಯಾವ ಫಲಿತವೂ ಕಾಣಲಿಲ್ಲ.

ಈಚೆಗೆ ಕರ್ನಾಟಕ ರಕ್ಷಣಾ ವೇದಿಕೆಯ ಬೊಮ್ಮನಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ್ ಅವರು ಜೈವಿಕ ನಾವೀನ್ಯತಾ ಕೇಂದ್ರಕ್ಕೆ ಭೇಟಿ ನೀಡಿ, ವ್ಯವಸ್ಥಾಪಕರಾದ ಡಾ.ಜಿತೇಂದ್ರ ಕುಮಾರ್ ಅವರ ಬಳಿ ಅಲ್ಲಿರುವ ಕನ್ನಡಿಗ ಉದ್ಯೋಗಿಗಳ ಮಾಹಿತಿ ಕೇಳಿದ್ದಾರೆ. ಆದರೆ ಅದಕ್ಕೆ ಸರಿಯಾದ ವಿವರ ಸಿಕ್ಕಿಲ್ಲ.[ಜೈವಿಕ ನಾವೀನ್ಯತೆ ಕೇಂದ್ರದಲ್ಲಿ ಕನ್ನಡಿಗರ ಕಡೆಗಣನೆ, ನೇಮಕಾತಿ ಅಕ್ರಮ!]

ಕೇಂದ್ರದಲ್ಲಿ ನಡೆದಿರುವ ನೇಮಕಾತಿ ಅಕ್ರಮದ ಬಗ್ಗೆ ವಿಚಾರಿಸಿದಾಗ ಕೂಡ ಸರಿಯಾದ ಮಾಹಿತಿ ದೊರೆತಿಲ್ಲ. ಈ ಕೇಂದ್ರದಲ್ಲಿನ ಅವ್ಯವಸ್ಥೆ ಹಾಗೂ ಭ್ರಷ್ಟಾಚಾರದ ಬಗ್ಗೆ ಕನ್ನಡ ರಕ್ಷಣಾ ವೇದಿಕೆಯಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರ ಗಮನಕ್ಕೆ ಬಹಳ ಹಿಂದೆಯೇ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಮತ್ತೊಮ್ಮೆ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಂಜುನಾಥ್ ತುರ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications