Krishna Janmashtami 2023: ಬೆಂಗಳೂರಿನ ಈ ಒಂದೇ ಮನೆಯಲ್ಲಿ 1,500 ಶ್ರೀಕೃಷ್ಣ ಮೂರ್ತಿಗಳ ಪ್ರತಿಷ್ಠಾಪನೆಬೆಂಗಳೂರಿನ ಒಂದೇ ಮನೆಯಲ
ಬೆಂಗಳೂರು, ಸೆಪ್ಟೆಂಬರ್ 07: ನಾಡಿನೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹರೇ ಕೃಷ್ಣ ನಾಮಸ್ಮರಣೆ ಮುಗಿಲುಮುಟ್ಟಿತ್ತು. ಬೆಣ್ಣೆ ಕಳ್ಳ, ಗೋಪಾಲ ಕೃಷ್ಣನ ಅಂದ-ಚಂದವಾಗಿ ಅಲಂಕರಿಸಿದ ಭಕ್ತರು ಮುಕುಂದನ ದರ್ಶನ ಪಡೆದು ಪುನೀತರಾದರು.
ಜಗತ್ತಿಗೆ ಗೀತೆಯ ಸಾರವನ್ನು ಬೋಧಿಸಿದ ಶ್ರೀಕೃಷ್ಣನ ಜನ್ಮಾಷ್ಟಮಿಯನ್ನು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು. ಬೆಂಗಳೂರಿನ ಸಹಕಾರನಗರದ ನಿವಾಸಿಯಾಗಿರುವ ತಿರುಮಲಾಚಾರ್ ಎನ್ನುವವರು ಸುಮಾರು 1 ಸಾವಿರದ 500 ಬೊಂಬೆಗಳನ್ನು ಕೂರಿಸುವ ಮೂಲಕ ವಿಶೇಷವಾಗಿ ಅಷ್ಟಮಿ ಹಬ್ಬವನ್ನು ಆಚರಿಸಿದರು. ಒಂದೊಂದು ಬೊಂಬೆಯೂ ಒಂದೊಂದು ಕತೆಯನ್ನ ಸಾರಿ ಹೇಳುತ್ತಿದ್ದು, ಒಂದಕ್ಕಿಂತ ಒಂದು ಕಲರ್ ಫುಲ್ ಆಗಿ ಸುಂದರವಾಗಿದೆ.

ಹಲವು ವರ್ಷಗಳಿಂದ ಕೃಷ್ಣನ ಬೊಂಬೆಗಳನ್ನು ಕೂರಿಸುತ್ತಾ ಬಂದಿರುವ ಇವರು, ಕೃಷ್ಣನ ವಿವಿಧ ಅವತಾರಗಳನ್ನ ಬಿಂಬಿಸುವ ಬೊಂಬೆಗಳನ್ನು ಜೋಡಿಸಿ ಪೂಜೆ ಸಲ್ಲಿಸೋ ಮೂಲಕ ಹಬ್ಬವನ್ನ ಸಂಭ್ರಮಿಸಿದರು. ದಸರಾಗೆ ಬೊಂಬೆ ಕೂರಿಸುವ ರೀತಿಯೇ ನನಗೆ ಕೃಷ್ಣ ಪ್ರಿಯವಾಗಿ ಬಿಟ್ಟಿದ್ದಾನೆ. ಹಾಗಾಗಿ ಕೃಷ್ಣನನ್ನು ಈ ರೀತಿ ರೂಪ ನೀಡಿ ಆರಾಧಿಸ್ತಿದ್ದೇನೆ ಎಂದು ಸಂತಸ ಹಂಚಿಕೊಂಡರು.
ಸುಮಾರು 80 ವರ್ಷದ ಶ್ರೀನಿವಾಸ್ ತಿರುಮಲಾಚಾರ್ ಸ್ವತಃ ತಮ್ಮ ಮನೆಯಲ್ಲಿ ಸಾವಿರಕ್ಕೂ ಹೆಚ್ಚು ಕೃಷ್ಣನ ಮೂರ್ತಿಗಳನ್ನು ಕೂರಿಸಿ ವಿಜೃಂಭಣೆಯಿಂದ ಜನ್ಮಾಷ್ಟಮಿಯನ್ನು ಆಚರಣೆ ಮಾಡುತ್ತಾರೆ. ಇನ್ನು ಕೃಷ್ಣನ ಹುಟ್ಟಿನಿಂದ ಹಿಡಿದು, ಕೃಷ್ಣ ಕದ್ದು ಬೆಣ್ಣೆ ತಿನ್ನುವುದು, ಯಶೋಧೆ ಅವನನ್ನು ಶಿಕ್ಷಿಸುವುದು, ಸುಧಾಮ ಕೃಷ್ಣನಿಗೆ ಅವಲಕ್ಕಿ ನೀಡುವುದು, ಕೃಷ್ಣ ಹಾಗೂ ಬಲರಾಮರ ತುಂಟಾಟಗಳು, ಕೃಷ್ಣ ರಾಕ್ಷಸರನ್ನು ಸಂಹರಿಸುವುದು, ರಾಧಾಕೃಷ್ಣರ ಲೀಲೋತ್ಸವ ಹೀಗೆ ಹಲವು ರೀತಿಯ ಕೃಷ್ಣನ ತುಂಟಾಟಗಳನ್ನು ಒಂದೇ ಕಡೆ ಇರಿಸಿ ಎಲ್ಲರಿಗೂ ಕೂಡ ಕೃಷ್ಣನೇ ಸರ್ವಸ್ವ ಎಂಬುದನ್ನು ಸಾರಿದರು.

ಒಟ್ಟಾರೆ ಶ್ರೀಕೃಷ್ಣನ ಜನ್ಮದಿನವನ್ನು ಸಿಲಿಕಾನ್ ಸಿಟಿ ಜನರು ಸಂಭ್ರಮದಿಂದ ಆಚರಿಸುವ ಮೂಲಕ ಕೃಷ್ಣನ ನಾಮ ಸ್ಮರಣೆ ಮಾಡಿ ಪುನೀತರಾದರು. ಶ್ರಾವಣಮಾಸದ ಅಷ್ಟಮಿಯಂದು ಬರುವ ಈ ಹಬ್ಬಕ್ಕೆ ವಿವಿಧ ರೂಪದಲ್ಲಿ ಕೃಷ್ಣನನ್ನು ಆರಾಧಿಸೋ ಮೂಲಕ ಇಷ್ಟಾರ್ಥಗಳನ್ನು ಈಡೇರಿಸುವಂತೆ ಜಗದೋದ್ಧಾರನ ಬಳಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.












Click it and Unblock the Notifications