ದೊಡ್ಡಬಳ್ಳಾಪುರ: ರಾಜ್ಯ ಹೆದ್ದಾರಿಯಲ್ಲಿ ಇನ್ನೋವಾ ಕಾರು-ಲಾರಿ ನಡುವೆ ಭೀಕರ ಅಪಘಾತ: ಐವರು ಸಾವು
Lorry-Car Accident: ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಳಿ ಬಣ್ಣದ ಇನ್ನೋವಾ ಕಾರು ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿ ಬಳಿ ಗೌರಿಬಿದನೂರು ರಾಜ್ಯ ಹೆದ್ದಾರಿಯಲ್ಲಿ ಇಂದು (ಜುಲೈ 1) ನಡೆದಿದೆ.
ಕರೇನಹಳ್ಳಿ ನಿವಾಸಿಗಳಾದ ಡಿ.ಎಂ. ಈಶ್ವರಪ್ಪ, ಪುರುಷೋತ್ತಮ(75), ಕಾಳಪ್ಪ(65), ನಾರಾಯಣಪ್ಪ(70) ಮತ್ತು ಕಾರು ಚಾಲಕ ಕಾರ್ತಿಕ್ ಮೃತಪಟ್ಟವರು.

ಇಂದು ಬೆಳಗ್ಗೆ ಇನ್ನೋವಾ ಕಾರಿನಲ್ಲಿ 8 ಜನ ದೊಡ್ಡಬಳ್ಳಾಪುರದಿಂದ ಗೌರಿಬಿದನೂರು ಬಳಿಯ ಮಂಚೇನಹಳ್ಳಿಯ ಭೀಮೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಲಾರಿ ಓವರ್ ಟೇಕ್ ಮಾಡಲು ಹೋಗಿ ಇನ್ನೋವಾ ಕಾರು ಪಲ್ಟಿ ಆಗಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ.
ಘಟನೆಯಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡ ಮೂವವರನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಗಮಿಸಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೂನ್ 30ರ ಸೋಮವಾರ ಟೆಂಪೋಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಘಟನೆಯಲ್ಲಿ ಟೆಂಪೋದಲ್ಲಿದ್ದ ಮೂವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಅನ್ನಮಯ್ಯ ಜಿಲ್ಲೆಯ ಕುರಬಳಕೋಟ ಮಂಡಲದ ಚೆನ್ನಾಮರ್ರಿ ಮಿಟ್ಟ ಬಳಿ ನಡೆದಿದೆ.
ಮೃತರನ್ನು ಮೇಘರಾಜ್ (17), ಚರಣ್(17) ಮತ್ತು ಶ್ರಾವಣಿ(28) ಎಂದು ಗುರುತಿಸಲಾಗಿದ್ದು, ಇವರು ಬಾಗೇಪಲ್ಲಿ ನಿವಾಸಿಗಳಾಗಿದ್ದಾರೆ ಎಂದು ತಿಳಿದುಬಂದಿದೆ.
ಲಾರಿ ಡಿಕ್ಕಿ ಹೊಡೆದ ವೇಳೆ ಟೆಂಪೋ ಟ್ರಾವೆಲರ್ ಮದನಪಲ್ಲಿಯಿಂದ ಬಾಗೇಪಲ್ಲಿ ಕಡೆಗೆ ಹೋಗುತ್ತಿತ್ತು. ಡಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು ಎಂದು ಪೋಲಿಸರು ತಿಳಿಸಿದರು. ಟೆಂಪೋದಲ್ಲಿದ್ದವರು ತಿರುಪತಿ ದರ್ಶನ ಮುಗಿಸಿ ಊರಿಗೆ ವಾಪಸ್ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.
ಗಾಯಾಳುಗಳನ್ನು ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅಪಘಾತದ ನಂತರ ಲಾರಿ ಸಹಿತ ಚಾಲಕ ಸ್ಥಳದಿಂದ ಪರಾರಿ ಆಗಿದ್ದು, ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಯು ಪ್ರಗತಿಯಲ್ಲಿದೆ ಎಂದು ಪೋಲಿಸ್ ಅಧಿಕಾರಿ ಸತ್ಯನಾರಾಯಣ ತಿಳಿಸಿದರು.
ಆಂಧ್ರಪ್ರದೇಶದ ಸಚಿವ ಮಂಡಿಪಲ್ಲಿ ರಾಮಪ್ರಸಾದ್ ರೆಡ್ಡಿಯವರು ಭೀಕರ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಳುಗಳ ಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡ ಅವರು ಅಗತ್ಯ ವೈದ್ಯಕೀಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭೀಕರ ಅಪಘಾತ: ಇತ್ತೀಚೆಗಷ್ಟೇ ರಾಷ್ಟ್ರೀಯ ಹೆದ್ದಾರಿ ಹಿರೀಸಾವೆ-ಮೇಟಿಕರೆ ವೃತ್ತದಲ್ಲಿ ಬೈಕ್-ಸ್ಕೂಟರ್ ಡಿಕ್ಕಿ ಹೊಡೆದುಕೊಂಡಿದ್ದು, ಅಪಘಾತದಲ್ಲಿ ಇಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದರು.
ಹೋಬಳಿಯ ಬಾಳಗಂಚಿ ನಿವಾಸಿ ಚಂದ್ರೇಗೌಡ (50) ಮತ್ತು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕು ವಡಕೇಘಟ್ಟ ಗ್ರಾಮದ ಲಕ್ಷ್ಮಮ್ಮ (55) ಮೃತಪಟ್ಟವರು. ಚಂದ್ರೇಗೌಡ ಅವರು ಪತ್ನಿ ಸವಿತಾ ಹಾಗೂ ಅತ್ತಿಗೆ ಲಕ್ಷ್ಮಮ್ಮ ಜೊತೆಗೆ ಹಿರೀಸಾವೆಯಲ್ಲಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಸ್ಕೂಟರ್‌ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು.
ಅಪಘಾತದಲ್ಲಿ ಸವಿತಾ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿತ್ತು. ಹಾಸನದ ಕಡೆಯಿಂದ ಬೆಂಗಳೂರಿಗೆ ಚಲಿಸುತ್ತಿದ್ದ ಬೈಕ್‌ನಲ್ಲಿ ಮಂಜುನಾಥ್ ದಂಪತಿಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಪ್ರಕರಣ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.












Click it and Unblock the Notifications